ಹಾವೇರಿ

ರೈತರ ಹಿತ ಕಾಪಾಡಿ: ಶ್ರೀ

Published On :

ಕನ್ನಡಪ್ರಭ ವಾರ್ತೆ, ಹಿರೇಕೆರೂರು, ನ. 8
ದೇಶಕ್ಕೆ ಅನ್ನ ನೀಡುವ ರೈತನಿಗೆ ಗೌರವವೇ ಇಲ್ಲದಂತಾಗಿದೆ. ಕೃಷಿ ಉತ್ಪನ್ನಗಳಿಗೂ ಯೋಗ್ಯ ದರ ಸಿಗದೆ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆ ಪರಿಹರಿಸಲು ಸರ್ಕಾರಗಳು ಸಕಾರಾತ್ಮಕವಾಗಿ ಚಿಂತನೆ ನಡೆಸಿಲ್ಲ. ಇನ್ನಾದರೂ ರೈತರ ಬೆಳೆಗೆ ಉತ್ತಮ ಮಾರುಕಟ್ಟೆ ಕಲ್ಪಿಸಿ, ಯೋಗ್ಯ ಬೆಲೆ ನೀಡಿ, ಅವರ ಹಿತ ಕಾಪಾಡಬೇಕು ಎಂದು ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶಿವಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನುಡಿದರು.
ರಟ್ಟಿಹಳ್ಳಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ವತಿಯಿಂದ ರಟ್ಟಿಹಳ್ಳಿ ಗ್ರಾಮದ ಹೊಸ ಬಸ್ ನಿಲ್ದಾಣದ ಎದುರು ರೈತ ಹುತಾತ್ಮ ಚಂದ್ರಶೇಖರ ಬನ್ನಿಕೋಡ ಅವರ ಸ್ಮರಣಾರ್ಥ ವೀರಗಲ್ಲು ಪ್ರತಿಷ್ಠಾಪನೆ ಕಾರ್ಯಕ್ರಮದ ಸಾನ್ನಿದ್ಯ ವಹಿಸಿ ಅವರು ಮಾತನಾಡಿದರು.
ರೈತ ಸಂಘದ ರಾಜ್ಯಾಧ್ಯಕ್ಷ ಜೆ.ಎ. ನಾರಾಯಣಗೌಡ ಕಾರ್ಯಕ್ರಮ ಉದ್ಘಾಟಿಸಿ, ರೈತರ ಸಮಸ್ಯೆ ತಿಳಿದಿದ್ದರೂ ಏನೂ ಗೊತ್ತಿಲ್ಲದವರಂತೆ ಜನಪ್ರತಿನಿಧಿಗಳು ನಟಿಸುತ್ತಿದ್ದಾರೆ. ಹಿರೇಕೆರೂರು ತಾಲೂಕಿನಲ್ಲಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ರೈತರು ಭೂಮಿ ನೀಡಿದ್ದಾರೆ. ಆದರೆ ಈವರೆಗೂ ಪರಿಹಾರ ನೀಡಿಲ್ಲ. ಈ ಬಗೆಯ ವಿಳಂಬ ಸರಿಯಲ್ಲ. ಯುವ ರೈತ ಚಂದ್ರಶೇಖರ ಬನ್ನಿಕೋಡ ಅಧಿಕಾರಿಗಳ ರೈತ ವಿರೋಧಿ ನೀತಿ ಖಂಡಿಸಿ ಹೋರಾಟ ಮಾಡುತ್ತಾ ಪ್ರಾಣತ್ಯಾಗ ಮಾಡಿದ್ದಾರೆ. ರೈತರ ಸಮಸ್ಯೆ ಪರಿಹಾರ ಆಗಬೇಕಾದರೆ ಸಂಘಟಿತ ಹಾಗೂ ಪ್ರಾಮಾಣಿಕ ಹೋರಾಟ ಅಗತ್ಯ ಎಂದರು.
ಮಹಾ ಕ್ರಾಂತಿ ಆದೀತು
ರಾಜ್ಯ ರೈತ ಸಂಘದ ಉಪಾಧ್ಯಕ್ಷ ಶಿದ್ದನಗೌಡ ಪಾಟೀಲ ಮಾತನಾಡಿ, ರೈತರಿಗೆ ಸೌಲಭ್ಯ ನೀಡಲು ಸರ್ಕಾರ ವಿಳಂಬ ಮಾಡುತ್ತಿರುವುದರಿಂದ ಅವರ ಸಮಸ್ಯೆಗಳು ಉಲ್ಬಣಿಸಿವೆ. ರೈತರ ಬದುಕಿಗೆ ನೆಮ್ಮದಿ ಕರುಣಿಸಲು ಸರ್ಕಾರ ಮುಂದಾಗಬೇಕು. ರಾಜ್ಯದಲ್ಲಿ ರೈತರ ಹೋರಾಟ ಮಹಾ ಕ್ರಾಂತಿ ಆಗುವುದರಲ್ಲಿ ಸಂದೇಹವಿಲ್ಲ. ಸರ್ಕಾರ ಇನ್ನಾದರೂ ಎಚ್ಚೆತ್ತು ರೈತರ ಹಿತ ಕಾಪಾಡಲು ಮುಂದಾಗಬೇಕು ಎಂದರು.
ತಾಲೂಕಾಧ್ಯಕ್ಷ ರಾಜಶೇಖರ ದೂದಿಹಳ್ಳಿ ಮಾತನಾಡಿ, ಸರ್ಕಾರ ರೈತರನ್ನು ಮರೆಯುತ್ತಿದೆ. ರೈತರ ಸಮಸ್ಯೆಗಳ ಚರ್ಚೆ ಹಾಗೂ ಪರಿಹಾರಕ್ಕೆ ಸೂಕ್ತ ವೇದಿಕೆ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಅಧ್ಯಕ್ಷ ಶಂಕರಗೌಡ ಚೆನ್ನಗೌಡ್ರ ಅಧ್ಯಕ್ಷತೆ ವಹಿಸಿದ್ದರು. ರೈತ ಸಂಘದ ಕೋಶಾಧ್ಯಕ್ಷ ಶ್ಯಾಮಸುಂದರ ಕೀರ್ತಿ, ಗದಿಗೆಪ್ಪ ದಾನಮ್ಮನವರ ಮಾತನಾಡಿದರು, ಇದಕ್ಕೂ ಮೊದಲು ಚಂದ್ರಶೇಖರ ಬನ್ನಿಕೋಡ ಅವರ ಭಾವಚಿತ್ರದ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ರೈತರಾದ ಸುಭಾಸ ಗವಿಯಪ್ಪನವರ, ಮಲ್ಲನಗೌಡ ಸೊರಟೂರ, ಚಂದ್ರು ಜೋಗಿಹಳ್ಳಿ, ಆರ್.ಎನ್. ಗಂಗೋಳ, ಹನುಮಂತಗೌಡ ಮಕರಿ, ಶಿವನಗೌಡ ಪಾಟೀಲ, ಈರಪ್ಪ ಬೆನ್ನೂರು, ಮಾಲತೇಶಗೌಡ ಗಂಗೋಳ, ಹನುಮಂತಗೌಡ ಭರಮಣ್ಣನವರ, ಶಿವು ದ್ಯಾವಕ್ಕಳವರ, ರೈತ ಮಹಿಳೆಯರಾದ ಸುವರ್ಣಾ ಜಾವಳ್ಳಿ, ಸರೋಜಾ ಆರ್. ಮರಡಿ, ಎಚ್.ಎ. ಮುಲ್ಲಾ ಇದ್ದರು.
ಹಿರೇಕೆರೂರು ತಾಲೂಕಿನಲ್ಲಿ ತುಂಗಾ ಮೇಲ್ದಂಡೆ ಮುಖ್ಯ ಕಾಲುವೆಗೆ ರೈತರು ಭೂಮಿ ನೀಡಿದ್ದಾರೆ. ಆದರೆ ಈವರೆಗೂ ಪರಿಹಾರ ನೀಡಿಲ್ಲ. ಈ ಬಗೆಯ ವಿಳಂಬ ಸರಿಯಲ್ಲ. ಯುವ ರೈತ ಚಂದ್ರಶೇಖರ ಬನ್ನಿಕೋಡ ಅಧಿಕಾರಿಗಳ ರೈತ ವಿರೋಧಿ ನೀತಿ ಖಂಡಿಸಿ ಹೋರಾಟ ಮಾಡುತ್ತಾ ಪ್ರಾಣತ್ಯಾಗ ಮಾಡಿದ್ದಾರೆ. ರೈತರ ಸಮಸ್ಯೆ ಪರಿಹಾರ ಆಗಬೇಕಾದರೆ ಸಂಘಟಿತ ಹಾಗೂ ಪ್ರಾಮಾಣಿಕ ಹೋರಾಟ ಅಗತ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.