ಹಾವೇರಿ

ಖಾಸಗಿ ವಾಹನ ದರ್ಬಾರ್!

Published On :

ಕನ್ನಡಪ್ರಭ ವಾರ್ತೆ, ಶಿಗ್ಗಾಂವಿ, ನ. 12
ಇಲ್ಲಿನ ಸಾರಿಗೆ ಸಂಸ್ಥೆಯ ಹಳೆ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳ ದರ್ಬಾರ್ ಜೋರಾಗಿದೆ. ನಿಲ್ದಾಣಾಧಿಕಾರಿ ಹಾಗೂ ರಾತ್ರಿ ವೇಳೆ ಬೆಳಕಿನ ವ್ಯವಸ್ಥೆ ಇಲ್ಲದಿರುವ ಈ ನಿಲ್ದಾಣದಲ್ಲಿ ಕಸ ತುಂಬಿ ತುಳುಕುತ್ತಿದೆ.
ಹಳೆಯ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳನ್ನು ನಿಲ್ಲಿಸಿ, ರಾಜಾರೋಷವಾಗಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಸಾಗುತ್ತಿದ್ದರೂ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ಆರೋಪ. ನಿಲ್ದಾಣಾಧಿಕಾರಿ ಇಲ್ಲದೆ ಈ ಬಸ್ ನಿಲ್ದಾಣ ಕಸ ತುಂಬಿಕೊಂಡು ಹಾಳು ಕೊಂಪೆಯಾಗಿದೆ. ವಿದ್ಯುತ್ತಿಲ್ಲದೆ ಕತ್ತಲು ತುಂಬಿಕೊಳ್ಳುವ ಈ ಆವರಣ ರಾತ್ರಿ ವೇಳೆ ಅನೈತಿಕ ಚಟುವಟಿಕೆ ತಾಣವೂ ಆಗಿದೆ. ಹೀಗಾಗಿ, ಪ್ರಯಾಣಿಕರು ಇಲ್ಲಿಗೆ ಬರುವುದಕ್ಕೂ ಹೆದರುವಂತಾಗಿದೆ.
ಗ್ರಾಮೀಣ ಸಾರಿಗೆ
ಸದ್ಯ ಹಳೆ ಬಸ್ ನಿಲ್ದಾಣ ಗ್ರಾಮೀಣ ಸಾರಿಗೆ ನಿಲ್ದಾಣವಾಗಿ ಮಾರ್ಪಾಟಾಗಿದೆ. ಆದರೆ ಇದನ್ನು ಸಾರಿಗೆ ಸಂಸ್ಥೆ ಬಸ್‌ಗಳಿಗಿಂತ ಖಾಸಗಿ ವಾಹನಗಳೇ ಜಾಸ್ತಿ ಬಳಸಿಕೊಳ್ಳುತ್ತಿವೆ. ಟೆಂಪೋ, ಟಂಟಂಗಳು ನಿಂತು ಪ್ರಯಾಣಿಕರನ್ನು ಹತ್ತಿಸಿಕೊಳ್ಳುತ್ತಿವೆ. ಹಳೆ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಶೌಚಾಲಯದ ಪಕ್ಕದಲ್ಲೂ ವಾಹನ ನಿಲ್ಲಿಸಿಕೊಂಡು ಪ್ರಯಾಣಿಕರಿಗೆ ಕಾಯುತ್ತಾರೆ.
ಪಟ್ಟಣದಿಂದ ಹಳ್ಳಿಗಳಿಗೆ ತೆರಳುವ ಸಾರಿಗೆ ಬಸ್‌ಗಳು ನಿತ್ಯ 48 ಟ್ರಿಪ್ ಮಾಡುತ್ತಿವೆ. ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು ಓಡಾಡುತ್ತಾರೆ. ಉತ್ತಮ ಬಸ್‌ಗಳಿಲ್ಲ. ನಿಲ್ದಾಣದಲ್ಲಿ ಸ್ವಚ್ಛತೆ - ಶಿಸ್ತು ಇಲ್ಲ. ಈ ಬಗ್ಗೆ ವಿದ್ಯಾರ್ಥಿಗಳು ಸಾಕಷ್ಟು ಬಾರಿ ಪ್ರತಿಭಟನೆ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಇಲ್ಲಿ ರು. 9 ಲಕ್ಷ ವೆಚ್ಚದಲ್ಲಿ ಶೌಚಾಲಯ ಕಟ್ಟಿದ ಪುರಸಭೆ, ಮೂರು ವರ್ಷಗಳ ಬಳಿಕ ಅದನ್ನು ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಿತು. ಆದರೆ, ಅದು ಗಬ್ಬೆದ್ದು ನಾರುತ್ತಿದ್ದು, ಎಲ್ಲರೂ ಹಿಡಿಶಾಪ ಹಾಕುವಂತಾಗಿದೆ. ಅಲ್ಲದೆ, ಮೂತ್ರಾಲಯದ ಪಕ್ಕದಲ್ಲಿ ಒಂದೇ ಶೌಚಾಲಯ ಇರುವುದರಿಂದ ಜನ ತಿಪ್ಪೆ ಕಂಡಲ್ಲಿ ತಮ್ಮ ನಿಸರ್ಗದ ಕರೆಗೆ ಪ್ರತಿಕ್ರಿಯಿಸುತ್ತಾರೆ.
ಇನ್ನಾದರೂ ಹಳೆ ಬಸ್ ನಿಲ್ದಾಣದ ಸ್ಥಿತಿ ಸುಧಾರಿಸುವುದೇ? ಕಾದು ನೋಡಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.