ಅಧಿಕಾರಿಗಳೇ ಸೇಲ್ಸ್ಮನ್!
ಬ್ಯಾಡಗಿ: ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಮಂಜೂರಾದ ಒಟ್ಟು ಹುದ್ದೆಗಳಲ್ಲಿ ಶೇ.50ಕ್ಕಿಂತ ಹೆಚ್ಚು ಖಾಲಿಯಿದ್ದು, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಇಲಾಖೆ, ರೈತರಿಗೆ ಕೃಷಿ ತಾಂತ್ರಿಕತೆಯನ್ನು ತಲುಪಿಸುವಲ್ಲಿ ಹೆಣಗಾಡುತ್ತಿದ್ದು, ಬೀಜ, ಔಷಧ ಹಾಗೂ ಕೃಷಿ ಯಂತ್ರೋಪಕರಣ ಮಾರಾಟದಲ್ಲಿ ತೊಡಗಿರುವ ಕೃಷಿ ಅಧಿಕಾರಿಗಳು ಸೇಲ್ಸ್ಮನ್ಗಳಂತೆ ಕಾರ್ಯನಿರ್ವಹಿಸುವಂತಾಗಿದೆ.
ಕೃಷಿ ಪ್ರಧಾನ ಭಾರತದಲ್ಲಿ ಶೇ.70ರಷ್ಟು ರೈತರಿದ್ದಾರೆ. ಕೃಷಿಯನ್ನು ಆದ್ಯತಾ ವಲಯವನ್ನಾಗಿ ಪರಿಗಣಿಸಿದ ಸರ್ಕಾರಗಳು ಕೃಷಿ ಅಭಿವೃದ್ಧಿಗೆ ಕೋಟಿಗಟ್ಟಲೇ ಹಣವ್ಯಯಿಸಿ ನೂರಾರು ಯೋಜನೆ ರೂಪಿಸಿವೆ. ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿರುವ ದೊಡ್ಡ ಸಾಧನೆ ಎಂಬುದಾಗಿ ಬೀಗುತ್ತಿರುವ ಸರ್ಕಾರಗಳು. ಸಿಬ್ಬಂದಿ ಕೊರತೆಯಿಂದ ಕೃಷಿಕರಿಗೆ ಉಪಯುಕ್ತ ಯೋಜನೆಗಳು ಹಾಗೂ ಕೃಷಿ ತಾಂತ್ರಿಕತೆಯನ್ನು ತಲುಪಿಸುವಲ್ಲಿ ವಿಫಲ ವಾಗಿವೆ.
ಸಿಬ್ಬಂದಿ ಕೊರತೆ: ಸ್ಥಳೀಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಮಂಜೂರಾದ 27 ಹುದ್ದೆಗಳಲ್ಲಿ 13 ಜನ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಇಬ್ಬರು ನಿಯೋಜನೆ ಮೇರೆಗೆ ಬೇರೆಡೆಗೆ ತೆರಳಿದ್ದು, 14 ಹುದ್ದೆಗಳು ಬಡ್ತಿ, ವರ್ಗಾವಣೆ, ನಿವೃತ್ತಿ ಇನ್ನಿತರ ಕಾರಣಗಳಿಂದ ತೆರವಾಗಿವೆ.
ಮಂಜೂರಾದ 3 ಕೃಷಿ ಅಧಿಕಾರಿ ಹುದ್ದೆಗಳಲ್ಲಿ 2, ಸಹಾಯಕ ಕೃಷಿ ಅಧಿಕಾರಿ 10 ಹುದ್ದೆಗಳಲ್ಲಿ 5, ಕೃಷಿ ಸಹಾಯಕರ 5 ಹುದ್ದೆಗಳಲ್ಲಿ 5 ಹಾಗೂ ವಾಹನ ಚಾಲಕ ಹಾಗೂ ಬೆರಳಚ್ಚುಗಾರ ತಲಾ 1 ಸೇರಿದಂತೆ ಖಾಲಿಯಿವೆ. ಹೀಗಾಗಿ 14 ಜನ ಸಿಬ್ಬಂದಿಗಳ ಕೊರತೆ ಇದೆ.
ಕೃಷಿ ಅಧಿಕಾರಿಗಳೇ ಸೇಲ್ಸ್ಮನ್ಗಳು: ಅಗತ್ಯ ಸಂದರ್ಭಗಳಲ್ಲಿ ಕೃಷಿಕರಿಗೆ ಕೃಷಿ ತಾಂತ್ರಿಕತೆ ನೀಡಬೇಕಾದ ಸಹಾಯಕ ಕೃಷಿ ಅಧಿಕಾರಿಗಳು ಕಾಗಿನೆಲೆ, ಬ್ಯಾಡಗಿ ರೈತ ಸಂಪರ್ಕ ಕೇಂದ್ರ ಮತ್ತು ಚಿಕ್ಕಬಾಸೂರ, ಮೋಟೆಬೆನ್ನೂರ ಉಪಕೇಂದ್ರಗಳಲ್ಲಿ ಬೀಜ, ಔಷಧ ಹಾಗೂ ಕೃಷಿ ಯಂತ್ರೋಪಕರಣ ಮಾರಾಟದಲ್ಲಿ ತೊಡಗುವ ಮೂಲಕ ಕಚೇರಿಯಲ್ಲಿ ಸೇಲ್ಸ್ಮನ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಕೀಟಬಾಧೆ ಸೇರಿದಂತೆ ಇನ್ನಿತರ ರೋಗಗಳ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಕೃಷಿ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿಭಾಯಿಸಲು ಸಾಧ್ಯವಾಗದೇ ಕೃಷಿ ತಾಂತ್ರಿಕತೆ ಇಲ್ಲಿನ ರೈತರಿಗೆ ಮರೀಚಿಕೆಯಾಗಿದೆ.
ಭೂಚೇತನ ಉದ್ದೇಶಕ್ಕೆ ಪೆಟ್ಟು: ಮಣ್ಣಿನ ಸಂರಕ್ಷಣೆಯೊಂದಿಗೆ ಕೃಷಿಭೂಮಿಯ ಫಲವತ್ತತೆ ಹೆಚ್ಚಿಸಿ ಉತ್ತಮ ಇಳುವರಿ ಜೊತೆಗೆ ಲಾಭದಾಯಕ ಕೃಷಿ ನಡೆಸಲಿ ಎಂಬ ಉದ್ದೇಶದಿಂದ ಸರ್ಕಾರ ಭೂಚೇತನ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ತಾಲೂಕಿನ ಒಟ್ಟು 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಪ್ರಸಕ್ತ ವರ್ಷ ಭೂಚೇತನ ಅಳವಡಿಸಿದೆ. ಮುಂಗಾರು ಹಂಗಾಮಿನ 120 ದಿನಗಳ ಕಾಲ ಭೂಚೇತನ ಪ್ರಚಾರಕ್ಕಾಗಿಯೇ 40 ಜನ ಅನುವುಗಾರರನ್ನು ಗುತ್ತಿಗೆ ರೂಪದಲ್ಲಿ ಕೆಲಸ ನಿರ್ವಹಿಸಲು ನೇಮಿಸಿಕೊಂಡಿದೆ. ಆದರೆ, ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೃಷಿ ಇಲಾಖೆಗೆ ಕೆಲಸದ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಅನುವುಗಾರರನ್ನು ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿದೆ. ಇದರಿಂದ ಸರ್ಕಾರದ ಮೂಲ ಉದ್ದೇಶ ಬಿಟ್ಟು ಭೂಚೇತನ ಕಾರ್ಯಕ್ರಮ ಚೈತನ್ಯ ಕಳೆದುಕೊಳ್ಳುತ್ತಿದೆ.
ತಲುಪದ ಯೋಜನೆಗಳು: ರಸಗೊಬ್ಬರ, ಬೀಜ ಹಾಗೂ ಕೀಟನಾಶಕ ಮಾರಾಟ ನಿಯಂತ್ರಣ ಸೇರಿದಂತೆ ಕಳೆದೆರಡು ವರ್ಷದ ಹಿಂದೆ ಆರಂಭವಾದ ಸುವರ್ಣಭೂಮಿ ಯೋಜನೆಯಡಿ ಸಲ್ಲಿಕೆಯಾದ 17 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಪರಿಶೀಲನೆ ಕಾರ್ಯದಲ್ಲಿ ತೊಡಗಿರುವ ಕೃಷಿ ಇಲಾಖೆ ಸಿಬ್ಬಂದಿ ಯಾವುದೇ ರೈತನ ಹೊಲಕ್ಕೆ ಭೇಟಿ ನೀಡಲು ಸಾಧ್ಯವಾಗಿಲ್ಲ. ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡದಿರುವ ಇಲಾಖೆ ಈಗಿರುವ ಸಿಬ್ಬಂದಿಗೆ ಅಧಿಕ ಹೊರೆ ಹಾಕುತ್ತಿದ್ದು ಇದರಿಂದಾಗಿ ಸುಮಾರು 43 ಯೋಜನೆಗಳು ಸಮರ್ಪಕವಾಗಿ ರೈತನಿಗೆ ತಲುಪದಿರುವ ಅಂಶ ಬೆಳಕಿಗೆ ಬಂದಿದೆ.
ತಿರಸ್ಕರಿಸಿಲ್ಲ: ಸರ್ಕಾರ ಹಾಗೂ ಕೃಷಿ ಇಲಾಖೆಯು ನಿರ್ವಹಿಸಿದ ಕೆಲಸಗಳನ್ನು ತಿರಸ್ಕರಿಸಲು ಬರುವುದಿಲ್ಲ. ಸಿಬ್ಬಂದಿ ಕೊರತೆಯಿರುವ ಕುರಿತು ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಸದ್ಯ ಇರುವ ಸಿಬ್ಬಂದಿಯನ್ನೇ ಬಳಸಿಕೊಂಡು ರೈತರ ನೆರವಿಗೆ ಧಾವಿಸಲು ಪ್ರಯತ್ನಿಸುತ್ತಿರುವುದಾಗಿ ಸಹಾಯಕ ಕೃಷಿ ನಿರ್ದೇಶಕ ಟಿ.ಎಚ್. ನಟರಾಜ ಪತ್ರಿಕೆಗೆ ತಿಳಿಸಿದರು.
- ಶಿವಾನಂದ ಮಲ್ಲನಗೌಡರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

