ಸರಾಗ ಮತಎಣಿಕೆ ಮಧ್ಯೆ ಸಂಭ್ರಮ
ಹಾವೇರಿ: ಸಾಲುಗಟ್ಟಿ ನಿಂತಿರುವ ನೂರಾರು ವಾಹನಗಳು, ಸಾಗರದಂತೆ ಹರಿದು ಬರುತ್ತಿರುವ ಜನರು, ಉತ್ಸಾಹಭರಿತ ಕಾರ್ಯಕರ್ತರ ಜಯಘೋಷ, ಕೊನೆಗೆ ಪರಸ್ಪರ ಬಣ್ಣ ಎರಚಿಕೊಂಡು ಹೋಳಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ನಗರದ ಹೊರವಲಯದಲ್ಲಿನ ದೇವಗಿರಿ ಬಳಿಯಿರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ನಡೆದ ವಿಧಾನಸಭೆ ಚುನಾವಣೆಯ ನಿರ್ಣಾಯಕ ಘಟ್ಟವಾದ ಮತ ಎಣಿಕೆ ಸಂದರ್ಭದಲ್ಲಿ.
ಜಿಲ್ಲೆಯ ಆರು ಕ್ಷೇತ್ರಗಳ ಮತ ಎಣಿಕೆಯ ಕೇಂದ್ರಗಳನ್ನು ಇದೇ ಕಾಲೇಜಿನಲ್ಲಿ ಸ್ಥಾಪಿಸಲಾಗಿತ್ತು. ಮತ ಎಣಿಕೆ ಕೇಂದ್ರಕ್ಕೆ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದರು. ಸಿಕ್ಕಸಿಕ್ಕ ವಾಹನಗಳಲ್ಲಿ, ಬಸ್ಗಳಲ್ಲಿ, ಕಾಲ್ನಡಿಗೆಯಲ್ಲಿ ಬಂದ ಕಾರ್ಯಕರ್ತರು ಬೆಳಗ್ಗೆಯಿಂದಲೇ ಕೇಂದ್ರದ ಎದುರಿಗೆ ಸೇರಿದ್ದರು.
ಕೊನೆಗೊಳ್ಳದ ಉತ್ಸಾಹ: ಕಳೆದೊಂದು ತಿಂಗಳಿಂದ ತಮ್ಮ ನೆಚ್ಚಿನ ನಾಯಕರ ಪರ ಪ್ರಚಾರ ನಡೆಸಿ ಹೈರಾಣಾಗಿದ್ದರೂ ಕೂಡ ಅದನ್ನು ಲೆಕ್ಕಿಸದೇ ಮತ ಎಣಿಕೆ ಕೇಂದ್ರದ ಬಳಿ ಜಮಾಯಿಸಿದ್ದರು. ಮತಗಳ ಲೆಕ್ಕಾಚಾರದಲ್ಲಿ ತೊಡಗಿರುತ್ತಿದ್ದ ಕಾರ್ಯಕರ್ತರು ಧ್ವನಿವರ್ಧಕದ ಮೂಲಕ ಅಭ್ಯರ್ಥಿಗಳ ಬಲಾಬಲಗಳನ್ನು ತಿಳಿಸಿದಾಗಲೊಮ್ಮೆ ಕೇಕೆ ಶಿಳ್ಳೆಗಳ ಮಾಹಾಪೂರವನ್ನೇ ಹರಿಸುತ್ತಿದ್ದರು. ಅವರ ಜಯಘೋಷಗಳು ಮುಗಿಲು ಮುಟ್ಟುತ್ತಿದ್ದವು.
ಬಿಗಿಭದ್ರತೆ: ಚುನಾವಣೆ ಮುಕ್ತಾಯದ ಬಳಿಕ ಮತಎಣಿಕೆ ಕಾರ್ಯವನ್ನು ಸಹ ಯಾವುದೇ ತೊಂದರೆಯಿಲ್ಲದೇ ಮುಕ್ತಾಯ ಗೊಳಿಸಲು ನಿರ್ಣಯಿಸಿದ್ದ ಚುನವಣಾ ಆಯೋಗ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಬಿಗಿಯಾದ ಪೊಲೀಸ್ ವ್ಯವಸ್ಥೆ ನಿಯೋಜನೆ ಮಾಡಲಾಗಿತ್ತು. ಅಭ್ಯರ್ಥಿಗಳು ಹಾಗೂ ಎಣಿಕೆ ಎಜೆಂಟರು ಹೊರತುಪಡಿಸಿ ಮತ ಎಣಿಕೆ ಕೇಂದ್ರ ಎದುರು ಬಹುದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ಬ್ಯಾರಿಕೇಡ್ಗಳನ್ನು ನಿರ್ಮಿಸುವ ಮೂಲಕ ಪೊಲೀಸರು ಸುಮಾರು 200 ಮೀ.ನಷ್ಟು ದೂರದಲ್ಲಿಯೇ ನಿಯಂತ್ರಿಸಿದ್ದರು. ಇದರಿಂದ ಮತೆ ಎಣಿಕೆ ಕಾರ್ಯಕ್ಕೆ ಅಡ್ಡಿ ಆತಂಕಗಳು ಬರಲಿಲ್ಲ.
ವಿಜಯೋತ್ಸವ: ಚುನಾವಣೆಯಲ್ಲಿ ಗೆಲವು ಸಾಧಿಸಿದ ಅಭ್ಯರ್ಥಿಗಳು ಕೇಂದ್ರ ಹೊರಭಾಗದಿಂದಲೇ ಸಾವಿರಾರು ಕಾರ್ಯಕರ್ತರು ನಗರದಲ್ಲಿ ಮೆರವಣಿಗೆ ನಡೆಸುವ ಮೂಲಕ ವಿಜಯೋತ್ಸವ ಆಚರಿಸಿದರರು. ಈ ಸಂದರ್ಭದಲ್ಲಿ ಕಾರ್ಯಕರ್ತರು ಅಭಿಮಾನಿಗಳು ಪರಸ್ಪರ ಬಣ್ಣ ಹಚ್ಚಿ ಹಗೂ ಪಟಾಕಿ ಸಿಡಿಸಿ ಸಂಭ್ರಮಿಸಿದರು. ದೇವಗಿರಿಯಿಂದ ಆರಂಭವಾದ ಮೆರವಣಿಗೆ ನಗರದಲ್ಲಿ ಸುತ್ತಾಡಿ ಬಳಿಕ ಸಂಬಂಧಿಸಿದ ಊರುಗಳಿಗೆ ತೆರಳಿದರು.
144 ಕಲಂ ಲೆಕ್ಕಕ್ಕಿಲ್ಲ: ಮೆರವಣಿಗೆ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಮತ ಎಣಿಕೆ ಕೇಂದ್ರ ಸೇರಿದಂತೆ ಜಿಲ್ಲಾದ್ಯಂತ 144 ಕಲಂ ಜಾರಿಗೊಳಿಸಿತ್ತು. ಆದರೆ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳ ಗೆಲವಿನ ಉತ್ಸಾಹ ನೋಡಿದ ಪೊಲೀಸ್ ಇಲಾಖೆಯು ಕಂಡು ಕಂಡರಿಯದಂತೆ ವರ್ತಿಸಿದ್ದಲ್ಲದೇ ಯಾರ ಮೇಲೂ ಕ್ರಮ ತೆಗೆದುಕೊಳ್ಳುವ ಸಾಹಸಕ್ಕೆ ಕೈ ಹಾಕಲಿಲ್ಲ.
- ಶಿವಾನಂದ ಮಲ್ಲನಗೌಡರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

