ಕೆಜೆಪಿಗೆ ಭರ್ಜರಿ ಬೆಂಬಲ
ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.3
ಹುಬ್ಬಳ್ಳಿ-ಧಾರವಾಡ, ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯಗಳಲ್ಲಿ ಜನರ ಬೆಂಬಲ ಅಭೂತಪೂರ್ವವಾಗಿದೆ. ಇದು ಕೆಜೆಪಿಗೆ ಉತ್ತಮ ಬುನಾದಿ ಒದಗಿಸುವುದರಲ್ಲಿ ಸಂದೇಹವೇ ಇಲ್ಲ. ರಾಜ್ಯದ 2,800ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಕೆಜೆಪಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದೆ ಎಂದು ಮಾಜಿ ಸಚಿವ ಸಿ.ಎಂ. ಉದಾಸಿ ತಿಳಿಸಿದರು.
ಭಾನುವಾರ ಕೆಜೆಪಿ ಅಭ್ಯರ್ಥಿಗಳ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ಚುನಾವಣೆ ಅನಿರೀಕ್ಷಿತವಾಗಿದೆ. ಇದರಿಂದಾಗಿ ಎಲ್ಲೆಡೆ ಅಭ್ಯರ್ಥಿಗಳನ್ನು ಹಾಕಲಾಗಿಲ್ಲ.
ಆದರೆ, ಕೇವಲ 3 ತಿಂಗಳ ಹಿಂದೆ ಹುಟ್ಟಿದ ಕೆಜೆಪಿಗೆ ಅಭೂತಪೂರ್ವವಾಗಿ ಜನತೆ ಬೆಂಬಲಿಸುತ್ತಿದೆ. ಕೆಜೆಪಿಗೆ ಬಿಎಸ್ವೈ ಅವರ ಸಾಧನೆಗಳೇ ಮೈಲುಗಲ್ಲುಗಳು. ಇವುಗಳ ಆಧಾರದ ಮೇಲೆ ಕೆಜೆಪಿ ಮತದಾರನಲ್ಲಿಗೆ ತೆರಳುತ್ತಿದೆ ಎಂದರು.
ರಾಜ್ಯದ 70 ಕಡೆಗಳಲ್ಲಿ ಒಳಚರಂಡಿ ಯೋಜನೆ ಅನುಷ್ಠಾನಗೊಳಿಸಿದ ಕೀರ್ತಿ ಬಿಎಸ್ವೈಗೆ ಸಲ್ಲುತ್ತದೆ. ಇದರೊಂದಿಗೆ ಕುಡಿಯುವ ನೀರಿನ ಯೋಜನೆಗಳನ್ನು ಜಾರಿಗೊಳಿಸಿ ಅವುಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಮೂಲಕ ಜನಪರ ನಿಲುವನ್ನು ಬಿಎಸ್ವೈ ತೋರ್ಪಡಿಸಿದ್ದಾರೆ.
ಕೆಜೆಪಿ ಅಧಿಕಾರಕ್ಕೆ: ಇಂಥ ನೂರಾರು ಕಾರ್ಯಕ್ರಮಗಳು ಬಿಎಸ್ವೈ ಅವರಿಂದಲೇ ಅನುಷ್ಠಾನಗೊಂಡಿರುವುದನ್ನು ಜನತೆ ಮರೆತಿಲ್ಲ. ಈಗಾಗಲೇ ಬದಲಾವಣೆ ಗಾಳಿ ಬಲವಾಗಿ ಬೀಸಿದ್ದು, ಬರುವ ದಿನಗಳಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ಕೆಜೆಪಿ ಅಧಿಕಾರ ವಹಿಸಿಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅತಿರೇಕದ ವಿಚಾರ: ನಗರೋತ್ಥಾನ ಯೋಜನೆಯಡಿ ರಾಜ್ಯಕ್ಕೆ ಒಂದೇ ಪ್ಯಾಕೇಜ್ ಮಾಡಿರುವುದು ಸರಿಯಲ್ಲ. ಇಡೀ ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಒಟ್ಟಾರೆ ರು. 65 ಕೋಟಿ ಮೀಸಲಿಟ್ಟಿದ್ದು, ಅದನ್ನು ಒಬ್ಬನೇ ಗುತ್ತಿಗೆದಾರನಿಗೆ ನೀಡುವುದರಿಂದ ಹಾಗೂ ಆ ಗುತ್ತಿಗೆದಾರ ಇಡೀ ಜಿಲ್ಲೆಯ ಕಾಮಗಾರಿ ನಿರ್ವಹಿಸಲಾಗದೇ ಪುನಃ ಸಣ್ಣ ಗುತ್ತಿಗೆದಾರನಿಗೆ ಹಂಚಿಕೆ ಮಾಡುವುದರಿಂದ ಭ್ರಷ್ಟಾಚಾರ ಹೆಚ್ಚುತ್ತದೆ.
ಈ ಕುರಿತಂತೆ ವಿಧಾನಸಭೆಯಲ್ಲಿ ಇಂಥ ವ್ಯವಸ್ಥೆ ಸರಿಯಲ್ಲ ಎಂದು ತಿಳಿಸಿದಾಗ್ಯೂ ಇದನ್ನೇ ಜಾರಿಗೊಳಿಸುತ್ತಿರುವುದು ಅತಿರೇಕದ ವಿಚಾರವಾಗಿದೆ ಎಂದು ದೂರಿದರು.
ಎಲ್ಲ ಕಡೆ ಸ್ಪರ್ಧೆಯಿಲ್ಲ: ಜಿಲ್ಲೆಯ ಸವಣೂರು ಹಾಗೂ ಬಂಕಾಪುರಗಳಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿಲ್ಲ ಹಾಗೂ ಶಿಗ್ಗಾಂವಿಯಲ್ಲಿಯೂ 23 ವಾರ್ಡ್ಗಳ ಪೈಕಿ 11 ವಾರ್ಡ್ಗಳಿಗೆ ಮಾತ್ರ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಉಳಿದಂತೆ ಜಿಲ್ಲೆಯ ಎಲ್ಲೆಡೆ ಕೆಜೆಪಿ ಅಧಿಕಾರಕ್ಕೆ ಬರಲಿದೆ ಎಂದರು.
ಈ ಸಂದರ್ಭ ಶಾಸಕ ನೆಹರು ಓಲೇಕಾರ, ವಕ್ತಾರ ಸುರೇಶ ಹೊಸಮನಿ, ವಿಜಯಕುಮಾರ ಚಿನ್ನಿಕಟ್ಟಿ ಇತರರು ಉಪಸ್ಥಿತರಿದ್ದರು.
ಹೇಳಿಕೆ ಮುನ್ನ ಆತ್ಮಾವಲೋಕನ ಅಗತ್ಯ
ಹಾನಗಲ್ಲಿನಲ್ಲಿ ಇತ್ತೀಚೆಗೆ ಬಿಜೆಪಿ ಒಡೆಯಲು ಉದಾಸಿ ಕಾರಣ ಎಂದಿದ್ದ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿಕೆ ಖಂಡಿಸಿರುವ ಮಾಜಿ ಸಚಿವ ಸಿ.ಎಂ. ಉದಾಸಿ, ಇಂಥ ಹೇಳಿಕೆ ಕೊಡುವ ಮುನ್ನ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದರು. ಕೇವಲ ಪಠ್ಯಕ್ರಮದ ತಿದ್ದುಪಡಿ ಮಾಡಿದ ಹಾಗೆ ನನ್ನ ಮೇಲೆ ಆರೋಪ ಮಾಡುವುದು ಸರಿಯಲ್ಲ. 40 ವರ್ಷಗಳಿಂದ ಬಿಜೆಪಿ ಕಟ್ಟಿ ಬೆಳೆಸಿದ ಬಿಎಸ್ವೈ ಸ್ಥಿತಿಯೇ ಹೀಗಾದ ಮೇಲೆ 9 ವರ್ಷಗಳಿಂದ ಇರುವ ನನ್ನ ಸ್ಥಿತಿ ನೆನೆದು ತಾವು ಬಿಎಸ್ವೈ ನಾಯಕತ್ವದಲ್ಲಿ ಹೊರ ಬಂದಿದ್ದೇನೆ. ಅಲ್ಲಿ (ಬಿಜೆಪಿ) ನನಗೆ ಹಾಗೂ ನನ್ನ ತಂಡಕ್ಕೆ ಸಾಕಷ್ಟು ಉಪಟಳ ಕೊಟ್ಟರು. ಅಲ್ಲದೆ ಜಿಲ್ಲಾಧ್ಯಕ್ಷ ಹಾಗೂ ಕೆಲ ಸಚಿವರು ನನ್ನನ್ನು ಉಪೇಕ್ಷೆ ಮಾಡಿದರು. ಬಿಎಸ್ವೈಗೆ ಕಿರುಕುಳ ಕೊಟ್ಟದ್ದು ಬೇಸರವೆನ್ನಿಸಿ ತಾವು ಹೊರಬಂದಿರುವುದಾಗಿ ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕರದು ಗರ್ಭಗುಡಿ ತಂಡ
ಬಿಜೆಪಿಯಲ್ಲಿನ ಗರ್ಭಗುಡಿ ತಂಡದಿಂದ ತಮಗೆ ಜಿಗುಪ್ಸೆ ಮೂಡಿದೆ. ಪ್ರತಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುವುದೇ ಅವರ ಕಾರ್ಯ ಎಂಬಂತಾಗಿತ್ತು. ಇದುವರೆಗೂ ನನ್ನ ಹಾಗೂ ನನ್ನ ಕಾರ್ಯಗಳ ಕುರಿತಂತೆ ಯಾರೊಬ್ಬರೂ ಬೆರಳು ಮಾಡಿಲ್ಲ. ಈಗ ಏಕೆ ಉದ್ಭವಿಸಿದೆ ಎಂದು ಪ್ರಶ್ನಿಸಿದ ಅವರು, ಬಿಜೆಪಿಯಲ್ಲಿ ಅಶಿಸ್ತು ಹುಟ್ಟು ಹಾಕಲಾಗುತ್ತಿದೆ ಎಂದರು. ಸದಾನಂದ ಗೌಡ ಹಾಗೂ ಶೆಟ್ಟರ್ ಅವರನ್ನು ಸಿಎಂ ಮಾಡಿದ್ದು ಬಿಜೆಪಿ ಮುಖಂಡರಲ್ಲ. ಅದಕ್ಕೆ ಬಿಜೆಪಿ ಹೈಕಮಾಂಡ್ ಕೂಡ ಒಪ್ಪಿರಲಿಲ್ಲ. ಆದರೆ, ಬಿಎಸ್ವೈ ಅವರೇ ಇಬ್ಬರಿಗೂ ಸ್ಥಾನ ಕಲ್ಪಿಸಿದ್ದರು. ಬಿಎಸ್ವೈ ಅವರನ್ನೇ ತುಳಿಯಲೆತ್ನಿಸಿದರು ಎಂದು ದೂರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

