ಹಾವೇರಿ

ಕಾಂಗ್ರೆಸ್ ಪ್ರಾಬಲ್ಯ, ಬಿಜೆಪಿ ಕೋಟೆ ಛಿದ್ರ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಮಾ.11
ಬಿಜೆಪಿ ಭದ್ರ ಕೋಟೆಯಾಗಿದ್ದ ಹಾವೇರಿ ಕೆಜೆಪಿ ಆರಂಭದೊಂದಿಗೆ ತನ್ನ ಪ್ರಾಬಲ್ಯ ಕಳೆದುಕೊಂಡಿದ್ದು, ಜಿಲ್ಲೆಯಲ್ಲಿ ಕೆಜೆಪಿ ಬೆಳೆಯುತ್ತಿದೆ. ಕಾಂಗ್ರೆಸ್ ಸೆಣಸುತ್ತಿದೆ. ಬಿಜೆಪಿ ನೆಲಕಚ್ಚುತ್ತಿದೆ ಎಂಬುದು ಸ್ಥಳೀಯ ಸಂಸ್ಥೆಗಳ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಡಿ. 9ರಂದು ಹಾವೇರಿ ಜಿಲ್ಲೆಯಲ್ಲೇ ಭರ್ಜರಿ ಸಮಾವೇಶ ನಡೆಸಿದ ಕೆಜೆಪಿ ಬಿಜೆಪಿಗೆ ಮಗ್ಗುಲು ಮುಳ್ಳಾಗಿದೆ. ಹಿರೇಕೆರೂರು ಹಾಗೂ ಹಾನಗಲ್ಲಿನಲ್ಲಿ ಬಿಜೆಪಿ ಸಂಪೂರ್ಣ ನಶಿಸಿದ್ದು, ಹೆಸರು ಹೇಳಲು ಓರ್ವ ಅಭ್ಯರ್ಥಿ ಸಿಗದಂತಾಗಿದ್ದು, ಕೆಜೆಪಿ ಪ್ರಾಬಲ್ಯ ತೋರಿದೆ. ಹಾನಗಲ್ಲ ಹಾಗೂ ಬ್ಯಾಡಗಿಯಲ್ಲಿ ಕೆಜೆಪಿ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರಲು ಸಿದ್ಧತೆ ನಡೆಸಿದರೆ, ಹಿರೇಕೆರೂರಲ್ಲಿ 7 ಸ್ಥಾನದ ಗೆಲವಿನೊಂದಿಗೆ ಕೆಜೆಪಿ ಅಧಿಕಾರ ಗದ್ದುಗೆ ಹಿಡಿಯಲು ಜೆಡಿಎಸ್ ಇಲ್ಲವೇ ಪಕ್ಷೇತರರನ್ನು ನಂಬಿಕೊಳ್ಳಬೇಕಾಗಿದೆ. ಇದರೊಂದಿಗೆ ಅತಂತ್ರ ಸ್ಥಿತಿ ಎದುರಾಗಿದೆ.
ಬ್ಯಾಡಗಿ ಪುರಸಭೆಯಲ್ಲಿ ಕೆಜೆಪಿ ನಿಚ್ಚಳ ಬಹುಮತದೊಂದಿಗೆ ಅಧಿಕಾರ ಗದ್ದುಗೆ ಏರಲು ಸಿದ್ಧವಾಗಿದ್ದು, ಕೆಜೆಪಿ 12, ಕಾಂಗ್ರೆಸ್ 5, ಬಿಜೆಪಿ 2 ಹಾಗೂ ಇತರೆ 4 ಸ್ಥಾನಗಳಲ್ಲಿ ಜಯ ಸಾಧಿಸಿದ್ದಾರೆ. ಶಿಗ್ಗಾಂವಿ ಪುರಸಭೆಯ 23 ವಾರ್ಡುಗಳಲ್ಲಿ ಮತದಾರ ಅತಂತ್ರ ಸೃಷ್ಟಿಸಿದ್ದು, 10 ಸ್ಥಾನಗಳಲ್ಲಿ ಬಿಜೆಪಿ ಹಾಗೂ 9 ಸ್ಥಾನಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿದರೆ ಜೆಡಿಎಸ್ ಹಾಗೂ ಬಿಎಸ್‌ಆರ್ ತಲಾ ಒಂದು ಸ್ಥಾನ ಪಡೆಯುವ ಮೂಲಕ ಜಿಲ್ಲೆಯಲ್ಲಿ ಬಿಎಸ್‌ಆರ್ ಖಾತೆ ತೆರೆದಿದೆ. ಇಬ್ಬರು ಪಕ್ಷೇತರರು ಆಯ್ಕೆಯಾಗಿದ್ದು, ಇಲ್ಲಿ ಪಕ್ಷೇತರರೇ ನಿರ್ಣಾಯಕ ಸ್ಥಾನ ತುಂಬುವ ನಿರೀಕ್ಷೆ ಇದೆ. ಬಂಕಾಪುರ ಹಾಗೂ ಸವಣೂರಲ್ಲಿ ಕಾಂಗ್ರೆಸ್ ಸ್ಪಷ್ಟ ಜನಾದೇಶ ಪಡೆದಿದ್ದು, ಆಡಳಿತ ಗದ್ದುಗೆ ಏರಲು ಅಗತ್ಯ ಸಿದ್ಧತೆ ನಡೆಸಿದೆ.
ಆದರೆ, ಈ ವರೆಗೆ ಬಿಜೆಪಿ ಹಿಡಿತದಲ್ಲಿದ್ದ ಹಾವೇರಿ ಹಾಗೂ ರಾಣಿಬೆನ್ನೂರು ನಗರಸಭೆ ಆಡಳಿತ ಪ್ರಸಕ್ತ ಸಾಲಿನಲ್ಲಿ ಅತಂತ್ರವಾಗಿದೆ. ಹಾವೇರಿ ನಗರಸಭೆ 31 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13, ಬಿಜೆಪಿ 9 ಹಾಗೂ ಕೆಜೆಪಿ 8 ಸ್ಥಾನಗಳನ್ನು ಗಳಿಸಿದ್ದು, ಓರ್ವ ಬಿಎಸ್‌ಆರ್ ಅಭ್ಯರ್ಥಿ ಆಯ್ಕೆಯಾಗಿದ್ದು, ಇಲ್ಲಿ ಕಾಂಗ್ರೆಸ್-ಕೆಜೆಪಿ ಮೈತ್ರಿಕೂಟದ ಆಡಳಿತ ಬರುವ ನಿರೀಕ್ಷೆ ಇದೆ. ರಾಣಿಬೆನ್ನೂರು ನಗರಸಭೆಯಲ್ಲಿಯೂ 31 ವಾರ್ಡುಗಳಿಗೆ ನಡೆದ ಚುನಾವಣೆಯಲ್ಲಿ 13 ಕಾಂಗ್ರೆಸ್, 9 ಕೆಜೆಪಿ, 3 ಬಿಜೆಪಿ ಹಾಗೂ ಪಕ್ಷೇತರರು 6 ಸ್ಥಾನ ಗಳಿಸಿದ್ದು, ಇಲ್ಲಿ ಪಕ್ಷೇತರರೇ ನಿರ್ಣಾಯಕ. ಪಕ್ಷೇತರರನ್ನು ದೂರವಿಟ್ಟು ಕಾಂಗ್ರೆಸ್ ಹಾಗೂ ಕೆಜೆಪಿ ಮೈತ್ರಿಕೂಟ ಆಡಳಿತ ನಡೆಸಿದರೂ ಆಶ್ಚರ್ಯ ಪಡುವಂತಿಲ್ಲ.
ಕಳೆದ ಬಾರಿ ಹಿರೇಕೆರೂರು, ಶಿಗ್ಗಾಂವಿ, ಸವಣೂರು ಹಾಗೂ ಬಂಕಾಪುರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಪ್ರಸಕ್ತ ಚುನಾವಣೆಯಲ್ಲೂ ಸವಣೂರು ಹಾಗೂ ಬಂಕಾಪುರಗಳನ್ನು ಉಳಿಸಿಕೊಳ್ಳುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ.
ಶಿಗ್ಗಾಂವಿಯ 23 ವಾರ್ಡುಗಳಲ್ಲಿ 10 ಸ್ಥಾನ ಬಿಜೆಪಿ ಪಡೆದಿದ್ದು, ಪಕ್ಷೇತರ 2 ಸ್ಥಾನ ಹಾಗೂ ಜೆಡಿಎಸ್ ಇಲ್ಲವೆ ಬಿಎಸ್‌ಆರ್ ಸದಸ್ಯರನ್ನು ಸೇರಿಸಿಕೊಂಡು ಆಡಳಿತ ನಡೆಸಬಹುದಾಗಿದೆ. ಇಲ್ಲವೇ 9 ಸ್ಥಾನ ಪಡೆದಿರುವ ಕಾಂಗ್ರೆಸ್, ಬಿಜೆಪಿ ಹೊರತುಪಡಿಸಿ ಆಯ್ಕೆಯಾದ ಎಲ್ಲರನ್ನೂ ಸೇರಿಸಿಕೊಂಡು ಆಡಳಿತ ಮಾಡಬಹುದಾಗಿದೆ. ಆದರೂ ಕೊನೆ ಕ್ಷಣದ ಬದಲಾವಣೆ ಅಲ್ಲಗಳೆಯಲಾಗದು. ಶಿಗ್ಗಾಂವಿಯಲ್ಲಿ ಬಿಜೆಪಿ ಆಡಳಿತ ವಹಿಸಿಕೊಂಡಲ್ಲಿ ಜಿಲ್ಲೆಯ ಏಕೈಕ ಬಿಜೆಪಿ ಆಡಳಿತವಾಗಲಿದೆ.
ಜಿಲ್ಲೆಯ 8 ಸ್ಥಳೀಯ ಸಂಸ್ಥೆಗಳ 193 ಸ್ಥಾನಗಳಲ್ಲಿ ಶಿಗ್ಗಾಂವಿಯ ಓರ್ವ ಅಭ್ಯರ್ಥಿ ಅವಿರೋಧ ಆಯ್ಕೆಯಾಗಿದ್ದರಿಂದ 192 ಸ್ಥಾನಗಳಿಗೆ ಚುನಾವಣೆ ಜರುಗಿತ್ತು. ಸೋಮವಾರ ನಡೆದ ಸ್ಥಳೀಯ ಸಂಸ್ಥೆಗಳ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ ಕಾಂಗ್ರೆಸ್ 78, ಕೆಜೆಪಿ 51, ಬಿಜೆಪಿ 40, ಜೆಡಿಎಸ್ 4, ಬಿಎಸ್‌ಆರ್ 2 ಹಾಗೂ ಪಕ್ಷೇತರರು ಒಟ್ಟು 14 ಸ್ಥಾನಗಳಲ್ಲಿ ಚುನಾಯಿತರಾಗಿದ್ದಾರೆ.
- ಕಿರಣ ಮಾಸಣಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.