ಉದ್ಯೋಗ ಕೊಡಿಸದ ಕಚೇರಿ!
ಕನ್ನಡಪ್ರಭ ವಾರ್ತೆ, ಹಾವೇರಿ, ನ. 12
ಕೆಲವು ವರ್ಷಗಳ ಹಿಂದೆ ನಿರುದ್ಯೋಗಿಗಳ ಪಾಲಿಗೆ ಸರ್ಕಾರಿ ನೌಕರಿ ಪಡೆಯಲು ಪ್ರಥಮ ಮೆಟ್ಟಿಲಿನಂತಿದ್ದ ಉದ್ಯೋಗ ವಿನಿಮಯ ಕಚೇರಿ ಇಂದು ಸಮಾಧಿ ಸ್ಥಿತಿಗೆ ತಲುಪಿದೆ. ಕಚೇರಿಯ ಸಿಬ್ಬಂದಿಯೇ ಮಾಡಲು ಕೆಲಸವಿಲ್ಲದೆ ಕುಳಿತುಕೊಳ್ಳುವಂತಾಗಿದೆ. ಕೆಲ ಜಿಲ್ಲೆಗಳಲ್ಲಿ ಆರಂಭವಾಗಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರವೂ ಇಲ್ಲಿ ಪ್ರಾರಂಭವಾಗಿಲ್ಲ.
ಇಲ್ಲಿಯ ಜಿಲ್ಲಾಡಳಿತ ಭವನದ ಒಂದು ಮೂಲೆಯಲ್ಲಿ ಉದ್ಯೋಗ ವಿನಿಮಯ ಕಚೇರಿಯಿದೆ. ಆದರೆ ಆ ಕಚೇರಿಯ ಕುರುಹು ಹೊರಗಿನಿಂದ ಕಾಣದು. ಏಕೆಂದರೆ ಬಾಗಿಲಲ್ಲೇ ಹಾಳಾದ ಕುರ್ಚಿ, ಟೇಬಲ್ ಇನ್ನಿತರ ಸಾಮಗ್ರಿಗಳನ್ನು ರಾಶಿ ಹಾಕಿಡಲಾಗಿದೆ. ಕಚೇರಿ ಪ್ರವೇಶಿಸಿದರೂ ಸಿಬ್ಬಂದಿ ಕಾಣುವುದಿಲ್ಲ. ತುಸು ಮುಂದಕ್ಕೆ ಹೋಗಿ ನೋಡಿದರೆ ಅವರ ದರ್ಶನವಾಗುತ್ತದೆ. ಆದರೆ ಅಲ್ಲಿರುವ ಸಿಬ್ಬಂದಿಗೆ ಕೆಲಸವೇ ಇಲ್ಲ!
ನೋಂದಣಿಯಷ್ಟೇ...
ಉದ್ಯೋಗ ಮತ್ತು ತರಬೇತಿ ಇಲಾಖೆಯಡಿ ನಡೆಯುವ ಈ ಕಚೇರಿಯಿಂದ ನಿರುದ್ಯೋಗಿಗಳ ನೋಂದಣಿಯಷ್ಟೇ ಆಗುತ್ತಿದೆ. ಆದರೆ ಅವರಿಗೆ ಉದ್ಯೋಗ ಕೊಡಿಸುವ ಅಥವಾ ಕೌಶಲ್ಯ ತರಬೇತಿ ನೀಡಲಾಗುತ್ತಿಲ್ಲ. ಹೀಗಾಗಿ, ಇಲಾಖೆಯಿಂದ ನಿರುದ್ಯೋಗಿಗಳಿಗೆ ಯಾವುದೇ ಪ್ರಯೋಜನ ಸಿಗುತ್ತಿಲ್ಲ. ಕಚೇರಿ ಸಿಬ್ಬಂದಿ ವೇತನ ಇತ್ಯಾದಿಗಳಿಗೆ ಮಾಡುವ ಖರ್ಚು ಸರ್ಕಾರಕ್ಕೆ ಹೊರೆಯಾಗುತ್ತಿದೆಯೇ ಹೊರತು ನಿರುದ್ಯೋಗಿಗಳ ಪಾಲಿಗೆ ಕಿಂಚಿತ್ತೂ ಸಹಾಯ ಆಗುತ್ತಿಲ್ಲ. ಆದರೂ ಇದು ಉದ್ಯೋಗ ವಿನಿಮಯ ಕಚೇರಿ.
4818 ಜನರ ನೋಂದಣಿ
ಇದುವರೆಗೆ ಜಿಲ್ಲೆಯ 4818 ನಿರುದ್ಯೋಗಿಗಳು ವಿನಿಮಯ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಇದು ಹಾವೇರಿ ಜಿಲ್ಲೆಯಾದಾಗಿನಿಂದ ಇಲ್ಲಿಯವರೆಗೆ ರಿನಿವಲ್ ಮಾಡಿಕೊಂಡ ಅಭ್ಯರ್ಥಿಗಳ ಸಂಖ್ಯೆ. ಇದರಲ್ಲಿ 3,582 ಪುರುಷ ಹಾಗೂ 1,236 ಮಹಿಳಾ ಅಭ್ಯರ್ಥಿಗಳು ಸೇರಿದ್ದಾರೆ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪಾಸಾದವರ ಸಂಖ್ಯೆಯೇ ಜಾಸ್ತಿ. ಏಳರಿಂದ 10ನೇ ತರಗತಿ ಕಲಿತವರೂ ಇದ್ದಾರೆ. ಆದರೆ ಪದವಿ ಪೂರೈಸಿದವರಲ್ಲಿ ಬೆರಳೆಣಿಕೆ ಜನರು ಮಾತ್ರ ಇಲ್ಲಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಪ್ರತಿ ದಿನ ನಾಲ್ಕಾರು ಜನ ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಮಂಜೂರಾಗಿರುವ ಹುದ್ದೆಗಳೂ ಖಾಲಿಯಿವೆ. ಉದ್ಯೋಗಾಧಿಕಾರಿ ಹುದ್ದೆ ಪ್ರಭಾರಿ ನಿರ್ವಹಣೆಯಾಗುತ್ತಿದ್ದು, ಇಬ್ಬರು ನೌಕರರು ನಿಯೋಜನೆ ಮೇಲೆ ಬಂದಿದ್ದಾರೆ. ಇವರಿಗೂ ಇಲ್ಲಿ ಹೆಚ್ಚಿನ ಕೆಲಸವಿಲ್ಲ.
ಎಚ್ಆರ್ಡಿ ಕೇಂದ್ರವೂ ಇಲ್ಲ
ಈಗಾಗಲೇ ಕೆಲ ಜಿಲ್ಲೆಗಳ ಉದ್ಯೋಗ ವಿನಿಮಯ ಕಚೇರಿಯಲ್ಲಿ ಮಾನವ ಸಂಪನ್ಮೂಲ ಕೇಂದ್ರಗಳು ಆರಂಭವಾಗಿವೆ. ಖಾಸಗಿ ಸಂಸ್ಥೆಗಳು ಇವನ್ನು ನಿರ್ವಹಿಸುತ್ತವೆ. ಖಾಸಗಿ ಕಂಪನಿಗಳಗಳು, ಉದ್ದಿಮೆಗಳಿಗೆ ಅರ್ಹ ಅಭ್ಯರ್ಥಿಗಳು ಬೇಕಾದಲ್ಲಿ ಈ ಕೇಂದ್ರ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸಿ ಉದ್ಯೋಗ ಕೊಡಿಸಲು ಪ್ರಯತ್ನಿಸುತ್ತದೆ. ಅಲ್ಲದೇ ಉದ್ಯೋಗ ಮೇಳ, ಕೌಶಲ್ಯ ಅಭಿವೃದ್ಧಿ ತರಬೇತಿ ಹಮ್ಮಿಕೊಂಡು ಸ್ವಂತ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ನಿರುದ್ಯೋಗಿಗಳಿಗೆ ನೆರವಾಗುತ್ತದೆ. ಆದರೆ ಹಾವೇರಿಯಲ್ಲಿ ಇನ್ನೂ ಎಚ್ಆರ್ಡಿ ವಿಭಾಗವನ್ನೇ ಆರಂಭಿಸಿಲ್ಲ. ಇದರಿಂದ ಕಚೇರಿ ಇದ್ದರೂ ಉದ್ಯೋಗ ವಿನಿಮಯ ಆಗುತ್ತಿಲ್ಲ.
ಉಪಯೋಗವಿಲ್ಲದ್ದು ಏಕೆ ಬೇಕು?
ಜಿಲ್ಲೆಯಲ್ಲಿ ನಿರುದ್ಯೋಗಿಗಳ ಸಂಖ್ಯೆ ಸಾಕಷ್ಟಿದೆ. ಆದರೆ ಪ್ರಸ್ತುತ ಯಾವುದೇ ನೌಕರಿಯನ್ನು ಉದ್ಯೋಗ ವಿನಿಮಯ ಕಚೇರಿ ಮೂಲಕ ನೀಡುತ್ತಿಲ್ಲ. ನೇರ ನೇಮಕಾತಿ, ಅರ್ಹತಾ ಪರೀಕ್ಷೆ ಮೂಲಕವೇ ಸರ್ಕಾರದ ಇಲಾಖೆಗಳಿಗೆ ಹುದ್ದೆ ತುಂಬಲಾಗುತ್ತಿದೆ. ಹಾಗಿದ್ದ ಮೇಲೆ ಜಿಲ್ಲೆಗೊಂದರಂತೆ ಇರುವ ಈ ಉದ್ಯೋಗ ವಿನಿಮಯ ಕಚೇರಿಯಿಂದ ಪ್ರಯೋಜನವಾದರೂ ಏನು ಎನ್ನುವುದು ಸಾರ್ವಜನಿಕರ ಪ್ರಶ್ನೆ. ನೋಂದಣಿ ಮಾಡಿಸಿಕೊಂಡರೂ ಉದ್ಯೋಗ ನೀಡಿಕೆಯಲ್ಲಿ ಯಾವುದೇ ಪ್ರಾಶಸ್ತ್ಯ ದೊರೆಯದ್ದರಿಂದ ಇಲಾಖೆಯ ಅಗತ್ಯವೇ ಕಾಣುತ್ತಿಲ್ಲ. ಆದರೆ ವೃತ್ತಿ ತರಬೇತಿ, ಕೌಶಲ್ಯಾಭಿವೃದ್ಧಿ ಶಿಬಿರ ಇತ್ಯಾದಿ ಹಮ್ಮಿಕೊಂಡು ತುಸು ಕ್ರಿಯಾಶೀಲವಾಗಿ ಕೆಲಸ ಮಾಡಿದರೆ ಅದರಿಂದಾದರೂ ನಿರುದ್ಯೋಗಿಗಳಿಗೆ ಪ್ರಯೋಜನವಾದೀತು.
ಸರಾಸರಿ 5 ನೋಂದಣಿ
ನಿತ್ಯ ಸರಾಸರಿ ಐವರು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಆದರೆ ಈ ಹಿಂದೆ ನೋಂದಣಿ ಮಾಡಿಕೊಂಡವರು ರಿನಿವಲ್ ಮಾಡಿಸಿಕೊಳ್ಳುತ್ತಿಲ್ಲ. ಬ್ಯಾಂಕ್ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಒಂದು ವಾರದ ತರಬೇತಿ ನೀಡಲಾಗಿದೆ. ರೇಲ್ವೆ ಪರೀಕ್ಷೆ ಬರೆಯುವವರಿಗೂ ತರಬೇತಿ ನೀಡಲು ನಿರ್ಧರಿಸಲಾಗಿದೆ. ಎಚ್ಆರ್ಡಿ ವಿಭಾಗ ಆರಂಭವಾದರೆ ಅನುಕೂಲವಾಗುತ್ತದೆ.
-ಕಿರಣಕುಮಾರ್
ಸಹಾಯಕ ಉದ್ಯೋಗಾಧಿಕಾರಿ
-ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

