ಹಾವೇರಿ

ಜಿಲ್ಲಾದ್ಯಂತ ಶಾಂತಿಯುತ ಮತದಾನ

Published On :

ಹಾವೇರಿ: ಸಹಾಯಕ ಮತಗಟ್ಟೆ ಅಧಿಕಾರಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣವೊಂದನ್ನು ಹೊರತುಪಡಿಸಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಜಿಲ್ಲೆಯ 6 ಕ್ಷೇತ್ರಗಳಲ್ಲಿ ಬಹುತೇಕ ಶಾಂತಿಯುತವಾಗಿ ಮತದಾನ ಭಾನುವಾರ ನಡೆಯಿತು.
ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ನಡುವಿನ ಜಿದ್ದಾಜಿದ್ದಿ ಕಣವೆಂದೇ ಭಾವಿಸಲಾಗಿರುವ ಪ್ರಸಕ್ತ ಚುನಾವಣೆ ಜಿಲ್ಲೆಯ ಮಟ್ಟಿಗೆ ಹೇಳುವುದಾದರೆ ಬಹಳಷ್ಟು ಕುತೂಹಲವನ್ನಂತೂ ಕೆರಳಿಸಿದೆ.
ಆರಂಭದಿಂದಲೇ ಚುರುಕಾಗಿ ಕಂಡು ಬಂದ ಮತದಾನ ಕಾರ್ಯ ಬೆಳಗ್ಗೆ 9ರ ವೇಳೆಗೆ ಶೇ. 7.3ರಷ್ಟು ಮತದಾನವಾಗಿತ್ತು. ರೈತರು ಕೂಲಿ ಕಾರ್ಮಿಕರೇ ಹೆಚ್ಚಾಗಿರುವ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಮತದಾನ ಕಾರ್ಯ ಚುರುಕಿನಿಂದ ಸಾಗಿದ್ದು, 10 ಗಂಟೆ ವೇಳೆಗೆ ಶೇ. 11.25ರಷ್ಟು ಮತದಾನವಾಗಿತ್ತು. 10 ಗಂಟೆ ನಂತರ ನಗರ ಪ್ರದೇಶದಲ್ಲಿಯೂ ಮತದಾನ ಚುರುಕುಗೊಂಡು ಮದ್ಯಾಹ್ನ 1 ಗಂಟೆ ವೇಳೆಗೆ ಶೇ. 39ರಷ್ಟು ಮತದಾನವಾಗಿತ್ತು. ಸಂಜೆ 5ರ ವೇಳಗೆ ಶೇ. 79.3ರಷ್ಟು ಮತದಾನವಾಯಿತು.
ಕುಂದದ ಉತ್ಸಾಹ: ವಿವಿಧ ಪಕ್ಷಗಳ ಕಾರ್ಯಕರ್ತರು ಜನರನ್ನು ಮತಗಟ್ಟೆಗಳಿಗೆ ಸೆಳೆಯುವ ಪ್ರಯತ್ನ ಮಾತ್ರ ನಿರಂತರವಾಗಿ ಮುಂದುವರಿಸಿದ್ದು ಪ್ರಸಕ್ತ ವಿಧಾನಸಭೆ ಚುನಾವಣೆಯ ವಿಶೇಷಗಳಲ್ಲಿ ಒಂದಾಗಿದ್ದು, ತಮ್ಮ ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುವಂತೆ ಪ್ರೆರೇಪಿಸುತ್ತಿರುವುದು ಕಂಡು ಬಂದಿತು. ಭಾನುವಾರ ರಜಾ ದಿನವಾಗಿದ್ದರಿಂದ ನೌಕರರು, ವ್ಯಾಪಾರಸ್ಥರು ಸೇರಿದಂತೆ ಬಹುತೇಕ ಜನರು ತಮ್ಮ ಕೆಲಗಳಿಗೆ ವಿರಾಮ ಹೇಳಿದ ಹಿನ್ನೆಲೆಯಲ್ಲಿ ಮತದಾನ ಚುರುಕಿನಿಂದ ಜರುಗಿತು.
ಬಿಸಿಲ ಝಳ: ಬೇಸಿಗೆ ದಿನಗಳಾಗಿದ್ದರಿಂದ ಮಧ್ಯಾಹ್ನ 12 ಗಂಟೆ ನಂತರ ಬಿಸಿಲ ತಾಪ 40 ಡಿಗ್ರಿ ದಾಟಿತ್ತು. ಈ ಸಮಯದಲ್ಲಿ ಮತದಾರರು ಸಂಜೆ ನಾಲ್ಕರವರೆಗೆ ಮನೆಯಿಂದ ಹೊರಗೆ ಕಾಲುಗಳನ್ನು ಕೀಳಲಿಲ್ಲ. ಇದರಿಂದ ಸುಮಾರು 3 ತಾಸುಗಳಿಗೂ ಹೆಚ್ಚು ಕಾಲ ಮತಗಟ್ಟೆಗಳಲ್ಲಿ ಜನರಿಲ್ಲದೇ ಬಿಕೋ ಎನ್ನುತ್ತಿದ್ದವು. ಆದರೆ, ಕಾರ್ಯಕರ್ತರು ಬಿಸಿಲ ತಾಪ ಲೆಕ್ಕಿಸದೇ ತಮ್ಮ ಕೆಲಸ ಮುಂದುವರಿಸಿದ್ದರು.
ವೇಳೆ ಏಫೆಕ್ಟ್: ಚುನಾವಣಾ ಆಯೋಗ ಈವರೆಗೂ ಬೆಳಗ್ಗೆ 7ರಿಂದ ಸಂಜೆ 5ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಸಿತ್ತು. ಆದರೆ, ಪ್ರಸಕ್ತ ಸಾರ್ವತ್ರಿಕ ಚುನಾವಣೆಯಲ್ಲಿ ಸಂಜೆ 6 ಗಂಟೆವರೆಗೆ ಒಂದು ತಾಸು ಸಮಯ ಹೆಚ್ಚಿಸಿದ್ದು ಕೂಡ ಚುರುಕಿನಿಂದ ಮತದಾನವಾಗದಿರಲು ಕಾರಣವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಸಂಜೆ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡರೂ ಆಶ್ಚರ್ಯಪಡಬೇಕಾಗಿಲ್ಲ. ಆದರೆ, ಇಂತಹ ಸಂದರ್ಭಗಳಲ್ಲಿ ಮತಗಟ್ಟೆ ಅಧಿಕಾರಿಗಳಿಗೆ ಕಿರಿಕಿರಿ ಎನಿಸಿದ ಸಾಕಷ್ಟು ಉದಾಹರಣೆಗಳಿವೆ.
ವಯೋವೃದ್ಧರು ಮತಗಟ್ಟೆಗೆ: ಪ್ರಸಕ್ತ ಚುನಾವಣೆಯಲ್ಲಿ ಮತದಾನ ಮಾಡುವ ಹುಮ್ಮಸ್ಸು ಯುವಕರಿಗಿಂತ ವಯೋವೃದ್ಧರಿಗೆ ಹೆಚ್ಚು ಎನ್ನಬಹುದು. ನಿಲ್ಲಲು ಸಾಧ್ಯವಾಗದಷ್ಟು ಅಶಕ್ತವಾಗಿದ್ದರೂ ಸಹ ಬೇರೋಬ್ಬರ ಸಹಕಾರದೊಂದಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುತ್ತಿರುವ ದೃಶ್ಯಗಳು ಕಂಡು ಬಂದವು. ಶಿಗ್ಗಾಂವಿ ಪಟ್ಟಣದ ಮತಗಟ್ಟೆ ಸಂಖ್ಯೆ 85 ರಲ್ಲಿ ಸುಮಾರು 90ರ ವಯೋವಾನದ ಆಸುಪಾಸಿನಲ್ಲಿರುವ ವಯೋವೃದ್ದೆಯೊಬ್ಬರು ಭಾನುವಾರ ಮತ ಚಲಾಯಿಸಿದಳು.
ಮತಗಟ್ಟೆಯತ್ತ ಯುವ ಸಮೂಹ:  ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣೆ ಆಯೋಗವು ಕೊನೆ ಹಂತದವರೆಗೂ 18 ವಯೋವಾನದ ಯುವಕರಿಗೆ ಮತದಾರರ ಯಾದಿಯಲ್ಲಿ ಸೇರ್ಪಡೆಗೆ ಅವಕಾಶ ಕಲ್ಪಿಸಿತ್ತು. ಇದರಿಂದಾಗಿ ಪ್ರಥಮ ಬಾರಿಗೆ ಮತದಾನ ಮಾಡುವ ಹುಮ್ಮಸ್ಸಿನಲ್ಲಿದ್ದ ಯುವಕ-ಯುವತಿಯರು ಗುರುತಿನ ಪತ್ರದೊಂದಿಗೆ ಮತಗಟ್ಟೆ ಬಳಿಗೆ ಧಾವಿಸುತ್ತಿದ್ದುದು ಕಂಡು ಬಂದಿತು.
ರಾಜಕೀಯ ಪಕ್ಷಗಳಿಗೆ ಕಸಿವಿಸಿ:  ಪ್ರಸಕ್ತ ಚುನಾವಣೆಯಲ್ಲಿ ಆಯೋಗವು ಮಹತ್ತರ ಬದಲಾವಣೆಯೊಂದನ್ನು ತಂದಿದ್ದು, ಅನುಕ್ರಮ ಸಂಖ್ಯೆ ಹಾಗೂ ಭಾವಚಿತ್ರ ಹೊಂದಿದ ಮತದಾರರ ಚೀಟಿಯನ್ನು ಸಂಬಂಧಿಸಿದ ಮತದಾರರು ಖುದ್ದಾಗಿ ಮನೆಗಳಿಗೆ ತಲುಪಿಸಿದ್ದು ಬಹುತೇಕ ರಾಜಕೀಯ ಪಕ್ಷಗಳಿಗೆ ಕಸಿವಿಸಿಯನ್ನುಂಟು ಮಾಡಿದೆ. ರಾಜಕೀಯ ಪಕ್ಷಗಳು ಚೀಟಿ ಕೊಡುವ ನೆಪದಲ್ಲಿ ತಮ್ಮ ಅಭ್ಯರ್ಥಿಗಳ ಪರ ಮತ ಹಾಕುವಂತೆ ಸದ್ದಿಲ್ಲದೇ ಪ್ರಚಾರ ನಡೆಸುತ್ತಿದ್ದವು. ಆದರೆ, ಇಂತಹ ಗೊಂದಲಗಳಿಗೆ ಚುನಾವಣೆ ಆಯೋಗ ಬ್ರೇಕ್ ಹಾಕಿದಂತಾಗಿದೆ.

-ಶಿವಾನಂದ ಮಲ್ಲನಗೌಡರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.