ಹಾವೇರಿ

ರಾಷ್ಟ್ರೀಯ ಪಕ್ಷಗಳ ಬಣ್ಣ ಬಯಲು

Published On :

ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮಾ.4
ರಾಜಕೀಯವಾಗಿ ಜೆಡಿಎಸ್‌ನ್ನು ಮುಗಿಸುವ ವಿಪಕ್ಷಗಳ ಹುನ್ನಾರಕ್ಕೆ ತೆರೆ ಬೀಳಲಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಬಳಿಕ ರಾಷ್ಟ್ರೀಯ ಪಕ್ಷಗಳ ನಿಜ ಬಣ್ಣ ಬಯಲಾಗಲಿದೆ ಎಂದು ಜೆಡಿಎಸ್ ಮುಖಂಡ ಮಲ್ಲಿಕಾರ್ಜುನ ಬೇವಿನಮರದ ಹೇಳಿದರು.
ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ಸಂದರ್ಭ ಮಾತನಾಡಿದರು.
ಗ್ರಾಮ ವಾಸ್ತವ್ಯದ ಮೂಲಕ ಆಡಳಿತವನ್ನು ಸಾರ್ವಜನಿಕರ ಮನೆ ಬಾಗಿಲಿಗೆ ಕೊಂಡೊಯ್ದ ಕೀರ್ತಿ ಜೆಡಿಎಸ್ ಪಕ್ಷಕ್ಕೆ ಸಲ್ಲುತ್ತದೆ. ಮುಖ್ಯಮಂತ್ರಿಯಾಗಿ ಕುಮಾರಸ್ವಾಮಿ 20 ತಿಂಗಳಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮುಂದುವರಿಸಿದೆ ಎಂದರು.
ಉಚಿತ ಸೈಕಲ್, ವಿಧವಾ ವೇತನ, ಅಂಗವಿಕಲ, ವೃದ್ಧಾಪ್ಯ ವೇತನ, ಇನ್ನಿತರ ಯೋಜನೆಗಳನ್ನು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿಯೇ ಅನುಷ್ಠಾನಗೊಳಿಸಿದ್ದರು. ಆದರೆ, ಪ್ರಣಾಳಿಕೆಯಲ್ಲಿ ಇಲ್ಲದಿದ್ದರೂ ಬಿಜೆಪಿ ತನ್ನ ಸ್ವಂತ ಕಾರ್ಯಕ್ರಮಗಳಂತೆ ಬಿಂಬಿಸುತ್ತಿರುವುದು ಹಾಸ್ಯಾಸ್ಪದ ವಿಷಯ ಎಂದರು. ಕಾಂಗ್ರೆಸ್‌ನಲ್ಲಿ ಆರಂಭವಾಗಿರುವ ಆಂತರಿಕ ಕಚ್ಚಾಟದಿಂದ ಪಕ್ಷದ ಮುಖಂಡರಲ್ಲಿ ಆತ್ಮವಿಶ್ವಾಸ ಕುಗ್ಗುವಂತೆ ಮಾಡಿದೆ. ಹತಾಶರಾದಂತಿರುವ ಮುಖಂಡರು ಆಪರೇಶನ್ ಹಸ್ತ ಆರಂಭಿಸಿದ್ದು, ಚುನಾವಣೆಗೂ ಮುನ್ನ ಇಂತಹ ಬೆಳವಣಿಗೆ ಕಾಂಗ್ರೆಸ್‌ಗೆ ಶೋಭೆಯಲ್ಲ ಎಂದರು.
ಬ್ಯಾಡಗಿ ಪುರಸಭೆಯ ಸುಮಾರು 14 ವಾರ್ಡ್‌ಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಕುಮಾರಸ್ವಾಮಿಯವರ ಅಭಿವೃದ್ಧಿ ಕಾರ್ಯಕ್ರಮ ಮುಂದಿಟ್ಟು ಮತಯಾಚನೆ ಮಾಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗುಡ್ಡಪ್ಪ ಹಾದಿಮನಿ, ಅಬ್ದುಲ್ ಖಾದರ್ ಕಲ್ಮನಿ, ನಾಗರಾಜ ನೆಗಳೂರು, ಜಮಾಲಾಸಾಬ್ ಹಲಗೇರಿ, ಗುಡ್ಡಪ್ಪ ಆಡಿನವರ, ಫರೀದಾಬಾನು ನದೀಮುಲ್ಲಾ, ರತ್ನಮ್ಮ ಬಿನ್ನಾಳ, ಮುದಗಲ್ಲ, ಗೌರವ್ವ ಕಲ್ಲತ್ತಿ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.