ಇಂಥ ದುರಂತ ಕಂಡೇ ಇಲ್ಲ
ಕನ್ನಡಪ್ರಭ ವಾರ್ತೆ, ಹಾವೇರಿ, ನ. 14
ಗುರುತು ಪತ್ತೆಯಾಗದ ರೀತಿಯಲ್ಲಿ ಜನರು ಸಜೀವ ದಹನವಾಗಿ, ಇಡೀ ಬಸ್ ಸುಟ್ಟ ಘಟನೆಯನ್ನು ನಾವೆಂದೂ ನೋಡಿಲ್ಲಾರಿ... ನಮ್ಮ ಗ್ರಾಮದಿಂದ ಹಾದುಹೋದ ಹೆದ್ದಾರಿಯಲ್ಲಿ ಈ ದುರಂತ ಆಗಬಾರದಿತ್ತು.
ಇದು ಗುರುವಾರ ಬಸ್ ದುರಂತ ನಡೆದ ಸವಣೂರು ತಾಲೂಕಿನ ಕುಣಿಮಳ್ಳೆಳ್ಳಿ ಗ್ರಾಮಸ್ಥರ ನುಡಿ.
ಬಸ್ ದುರಂತ ನಡೆದ ಕೆಲ ಸಮಯದಿಂದ ಸ್ಥಳಕ್ಕೆ ಆಗಮಿಸಲು ಆರಂಭಿಸಿದ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸಂಜೆ ವರೆಗೂ ಬರುತ್ತಲೇ ಇದ್ದರು. ಎಲ್ಲರದ್ದೂ ಇದೇ ನುಡಿ.
ಅಬ್ಬಾ.. ಇಂಥ ಘಟನೆ ನಮ್ಮೂರಿನಲ್ಲಿ ಆಗಬಾರದಿತ್ತು. ಇಂಥ ಘಟನೆಯನ್ನೂ ಎಂದೂ ನೋಡೇ ಇಲ್ಲ ಎಂದು ಹೇಳುತ್ತಲೇ ಘಟನೆ ಬಗ್ಗೆ ಮರುಗುತ್ತಿದ್ದರು.
ನಸುಕಿನ 2.30ರ ಸುಮಾರಿಗೆ ದುರ್ಘಟನೆ ಸಂಭವಿಸಿದಾಗ ಸ್ಥಳೀಯರಿಗೂ ಅದು ಇಷ್ಟು ದೊಡ್ಡ ದುರಂತ ಎಂಬುದು ಗೊತ್ತಾಗಿರಲಿಲ್ಲ. ಆದರೆ, ಇಡೀ ಬಸ್ಗೆ ಬೆಂಕಿ ಹೊತ್ತಿ ಉರಿಯತೊಡಗಿದಾಗ ಕುಣಿಮಳ್ಳೆಳ್ಳಿ ಗ್ರಾಮಸ್ಥರು ನಿದ್ದೆಯಿಂದ ಎದ್ದು ಸ್ಥಳಕ್ಕೆ ಆಗಮಿಸಲು ಆರಂಭಿಸಿದರು. ಕಣ್ಣೆದುರೇ ಕರಕಲು ಶವಗಳನ್ನು ಹೊತ್ತೊಯ್ಯುವುದನ್ನು ಕಂಡು ಚಳಿಯಲ್ಲೂ ಅವರು ಬೆವೆತಿದ್ದರು. ಕೆಲವರು ಪಶ್ಚಾತ್ತಾಪ ನುಡಿಗಳನ್ನಾಡಿದರೆ, ಮತ್ತೆ ಕೆಲವರು ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಕಾರ್ಯಾಚರಣೆಗೆ ನೆರವಾದರು.
ನಮ್ಮೂರಿನ ರಸ್ತೆಯಲ್ಲಿ ಚಿಕ್ಕಪುಟ್ಟ ಅಪಘಾತಗಳು ಮಾಮೂಲಿ. ಅದರಲ್ಲಿ ಒಂದಿಬ್ಬರು ಮೃತಪಟ್ಟಿರುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ಯಾರು ಸತ್ತಿದ್ದಾರೆ ಎಂಬುದೂ ಗೊತ್ತಾಗದ ರೀತಿಯಲ್ಲಿ ದೇಹಗಳು ಕರುಕಲಾಗಿವೆ. ಕೆಲ ಶವಗಳ ಮಾಂಸ ಬೆಂದು ಉದುರುತ್ತಿತ್ತು ಎಂದು ತಾವುನೋಡಿದ ಅನುಭವ ಹಂಚಿಕೊಂಡರು ಸಮೀಪದ ಬಂಕಾಪುರದ ರಾಜೇಶ.
ಇದೇ ರೀತಿ ಸುದ್ದಿ ತಿಳಿದು ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸುತ್ತಲೇ ಇದ್ದರು. ಪೊಲೀಸರಿಗೆ ಜನರನ್ನು ನಿಯಂತ್ರಿಸುವುದೇ ದೊಡ್ಡ ಕೆಲಸವಾಗಿತ್ತು. ಅಲ್ಲದೆ, ಹೆದ್ದಾರಿಯ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆ ಹೆಚ್ಚಾಗಿತ್ತು. ಮತ್ತೊಂದು ಭಾಗದಿಂದ ಹೋಗಿಬರುವ ವಾಹನದವರೂ ಸ್ವಲ್ವ ನಿಂತೇ ಮುಂದಕ್ಕೆ ಸಾಗುತ್ತಿದ್ದರು. ಎಲ್ಲರದ್ದೂ ಒಂದೇ ಮಾತು... ಛೇ... ಹೀಗಾಗಬಾರದಿತ್ತು.
ಹೆದ್ದಾರಿಯಲ್ಲಿ ಮಾಮೂಲಿಯಾಗಿ ಅಪಘಾತಗಳು ನಡೆಯುತ್ತಲೇ ಇರುತ್ತವೆ. ಲಾರಿಗಳ ಟೈರ್ ಸ್ಫೋಟಗೊಂಡು ನಿದ್ದೆಯಿಂದ ಎಚ್ಚೆತ್ತುಕೊಂಡ ಅನೇಕ ಉದಾಹರಣೆಗಳು ಇವೆ. ಆದರೆ, ಇಂದು ನಡೆದ ಘಟನೆ ಮನಸ್ಸನ್ನೇ ಘಾಸಿಗೊಳಿಸಿದೆ. ನಸುಕಿನಲ್ಲಿ ಸ್ಫೋಟದ ಸದ್ದು ಕೇಳಿಸಿತು. ಆಗಲೂ ಸುಮ್ಮನೇ ಇದ್ದೆ. ನಂತರ ಜನರ ಆಕ್ರಂದನ ಕೇಳಿಸಿತು. ಮನೆಯಿಂದ ಹೊರಬಂದು ನೋಡಿದಾಗ ಇಡೀ ಬಸ್ಸಿಗೇ ಬೆಂಕಿ ಆವರಿಸಿತ್ತು. ಮಗು ಸೇರಿದಂತೆ ಕರಕಲಾದ ಶವ ಸಾಗಿಸುವುದನ್ನು ಕಣ್ಣಾರೆ ಕಂಡೆ. ಈ ಹಿಂದೆ ಎಂದೂ ಇಂಥ ದುರ್ಘಟನೆ ಇಲ್ಲಿ ನಡೆದಿರಲಿಲ್ಲ. ನಾವು ನೋಡಿಯೂ ಇಲ್ಲ.
ರಮೇಶ ಪಾಟೀಲ, ಪ್ರತ್ಯಕ್ಷದರ್ಶಿ
ನಾರಾಯಣ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

