ಗೋ ರಕ್ಷಣೆಗೆ ಮುಂದಾಗಿ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 9
ದೇಶದಲ್ಲಿ ನೆಲೆಸಿರುವ ನಾವೆಲ್ಲರೂ ಹಿಂದೂಗಳು ಎಂಬ ಮನೋಭಾವ ತಾಳಿ ಗೋ ರಕ್ಷಣೆಗೆ ಮುಂದಾಗಬೇಕು. ದೇಶದ ಪ್ರತಿಯೊಬ್ಬ ಹಿಂದೂ ಯಾವುದೇ ಕಾರಣಕ್ಕೂ ಗೋವುಗಳನ್ನು ಕಸಾಯಿಖಾನೆಗೆ ಮಾರಾಟ ಮಾಡುವುದಿಲ್ಲ ಎಂದು ಶಪಥ ತೊಡಬೇಕು ಎಂದು ದೇವರ ಹುಬ್ಬಳ್ಳಿಯ ಸಿದ್ದ ಶಿವಯೋಗಿ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವಹಿಂದೂ ಪರಿಷತ್ ವತಿಯಿಂದ ಶನಿವಾರ ನಡೆದ ಧರ್ಮಾಚಾರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪ್ರಸ್ತುತದಲ್ಲಿ ಮತ ರಾಜಕಾರಣ ವಿಪರೀತವಾಗಿದ್ದು, ಕೇವಲ ಮತಗಳಿಕೆಗಾಗಿ ರಾಜ್ಯ ಸರ್ಕಾರ ಶಾದಿಭಾಗ್ಯ ಯೋಜನೆಯನ್ನು ಜಾರಿಗೊಳಿಸಿ ಮುಸ್ಲಿಂ ತುಷ್ಟೀಕರಣ ನೀತಿ ಆರಂಭಿಸಿದೆ. ಅನ್ನಭಾಗ್ಯ ಮುಂತಾದ ಜನಪ್ರಿಯ ಯೋಜನೆಗಳಿಂದಾಗಿ ಜನತೆ ಸೋಮಾರಿಗಳಾಗುತ್ತಿದ್ದು, ದುಡಿದು ತಿನ್ನುವುದನ್ನು ರೂಢಿಸಿಕೊಂಡು ಸ್ವಾವಲಂಬಿಗಳಾಗಿ ಬಾಳಬೇಕು ಎಂದರು.
ಯುವಜನತೆ ಜಾಗೃತರಾಗಲಿ
ಹಿಂದೂ ದೇವಾಲಯಗಳ ಮೇಲೆ ನಿತ್ಯ ದಾಳಿ ನಡೆಯುತ್ತಿದೆ. ಮಹಾತ್ಮರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ದೇಶದ ಒಳಗಡೆ ಬಂದು ಸೈನಿಕರ ಹತ್ಯೆಯಾದರೂ ಕೇಂದ್ರ ಸರ್ಕಾರ ಮೌನ ಮುರಿಯುತ್ತಿಲ್ಲ. ಯುವ ಜನತೆ ಈ ಎಲ್ಲ ಸಂಗತಿಗಳನ್ನು ಅವಲೋಕಿಸಿ ಜಾಗೃತರಾಗಿ ಸರ್ಕಾರದ ತಪ್ಪು ಧೋರಣೆಗಳನ್ನು ಖಂಡಿಸಲು ಮುಂದಾಗಬೇಕು ಎಂದು ಕರೆ ನೀಡಿದರು.
ಬಾಗಲಕೋಟೆಯ ಜಪತೇಶ್ವರ ಸ್ವಾಮೀಜಿ ಮಾತನಾಡಿ, ಭಾವ, ರಾಗ, ತಾಳ ನೆಲೆಸಿದರೂ ಪವಿತ್ರ ಭಾರತ ದೇಶದಲ್ಲಿ ಗೋ ಮಾತೆಯನ್ನು ಹತ್ಯೆ ಮಾಡುತ್ತಿರುವುದು ದುರಂತದ ಸಂಗತಿ. ಬಿಜೆಪಿ ಸರ್ಕಾರ ಗೋ ಹತ್ಯೆ ನಿಷೇಧ ಮಾಡಲು ರಾಜ್ಯಪಾಲರಿಗೆ ಹಲವು ಬಾರಿ ಮನವಿ ಸಲ್ಲಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ತಿರಸ್ಕರಿಸುವ ಮೂಲಕ ಮತ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಗೋವುಗಳು ನಾಶವಾದರೆ ದೇಶದ ಸಂಪತ್ತು ನಾಶವಾದಂತೆ ಎಂದರು.
ಶಾಸಕ ಜಾರಿ ಮಾಡಿ
ಹಿರೇಮಠದ ಫಕ್ಕೀರೇಶ್ವರ ಸ್ವಾಮೀಜಿ ಮಾತನಾಡಿ, ಜಾತಿ ಸಂಘರ್ಷಗಳನ್ನು ಮರೆತು ಹಿಂದೂಗಳೆಲ್ಲರೂ ಜಾಗೃತರಾಗಿ ಸಂಘಟಿತರಾಗಬೇಕು ಎಂದರು. ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ್ಯದ ಸಂಚಾಲಕ ಕೇಶವ ಹೆಗಡೆ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಶಾಸನ ಜಾರಿಯಾಗಬೇಕು. ಕೇಂದ್ರ ಸರ್ಕಾರ ಕೋಮು ಮಸೂದೆ ಜಾರಿಗೊಳಿಸಿ ಹಿಂದೂಗಳನ್ನು ದಮನ ಮಾಡಿ, ಅನ್ಯ ಧರ್ಮದವರನ್ನು ರಕ್ಷಿಸಲು ಮುಂದಾಗಿದೆ. ವಶೀಕರಣದಿಂದ ಲವ್ ಜಿಹಾದ್ ಪ್ರಕರಣಗಳು ಹೆಚ್ಚುತ್ತಿದ್ದು, ಸರ್ಕಾರ ಇದನ್ನು ತಡೆಯಬೇಕು ಎಂದು ಆಗ್ರಹಿಸಿದರು.
ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಐರಣಿಯ ಗಜಗಂಠ ಸ್ವಾಮೀಜಿ, ಕರಗಿ ಮಠದ ಪ್ರಜ್ಞಾನಂದ ಶ್ರೀ, ಮುನವಳ್ಳಿಯ ಮುಕ್ತಾನಂದ ಶ್ರೀ, ಹುಬ್ಬಳ್ಳಿಯ ಮಹಾಂತೇಶ ಶ್ರೀ, ವಿರಕ್ತಮಠದ ಗದಿಗೇಶ್ವರ ಶ್ರೀ, ಅಕ್ಕಿಆಲೂರಿನ ರಮಾನಂದ ಶ್ರೀ, ವಿರೂಪಾಕ್ಷೇಶ್ವರ ಶ್ರೀ, ಸಿದ್ದಯ್ಯ ಒಡೆಯರ ಗುರೂಜಿ, ಯಶವಂತ ಶ್ರೀ, ಹೊಸರಿತ್ತಿಯ ಗುದ್ದಲೀಶ್ವರ ಶ್ರೀ, ವಿಶ್ವ ಹಿಂದೂ ಪರಿಷತ್ ಸಂಚಾಲಕ ರಮೇಶ ಕುಲಕರ್ಣಿ, ಲಲಿತ ಪ್ರಸಾದಜಿ, ಉಷಾ ದೀಕ್ಷಿತ್, ಬಿ.ಎನ್. ಮೂರ್ತಿ, ರಮೇಶ ಶರಾಂಡೆ, ಶ್ರೀಧರ ದೀಕ್ಷಿತ್ ಇದ್ದರು. ಎಸ್.ಜಿ. ಮಠದ ಕಾರ್ಯಕ್ರಮ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

