ರಾಜಕೀಯ ಮೇಲಾಟ: ಜನರ ಪರದಾಟ
ಜನಪ್ರತಿನಿಧಿಗಳಲ್ಲಿ ರಾಜಕೀಯ ಮೇಲಾಟದ ಗುಂಗು ತಲೆಗೇರಿದರೆ ಸಾರ್ವಜನಿಕರ ಹಿತ ಕಾಲಕಸವಾಗುತ್ತದೆ ಎಂಬುದಕ್ಕೆ ಶನಿವಾರ ನಡೆಯಬೇಕಿದ್ದ ತಾಲೂಕು ಪಂಚಾಯತಿ ಸಾಮಾನ್ಯ ಸಭೆ ಮುಂದೂಡಲ್ಪಟ್ಟಿದ್ದು ಅತ್ಯುತ್ತಮ ನಿರ್ದಶನ.
ತಾಲೂಕಿನ ಜನತೆಗೆ ಡೆಂಘೀ ಮಹಾಮಾರಿಯಾಗಿ ಕಾಡುತ್ತಿದೆ. ನಿತ್ಯವೂ ವಿವಿಧ ಗ್ರಾಮಗಳ ನಾಲ್ಕಾರು ಜನರು ಡೆಂಘೀ ಜ್ವರದಿಂದ ಆಸ್ಪತ್ರೆಗಳಿಗೆ ದಾಖಲಾಗುತ್ತಲೇ ಸಾಗಿದ್ದಾರೆ. ಈ ಸಂದಿಗ್ಧ ಪರಿಸ್ಥಿತಿಯಿಂದ ಜನತೆಯನ್ನು ಹೊರ ತರುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ವಿಸ್ತೃತವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದ್ದ ಸಭೆಯನ್ನು ಮುಂದೂಡುವ ಮೂಲಕ ಜನಪ್ರತಿನಿಧಿಗಳು ರಾಜಕೀಯ ಮೇಲಾಟ ಪ್ರದರ್ಶಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದೆ.
ಡೆಂಘೀದ್ದೇ ಚರ್ಚೆ: ಶನಿವಾರ ಹಮ್ಮಿಕೊಳ್ಳಲಾಗಿದ್ದ ತಾಪಂ ಸಾಮಾನ್ಯ ಸಭೆಯಲ್ಲಿ ಡೆಂಘೀ ಜ್ವರ ಉಲ್ಬಣಗೊಳ್ಳದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದಕ್ಕೆ ಆದ್ಯತೆ ನೀಡಲಾಗಿತ್ತು ಎಂಬುದು ವಿಶೇಷ. ಅಲ್ಲದೇ, ಕುಡಿಯುವ ನೀರು, ಬೀದಿ ದೀಪ ಸೇರಿದಂತೆ ಅವಶ್ಯಕ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ಸರಿಯಾಗಿ ಪೂರೈಸುವುದನ್ನು ವಿಷಯಪಟ್ಟಿಯಲ್ಲಿ ಸೇರಿಸಲಾಗಿತ್ತು.
ತದ್ವಿರುದ್ಧ ಹೇಳಿಕೆ: ಸಾಮಾನ್ಯ ಸಭೆ ಮುಂದೂಡಿರುವ ಬಗ್ಗೆ ಕನ್ನಡಪ್ರಭ ತಾಪಂ ಉಪಾಧ್ಯಕ್ಷರು ಆಗಿರುವ ಪ್ರಭಾರಿ ಅಧ್ಯಕ್ಷ ಬಸವರಾಜ ಕಳಸೂರ ಹಾಗೂ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ದೇಶಪಾಂಡೆ ಅವರನ್ನು ಸಂಪರ್ಕಿಸಿದಾಗ ಅವರಿಬ್ಬರೂ ತದ್ವಿರುದ್ಧ ಹೇಳಿಕೆ ನೀಡಿದ್ದು, ಸಭೆ ಮುಂದೂಡಿರುವುದರ ಹಿಂದೆ ರಾಜಕೀಯ ಸೊಂಕು ಅಡಗಿದೆ ಎಂಬುದಕ್ಕೆ ಮೇಲ್ನೋಟಕ್ಕೆ ಸಾಬೀತು ಆಗುತ್ತದೆ.
ಪ್ರಭಾರಿ ಅಧ್ಯಕ್ಷರು ಹೇಳಿದ್ದೇನು: ತಾಪಂ ಸಾಮಾನ್ಯ ಸಭೆಗೆ ಎಲ್ಲ ಗ್ರಾಮಗಳ ಪಿಡಿಓಗಳು ಕಡ್ಡಾಯವಾಗಿ ಹಾಜರಾಗುವಂತೆ ಹಿಂದೆ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಆದಾಗ್ಯೂ, ಪಿಡಿಓಗಳು ಒಂದಿಲ್ಲೊಂದು ಕುಂಟು ನೆಪವೊಡ್ಡುತ್ತ ಸಭೆಗಳಿಗೆ ಹಾಜರಾಗುತ್ತಿರಲಿಲ್ಲ. ಆದ್ದರಿಂದ ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಉದ್ದೇಶದಿಂದ ಶನಿವಾರ (ಜೂ. 29)ರಂದು ನಡೆಯಬೇಕಿದ್ದ ಸಭೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಲಾಗಿದೆ ಎಂದರು. ತಾಲೂಕಿನಲ್ಲಿ ಮಹಾಮಾರಿ ಡೆಂಘೀ ಜನತೆಯನ್ನು ಬೆಂಬಿಡದೇ ಕಾಡುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ವಿಸ್ತೃತವಾಗಿ ಚರ್ಚಿಸಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕಾಗಿತ್ತು. ಆದರೆ, ಡೆಂಘೀ ಜ್ವರಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲು ಉಸ್ತುವಾರಿ ಸಚಿವ ಪ್ರಕಾಶ ಹುಕ್ಕೇರಿ ಯಾವುದೇ ಸಂದರ್ಭದಲ್ಲಿ ದಿಢೀರ್ ಭೇಟಿ ನೀಡಬಹುದು. ಆದ್ದರಿಂದ ಯಾವೊಬ್ಬ ಪಿಡಿಓಗಳು ಹೆಡ್ ಕ್ವಾಟರ್ ಬಿಟ್ಟು ಬರದಂತೆ ಶುಕ್ರವಾರ ಸಂಜೆ 5.30ರ ಹೊತ್ತಿಗೆ ಜಿಪಂ ಕಾರ್ಯದರ್ಶಿ ಎಲ್ಲ ಪಿಡಿಓಗಳಿಗೆ ಮೌಖಿಕ ಆದೇಶ ನೀಡಿದ್ದಾರೆ ಎಂದರು. ಅಲ್ಲದೇ, ಕೆಲ ಅಧಿಕಾರಿಗಳು ಏನೆಲ್ಲ ನೆಪಮಾಡಿಕೊಂಡು ಸಾಮಾನ್ಯ ಸಭೆಗೆ ಗೈರು ಹಾಜರಾಗುತ್ತ ಬಂದಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಅಧಿಕಾರಿಗಳ ಬಗ್ಗೆ ತಮ್ಮಗಿದ್ದ ಅಸಮಾಧಾನ ಹೊರ ಹಾಕಿದ ಕಳಸೂರ, ತಾಪಂ ಸಾಮಾನ್ಯ ಸಭೆಯಲ್ಲಿ ಒಮ್ಮೆಯೂ ಕೆಎಸ್ಆರ್ಟಿ ಹಿರಿಯ ಅಧಿಕಾರಿಗಳು ಭಾಗವಹಿಸಿಲ್ಲ. ಇಂತಹ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲೇಬೇಕು ಎಂದು ಸಭೆಗೆ ಪಾಲ್ಗೊಳ್ಳಲು ಬಂದಿದ್ದ 3-4 ಸದಸ್ಯರು ಪಟ್ಟು ಹಿಡಿದಿದ್ದರಿಂದ ಅನಿವಾರ್ಯವಾಗಿ ಸಭೆ ಮುಂದೂಡುವ ನಿರ್ಣಯ ಕೈಗೊಳ್ಳಬೇಕಾಯಿತು ಎಂದು ಸಮಜಾಯಿಷಿ ನೀಡಿದರು. ಇದನ್ನು ಹೊರತುಪಡಿಸಿದರೆ ಸಭೆ ಮುಂಡೂವುದರಲ್ಲಿ ಯಾವುದೇ ಬೇರೆ ಉದ್ದೇಶವಿಲ್ಲ ಎಂದು ಸಮಜಾಯಿಷಿ ನೀಡಿದರು.
ಅಧಿಕಾರಿ ಹೇಳಿದ್ದೇನು: ಈ ಕುರಿತಂತೆ ಪ್ರಭಾರಿ ಅಧಿಕಾರಿ ಬಿ.ಆರ್. ದೇಶಪಾಂಡೆ ಅವರನ್ನು ಸಂಪರ್ಕಿಸಿದಾಗ, 7-8 ಸದಸ್ಯರು ಮಾತ್ರ ಪಾಲ್ಗೊಂಡಿದ್ದರು. ಆದ್ದರಿಂದ ಕೋರಂ ಅಭಾವದಿಂದಾಗಿ ತಾಪಂ ಸಾಮಾನ್ಯ ಸಭೆಯನ್ನು ಅನಿವಾರ್ಯವಾಗಿ ಮುಂದೂಡಲಾಯಿತು. ಆಗಸ್ಟ್ 10ರಂದು ನೂತನ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯಲಿದ್ದು, ನಂತರ ಮತ್ತೆ ಸಭೆಗಳು ಎಂದಿನಂತೆ ನಡೆಯಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಹಾಮಾರಿ ಡೆಂಘೀ ಜ್ವರದಿಂದ ತಾಲೂಕಿನ ಜನತೆ ಬೇಸತ್ತು ಹೋಗಿದ್ದು, ತಾಪಂ ಸಭೆಯಲ್ಲಿ ಈ ಕುರಿತಂತೆ ಸೂಕ್ತ ನಿಲುವು ಕೈಗೊಂಡು ಶ್ರೀಸಾಮಾನ್ಯರು ನೆಮ್ಮದಿ ಬದುಕು ನಡೆಸಲು ಸಾಮಾನ್ಯ ಸಭೆ ಸಾಕಷ್ಟು ಅನುಕೂಲವಾಗಬಹುದೆಂಬ ಜನತೆಯ ನಿರೀಕ್ಷೆ ಹುಸಿಯಾಗಿದ್ದಂತೂ ಸುಳ್ಳಲ್ಲ. ಜನರಿಗೆ ಅವಶ್ಯಕ ಸೌಲಭ್ಯಗಳನ್ನು ಒದಗಿಸಿಕೊಡಲು ಕಟಿಬದ್ಧವಾಗಬೇಕಿದ್ದ ತಾಪಂ, ಇದೀಗ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗುತ್ತ ಸಾಗಿದ್ದು, ನಿಜಕ್ಕೂ ವಿಷರ್ಯಾಸದ ಸಂಗತಿಯೇ ಸರಿ.
ಕೋರಂ ಅಭಾವ...
ಮಾರ್ಚ್ 13ರಂದು ಜರುಗಿದ್ದ ತಾಪಂ ಸಾಮಾನ್ಯ ಸಭೆ ನಂತರ ಜೂನ್ 10ರಂದು ಮತ್ತೆ ಕರೆಯಲಾಗಿತ್ತಾದರೂ ಕೋರಂ ಅಭಾವದಿಂದಾಗಿ ಮುಂದೂಡಿಲ್ಪಟ್ಟಿತ್ತು. ಡೆಂಘೀ ಬಾಧೆ ತಾಲೂಕು ಮಾತ್ರವಲ್ಲದೆ ಇಡೀ ಜಿಲ್ಲೆಗೆ ವ್ಯಾಪಿಸಿಕೊಂಡು ಇದನ್ನು ನಿಯಂತ್ರಿಸುವಲ್ಲಿ ಸ್ಥಳೀಯ ಸಂಸ್ಥೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರತೊಡಗಿದ್ದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಮತ್ತೆ ಶನಿವಾರ ಸಭೆ ಆಯೋಜಿಸಿದ್ದರು. ಆದರೆ, ಜನಪ್ರತಿನಿಧಿಗಳ ಗೈರು ಹಾಜರಿಯಿಂದಾಗಿ ಸಭೆ ಮತ್ತೆ ಮುಂದೂಡಲ್ಪಟ್ಟಿದ್ದು, ಜನತೆಯಲ್ಲಿ ಸ್ಥಳೀಯ ಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳ ಮೇಲಿದ್ದ ವಿಶ್ವಾಸವನ್ನು ಕಮ್ಮಿಯಾಗುವಂತೆ ಮಾಡಿದ್ದಂತೂ ಸತ್ಯ.
ರಾಜಿನಾಮೆ ನೀಡಿದ್ದರು
ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಹಾವೇರಿ ತಾಪಂನ ಆಡಳಿತ ಚುಕ್ಕಾಣಿ ಕೆಜೆಪಿ ಕೈಯಲ್ಲಿತ್ತು. ಅಧ್ಯಕ್ಷರಾಗಿದ್ದ ಮೆಹರುನ್ನಿಸಾ ಜಿಗಳೂರು ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕೆಜೆಪಿ ತೊರೆದು ಕಾಂಗ್ರೆಸ್ನ ಕೈ ಹಿಡಿಯಲು ಈ ಹಿಂದೆ ಯತ್ನಿಸಿದ್ದರು.
ನಂತರ ಮತ್ತೆ ಅವರ ಮನವೊಲಿಸಿ ಕೆಜೆಪಿಯಲ್ಲೇ ಇರುವಂತೆ ನೋಡಿಕೊಳ್ಳಲಾಗಿತ್ತು. ರಾಜ್ಯದ ಆಡಳಿತ ಚುಕ್ಕಾಣಿ ಕಾಂಗ್ರೆಸ್ನ ಕೈಯಲ್ಲಿರುವುದರಿಂದ ತಾಪಂನ ಆಡಳಿತ ನಿರ್ವಹಣೆಯಲ್ಲಿ ಕೆಜೆಪಿ, ಬಿಜೆಪಿ ಹಾಗೂ ಕಾಂಗ್ರೆಸ್ ಹಗ್ಗಜಗ್ಗಾಟದಲ್ಲಿ ತೊಡಗಿಸಿಕೊಂಡಿವೆ. ಇದರ ದುಷ್ಪರಿಣಾಮ ಜನತೆ ಮೇಲೆ ಬೀರುತ್ತಿದ್ದು, ನಿಜಕ್ಕೂ ವಿಷಾದನೀಯ ಸಂಗತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

