ಸತ್ಯಬೋಧ ತೀರ್ಥರ ಮಹಿಮೆ ಅಪಾರ
ಕನ್ನಡಪ್ರಭ ವಾರ್ತೆ, ಸವಣೂರು, ಮಾ. 29
ಅರಾಜಕತೆ, ಯುದ್ಧ ಮೊದಲಾದ ಪರಿಸ್ಥಿತಿಯಲ್ಲಿ, 40ವರ್ಷಗಳ ಕಾಲ ಧರ್ಮ ಸಾಮ್ರಾಜ್ಯವನ್ನು ಆಳಿ ಸವಣೂರಿನಲ್ಲಿ 18 ಚಾತುರ್ಮಾಸ್ಯಗಳನ್ನು ಕೈಗೊಂಡ ಸತ್ಯಬೋಧ ತೀರ್ಥರ ಮಹಿಮೆಗಳು ಅಪಾರವಾಗಿವೆ ಎಂದು ಕೂಡಲಿ ಆರ್ಯ ಅಕ್ಷೋಭ್ಯ ತೀರ್ಥ ಸಂಸ್ಥಾನದ ಯತಿಗಳಾದ ರಘು ವಿಜಯತೀರ್ಥರು ತಿಳಿಸಿದರು.
ಸವಣೂರಿನ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಮಠದಲ್ಲಿ ಜರುಗಿದ ಆರಾಧನಾ ಮಹೋತ್ಸವದಲ್ಲಿ ಶ್ರೀಮಠಕ್ಕೆ ಭೆಟ್ಟಿ ನೀಡಿ, ಗುರುಗಳ ಹಲವಾರು ವಿಶೇಷತೆಗಳನ್ನು ಸ್ಮರಿಸಿದರು.
ಸಾಧಕರು ತಮ್ಮ ಮಹಿಮೆಗಳನ್ನು ತೋರಬಾರದು ಎಂಬ ಭಗವಂತನ ಸೂಚನೆ ಇದ್ದರೂ, ಕಾಲಕಾಲಕ್ಕೆ ಸಾತ್ವಿಕರಲ್ಲಿ ಮೂಡುವ ದ್ವಂದ್ವಗಳನ್ನು ಸಂದೇಹಗಳನ್ನು ದೂರಗೊಳಿಸುವ ಏಕೈಕ ಉದ್ದೇಶದೊಂದಿಗೆ ಮಹಾತ್ಮರು ತಮ್ಮ ಮಹಿಮೆಗಳನ್ನು ತೋರುತ್ತಾರೆ ಎಂದರು.
ಅಲೌಕಿಕವಾದ ಪಾಂಡಿತ್ಯ, ಅಪರೂಪದ ವೈರಾಗ್ಯದ ಸಾಕಾರ ಮೂರ್ತಿಗಳಾಗಿ ಸತ್ಯಬೋಧರು ಸ್ಮರಣೀಯರಾಗಿದ್ದಾರೆ. ಅಲ್ಪಪ್ರಮಾಣದಲ್ಲಿಯಾದರೂ ಅವರ ಸಾಧನೆ ಮಾರ್ಗವನ್ನು ಅನುಸರಿಸುವ ಭಾಗ್ಯ ನಮ್ಮೆಲ್ಲರಿಗೂ ಲಭಿಸಬೇಕು. ಭಗವಂತನಲ್ಲಿ ಭಕ್ತಿ, ವಿಷಯಗಳ ಬಗ್ಗೆ ವೈರಾಗ್ಯ ಜ್ಞಾನ ಪ್ರಾಪ್ತಿಯಾಗುವಂತೆ ಪ್ರಾರ್ಥಿಸೋಣ ಎಂದರು.
ಈ ಸಂದರ್ಭದಲ್ಲಿ ಗುರುಗಳಿಗೆ ಶ್ರೀಮಠದ ವತಿಯಿಂದ ಶೇಷ ವಸ್ತ್ರಗಳನ್ನು ಸಮರ್ಪಿಸಲಾಯಿತು. ಪೂಜಾ ಪರ್ಯಾಯಸ್ಥರಾದ ಮೋಹನಾಚಾರ್ಯ ರಾಯಚೂರು, ಗುರುರಾಜಾಚಾರ್ಯ ರಾಯಚೂರು ಸೇರಿದಂತೆ ಹಲವಾರು ಪ್ರಮುಖರು, ಪಂಡಿತರು, ವಿದ್ವಾಂಸರು, ಶ್ರೀಮಠದ ಶಿಷ್ಯರು ಉಪಸ್ಥಿತರಿದ್ದರು. ಬಳಿಕ ಗುರುಗಳು ಫಲಮಂತ್ರಾಕ್ಷತೆ ವಿತರಣೆ ಕೈಗೊಂಡರು.
ಆರಾಧನಾ ಮಹೋತ್ಸವ: ಶ್ರೀ ಸತ್ಯಬೋಧ ಸ್ವಾಮಿಗಳ ಮೂಲವೃಂದಾವನ ಸನ್ನಿಧಿಯಲ್ಲಿ ಮೂರು ದಿನಗಳ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು. ಪ್ರತಿನಿತ್ಯ ಅಷ್ಟೋತ್ತರ, ರಜತ ರಥೋತ್ಸವ, ವಿಶೇಷ ಪಂಚಾಮೃತ, ಅಲಂಕಾರ, ಹಸ್ತೋದಕ, ತೀರ್ಥ ಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಿದವು.
ವಿದ್ವಾಂಸರಿಂದ ಪ್ರವಚನ, ಪಲ್ಲಕ್ಕಿ ಉತ್ಸವ, ಅಷ್ಠಾವಧಾನ ಸೇವಾ ಸೇರಿದಂತೆ ನಿರಂತರ ಹಲವಾರು ಧಾರ್ಮಿಕ ಆಚರಣೆಗನ್ನು ಕೈಗೊಳ್ಳಲಾಯಿತು. ಶ್ರೀಮಠದ ಪೂಜಾ ಪರ್ಯಾಯಸ್ಥರು ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

