ಬ್ಯಾಡಗಿ: ಶೇ. 77ರಷ್ಟು ಮತದಾನ
ಕನ್ನಡಪ್ರಭ ವಾರ್ತೆ, ಬ್ಯಾಡಗಿ, ಮೇ 5
ಕೆಲ ಮತಗಟ್ಟೆಗಳ ಬಳಿ ಸಣ್ಣಪುಟ್ಟ ಗೊಂದಲಗಳ ಹೊರತುಪಡಿಸಿ ಭಾನುವಾರ ಜರುಗಿದ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ಕ್ಷೇತ್ರದೆಲ್ಲೆಡೆ ಶಾಂತಿಯುತವಾಗಿ ಶೇ. 77ರಷ್ಟು ಮತದಾನವಾಗಿದೆ.
ಮತದಾನ ವೇಳೆ ಪ್ರಚಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ 14ನೇ ವಾರ್ಡ್ನಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆಯಿತು. ಉಳಿದಂತೆ ಬೆಳಗ್ಗೆಯಿಂದಲೇ ಉತ್ಸಾಹದಿಂದ ಮತ ಚಲಾಯಿಸಿದ ಮತದಾರರು ಮಧ್ಯಾಹ್ನದ ಬಿಸಿಲಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.
ಶೇ. 77ರಷ್ಟು ಮತದಾನ: ಆರಂಭದಲ್ಲಿ ಚುರುಕಾಗಿದ್ದ ಮತದಾನ ಕಾರ್ಯ ಬೆಳಗ್ಗೆ 9 ಗಂಟೆ ವೇಳೆಗೆ ಶೇ. 10.15ರಷ್ಟು ಮತದಾನವಾಗಿತ್ತು. ರೈತರು ಹೆಚ್ಚಾಗಿರುವ ಗ್ರಾಮೀಣ ಪ್ರದೇಶದಲ್ಲಿ ಬೆಳಗ್ಗೆ ಮತದಾನ ಕಾರ್ಯ ಚುರುಕಿನಿಂದ ಸಾಗಿದ್ದು, 10 ಗಂಟೆ ವೇಳೆಗೆ ಶೇ. 21.35ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆ ವೇಳೆಗೆ ಶೇ. 42ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಯಷ್ಟೊತ್ತಿಗೆ ಶೇ. 67ರಷ್ಟು ಮತದಾನವಾಗಿದ್ದು, ಮತದಾನ ವೇಳೆ ಪೂರ್ಣಗೊಂಡಾಗ ಶೇ. 77ರಷ್ಟು ಮತದಾನವಾಯಿತು.
ಮತದಾರ ಪಟ್ಟಿಯಲ್ಲಿ ಗೊಂದಲ: ಬ್ಯಾಡಗಿ ವಿಧಾನಸಭೆ ಮತಕ್ಷೇತ್ರದ ಚಿಕ್ಕಳ್ಳಿ ಮತ್ತು ಘಾಳಪೂಜಿ ಗ್ರಾಮಗಳು ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರುಗಳು ನಾಪತ್ತೆಯಾದ ಪ್ರಕರಣಗಳು ನಡೆದರೆ ಇನ್ನೂ ಕೆಲವೆಡೆ ಹೆಸರು ತಪ್ಪಾಗಿ ಪ್ರಕಟಗೊಂಡ ಪ್ರಕರಣಗಳು ಬೆಳಕಿಗೆ ಬಂದಿವೆ.
ಅಧಿಕಾರಿಗಳಿಗೆ ಮುಜುಗುರ: ಮತದಾರ ಪಟ್ಟಿಯಲ್ಲಿನ ಗೊಂದಲದಿಂದ ಕೆಲ ಮತದಾರರು ತಮ್ಮ ಹಕ್ಕನ್ನು ಚಲಾಯಿಸುವಲ್ಲಿ ವಿಫಲವಾಗಿದ್ದಾರೆ. ಮತಗಟ್ಟೆ ಬಳಿಯಿದ್ದ ಬಿಎಲ್ಓಗಳ ಬಳಿ ನಿವೇದನೆ ಮಾಡಿಕೊಂಡರು ಪ್ರಯೋಜನವಾಗಲಿಲ್ಲ. ಗುರುತಿನ ಚೀಟಿಗಳಲ್ಲಿ ಭಾವಚಿತ್ರ ಅದಲು ಬದಲಾದ ಪ್ರಕರಣಗಳು ನಡೆದು ಮತಗಟ್ಟೆ ಅಧಿಕಾರಿಗಳನ್ನು ಮುಜುಗರಕ್ಕೊಳಗಾಗುವಂತೆ ಮಾಡಿದ ಘಟನೆಗಳು ಜರುಗಿದವು.
ಮತದಾರರ ಉತ್ಸಾಹ: ವಿವಿಧ ಪಕ್ಷಗಳ ಕಾರ್ಯಕರ್ತರು ಜನರನ್ನು ಮತಗಟ್ಟೆಗಳಿಗೆ ಕರೆದೊಯ್ಯುವ ಪ್ರಯತ್ನದಲ್ಲಿ ಮಾತ್ರ ಹಿಂದೆ ಬೀಳಲಿಲ್ಲ. ಅಭ್ಯರ್ಥಿಗಳ ಪರ ಮತ ಚಲಾವಣೆ ಮಾಡುವಂತೆ ಪ್ರೆರೇಪಿಸುತ್ತಿರುವುದು ಕಂಡು ಬಂದಿತು. ರಜೆಯ ದಿನವಾಗಿದ್ದರಿಂದ ನೌಕರರು, ವ್ಯಾಪಾರಸ್ಥರು ಸೇರಿದಂತೆ ಬಹುತೇಕ ಜನರು ಕೆಲಗಳಿಂದ ವಿರಾಮದಲ್ಲಿದ್ದ ಅವರು ಮತದಾನಕ್ಕೆ ಸಜ್ಜಾಗಿದ್ದರು.
ಸೂಕ್ತ ಬಂದೋಬಸ್ತ್: ಶಾಂತಿಯುತ ಮತದಾನಕ್ಕಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಚುನಾವಣೆ ಆಯೋಗ ನಿಯೋಜನೆ ಮಾಡಿತ್ತು. 1 ಡಿಎಸ್ಪಿ, 2 ಸಿಪಿಐ, 3 ಪಿಎಸ್ಐ, 8 ಎಎಸ್ಐ, ಕೇಂದ್ರ ಮೀಸಲು ಪಡೆಯ 145 ಪೊಲೀಸರು, 133 ಸಿವಿಲ್ ಪೊಲೀಸರು 5 ಮಹಿಳಾ ಪೊಲೀಸ್ 104 ಜನ ಹೋಮ್ಗಾರ್ಡ್ಸ್, ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆಯ 2 ತುಕಡಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿತ್ತು.
ಡಿಮಸ್ಟರಿಂಗ್: ಸಂಜೆ 7 ಗಂಟೆಯಿಂದ ಡಿಮಸ್ಟರಿಂಗ್ ಕಾರ್ಯ ಆರಂಭವಾಗಿ ತಡರಾತ್ರಿ 11ರ ವರೆಗೂ ನಡೆಯಿತು. ಒಟ್ಟು 225 ಮತಪೆಟ್ಟಿಗೆಗಳನ್ನು ಪಟ್ಟಣದ ಹೊರವಲಯದಲ್ಲಿರುವ ಸೇಂಟ್ ವಿಯೆನ್ನಾ ಶಾಲೆಯಲ್ಲಿ ಸಂಗ್ರಹಿಸಲಾಯಿತು. ಕ್ಷೇತ್ರದ ವಿವಿಧ ಗ್ರಾಮಗಳಿಗೆ ತೆರಳಿದ್ದ ಮತಗಟ್ಟೆ ಅಧಿಕಾರಿಗಳು ತಡರಾತ್ರಿಯೇ ವಿವಿಧ ಖಾಸಗಿ ವಾಹನಗಳಲ್ಲಿ ಮನೆಗಳಿಗೆ ತೆರಳಿದರು.
ಮತಪೆಟ್ಟಿಗೆ ಭದ್ರ: ಮೇ 8ರಂದು ಹಾವೇರಿ ತಾಲೂಕಿನ ದೇವಗಿರಿಯಲ್ಲಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಹೀಗಾಗಿ ಬ್ಯಾಡಗಿ ಮತಕ್ಷೇತ್ರಕ್ಕೆ ಸಂಬಂಧಿಸಿದ 225 ವಿದ್ಯುನ್ಮಾನ ಮತ ಪೆಟ್ಟಿಗೆಗಳನ್ನು ಪೊಲೀಸ್ ಸರ್ಪಗಾವಲಿನಲ್ಲಿ ಸಾಗಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

