ಸುದ್ದಿ ಸಂಕ್ಷೇಪ
ಇಂದು ವಿದ್ಯುತ್ತಿಲ್ಲ
ಹಾವೇರಿ: ಸವಣೂರು 110, 33 ಹಾಗೂ 11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನ. 17ರಂದು ತುರ್ತು ನಿರ್ವಹಣಾ ಕಾಮಗಾರಿ ಜರುಗಲಿದೆ. ಈ ಸ್ಟೇಷನ್ಗಳಿಂದ ಹೊರ ಹೋಗುವ ಲಕ್ಷ್ಮೇಶ್ವರ ಸ್ಪಿನ್ನಿಂಗ್ ಮಿಲ್, ಶಿಗ್ಗಾಂವಿ ಸ್ಟೇಷನ್ಗಳಿಗೆ, ಗುಜರಾತ್ ಅಂಬುಜಾ ಘಟಕ ಹಾಗೂ ಎಲ್ಲ 11 ಕೆವಿ ಫೀಡರ್ಗಳಿಗೆ ಭಾನುವಾರ ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಹಾವೇರಿ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಒ.ಎಸ್. ಶಶಿಧರ ವಿನಂತಿಸಿದ್ದಾರೆ.
ಸಿಬ್ಬಂದಿ ಧರಣಿ
ಹಿರೇಕೆರೂರು: ರಟ್ಟೀಹಳ್ಳಿ ಶ್ರೀ ಕುಮಾರೇಶ್ವರ ಸಂಯುಕ್ತ ಪದವಿಪೂರ್ವ ಕಾಲೇಜಿನ ಸಿಬ್ಬಂದಿ ಶನಿವಾರ ತರಗತಿಗಳಿಗೆ ಧಕ್ಕೆ ಬರದಂತೆ ತಮ್ಮ ಬೇಡಿಕೆ ಈಡೇರಿಕೆಗಾಗಿ ಕಪ್ಪು ಪಟ್ಟಿ ಧರಿಸಿ, ಸಾಂಕೇತಿಕ ಮುಷ್ಕರ ನಡೆಸಿದರು. ಸುಪ್ರೀಂ ಕೋರ್ಟ್ ಆದೇಶದಂತೆ ಕಾಲ್ಪನಿಕ ವೇತನ ಮಂಜೂರಾತಿ, 2006ರ ಬಳಿಕ ನೇಮಕಾತಿಯಾದವರಿಗೆ ಪಿಂಚಣಿ, ಅನುದಾನಿತ ಸಂಸ್ಥೆಗಳಲ್ಲಿ ಬೋಧಕ-ಬೋಧಕೇತರ ಹುದ್ದೆ ಭರ್ತಿಗೆ ಆಗ್ರಹಿಸಿದರು. ಪ್ರಾಚಾರ್ಯ ಎನ್.ಸಿ. ಕಠಾರೆ, ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಎಂ.ಎಸ್. ಬೆಟ್ಟಣ್ಣನವರ, ಬಾಲಕರ ಪ್ರೌಢಶಾಲೆಯ ಮುಖ್ಯಶಿಕ್ಷಕ ಪಿ.ಎಚ್. ಬೋಗಾರ, ಡಿ. ಭರಮಗೌಡರ ಇದ್ದರು.
ಪ್ರತಿಭಾನ್ವೇಷಣೆ ಪರೀಕ್ಷೆ
ಹಾವೇರಿ: ಎನ್ಎಂಎಂಎಸ್ ಹಾಗೂ ರಾಷ್ಟ್ರ ಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆ ನ. 17ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಪ್ರೌಢಶಾಲೆಯಲ್ಲಿ ಜರುಗಲಿದೆ. 8ನೇ ತರಗತಿಯ 555 ವಿದ್ಯಾರ್ಥಿಗಳು ಹಾಗೂ 10ನೇ ತರಗತಿಯ 82 ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಪರೀಕ್ಷೆ ಸುಗಮವಾಗಿ ನಡೆಯಲು ಸೂಕ್ತ ಸಿಬ್ಬಂದಿ, ರಕ್ಷಣಾ ವ್ಯವಸ್ಥೆ ಮಾಡಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಕನಕದಾಸ ಜಯಂತಿ ಆಚರಣೆ
ಹಾವೇರಿ: ಶಿಗ್ಗಾಂವಿ ತಾಲೂಕು ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ಕನಕದಾಸ ಜಯಂತಿ ಆಚರಣೆ ನ. 20ರಂದು ಬೆಳಗ್ಗೆ 11 ಗಂಟೆಗೆ ಜರುಗಲಿದೆ.
ಡಾ ಸಿದ್ದಣ್ಣ ಎಫ್. ಜಕಬಾಳ ಕನಕದಾಸರು ಹಾಗೂ ಜನಪದ ವಲಯ ಕುರಿತು ವಿಶೇಷ ಉಪನ್ಯಾಸ ನೀಡುವರು. ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಲಿದ್ದು, ಕುಲಸಚಿವ ಪ್ರೊ ಡಿ.ಬಿ. ನಾಯಕ ಉಪಸ್ಥಿತರಿರುವರೆಂದು ವಿಸ್ತರಣೆ ಹಾಗೂ ಸಲಹಾ ಕೇಂದ್ರದ ನಿರ್ದೇಶಕ ಹಾಗೂ ಕುಲಸಚಿವ (ಮೌಲ್ಯಮಾಪನ) ಪ್ರೊ ಸ.ಚಿ. ರಮೇಶ ತಿಳಿಸಿದ್ದಾರೆ.
ನಾಳೆ ವಿಚಾರ ಸಂಕಿರಣ
ಹಾವೇರಿ: ಶಿಗ್ಗಾಂವಿ ತಾಲೂಕು ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ನಡುಮನೆ ಸಭಾಂಗಣದಲ್ಲಿ ನ. 18ರಂದು ಬೆಳಗ್ಗೆ 10.30ಕ್ಕೆ ಜಾನಪದ ಕ್ಷೇತ್ರಕ್ಕೆ ಡಾ ರಾಗೌ ಅವರ ಕೊಡುಗೆ ಕುರಿತು ವಿಚಾರ ಸಂಕಿರಣ ಜರುಗಲಿದೆ. ಕುಲಪತಿ ಪ್ರೊ ಅಂಬಳಿಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಲಿದ್ದು, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ ಜಯಪ್ರಕಾಶಗೌಡ ಮುಖ್ಯ ಅತಿಥಿ. ರಾಗೌ ಅವರ ಜಾನಪದ ತಾತ್ವಿಕ ಚಿಂತನೆಗಳು ಕುರಿತು ಪಾಂಡವಪುರದ ಪ್ರಾಧ್ಯಾಪಕ ಡಾ ಬೋರೇಗೌಡ ಚಿಕ್ಕಮರಳಿ, ರಾಗೌ ಅವರ ಜಾನಪದ ಕ್ಷೇತ್ರಕಾರ್ಯ ಮತ್ತು ಸಂಗ್ರಹಗಳು ಕುರಿತು ಭಾರತೀನಗರದ ಪ್ರಾಧ್ಯಾಪಕ ಡಾ ಮ. ರಾಮಕೃಷ್ಣ ಹಾಗೂ ಕನ್ನಡ ಜಾನಪದ ಸಂದರ್ಭ ಮತ್ತು ರಾಗೌ ವಿಷಯವಾಗಿ ಮೈಸೂರು ಪ್ರಾಧ್ಯಾಪಕ ಡಾ ಪಿ. ಬೆಟ್ಟೇಗೌಡ ಉಪನ್ಯಾಸ ನೀಡುವರು. ಮಂಡ್ಯದ ಕ್ಷೀರಸಾಗರ ಮಿತ್ರ ಕೂಟದ ಕೀಲಾರ ಅವರಿಂದ ಪಟಾ ಕುಣಿತ ಪ್ರದರ್ಶನವಿದೆ ಎಂದು ಕುಲಸಚಿವ ಪ್ರೊ ಡಾ ಡಿ.ಬಿ. ನಾಯಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಲ್ಯಾಣ ಭಾಗ್ಯ ಯೋಜನೆ ಜಾರಿ ಮಾಡಿ: ಪ್ರತಿಭಟನೆ
ರಾಣಿಬೆನ್ನೂರು: ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆಯನ್ನು ಹಿಂಪಡೆದು, ಕಲ್ಯಾಣ ಭಾಗ್ಯ ಎಂಬುದಾಗಿ ಮರು ನಾಮಕರಣ ಮಾಡಿ, ಎಲ್ಲ ಸಮುದಾಯದ ಬಡವರಿಗೆ ವಿಸ್ತರಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಹಿಂದೂ ಮಹಾಸಭಾ ಕಾರ್ಯಕರ್ತರು ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಸೀಲ್ದಾರ್ ಕಚೇರಿ ಎದುರು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರತಿಕೃತಿ ದಹಿಸಿ, ತಹಸೀಲ್ದಾರ್ಗೆ ಮನವಿ ಸಲ್ಲಿಸಿದರು. ಕೆಇಬಿ ಗಣೇಶ ದೇವಸ್ಥಾನದಿಂದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಗೌರವಾಧ್ಯಕ್ಷ ಪ್ರಣವಾನಂದರಾಮ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಅಧ್ಯಕ್ಷ ರವಿಕುಮಾರ ಶಾಸ್ತ್ರೀ ನಾಗಾಸಾಧು, ಶಿವರಾಜ ವಡ್ಡರ, ಜಗದೀಶ ಕೆರೂಡಿ, ಅಜಯ್ ವಿಜಯ್, ಡಾ ಬಸವರಾಜ ಹಡಪದ, ನೀಲಪ್ಪ ಲಮಾಣಿ, ವಿಜಯ ಬಾವಾ, ವಿವೇಕಾನಂದ ಪಾಲನಕರ, ಶ್ರೀನಿವಾಸ ಇದ್ದರು.
ಬೆಂಬೆಲೆ, ಪರಿಹಾರಕ್ಕಾಗಿ ಪ್ರತಿಭಟನೆ
ರಾಣಿಬೆನ್ನೂರು: ಪ್ರತಿ ಕ್ವಿಂಟಲ್ ಹತ್ತಿಗೆ ರು. 10 ಸಾವಿರ, ಗೋವಿನ ಜೋಳಕ್ಕೆ ರು. 2500, ಬತ್ತ ಹಾಗೂ ಕಬ್ಬಿಗೆ ರು. 3500 ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ರೈತರು ಶನಿವಾರ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದರು.
ನೇತೃತ್ವ ವಹಿಸಿದ್ದ ರೈತ ಸಂಘದ ಅಧ್ಯಕ್ಷ ಬಸವರಾಜ ಕಡೂರು, ಕಳಪೆ ಬೀಜಗಳಿಂದಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಆದರೂ ಪರಿಹಾರ ಕೊಟ್ಟಿಲ್ಲ. ಹಲಗೇರಿ ಗ್ರಾಮದ ರೈತ ಸಿದ್ದಪ್ಪ ಉಜ್ಜಪ್ಪ ನಾರಾಜ್ಜಿ ಆತ್ಮಹತ್ಯೆ ಮಾಡಿಕೊಂಡಿದ್ದು, ಮಹಿಕೋ ಕಂಪನಿ ರೈತನ ಕುಟುಂಬಕ್ಕೆ ರು. 5 ಲಕ್ಷ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ನಗರದ ವೀಳ್ಯದೆಲೆ ಮಾರುಕಟ್ಟೆಯಲ್ಲಿ ಎಲೆ ಖರೀದಿಸುವ ದಲಾಲರು ರೈತರು ತರುವ ಪೆಂಡಿಯಿಂದ 250ಕ್ಕೂ ಹೆಚ್ಚು ಎಲೆಗಳನ್ನು ಸ್ಯಾಂಪಲ್ ತೆಗೆದುಕೊಳ್ಳುತ್ತಾರೆ. ರೈತರ ಎದುರಲ್ಲಿ ಕೂಗಿದ ಹರಾಜು ದರಕ್ಕಿಂತ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ರೈತರ ವೀಳ್ಯದೆಲೆ ಕದಿಯುವ ದಲಾಲರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ತಹಸೀಲ್ದಾರ್ ಹನುಮಂತಪ್ಪ ಬಡದಾಳ ಮನವಿ ಸ್ವೀಕರಿಸಿದರು. ಕಾರ್ಯದರ್ಶಿ ದಿಳ್ಳೆಪ್ಪ ಕಂಬಳಿ, ಪ್ರಕಾಶ ದೇಸಾಯಿ, ಚನ್ನವೀರಪ್ಪ ಹೊನ್ನಚಿಕ್ಕಣ್ಣನವರ, ಮಲ್ಲಿಕಾರ್ಜುನ ಅಣ್ಣಪ್ಪಳವರ, ರಮೇಶಗೌಡ ಕರಬಸಳ್ಳವರ, ಸುರೇಶ ದುಳೆಹೋಳಿ, ರಾಜಶೇಖರ ಮಾಗನೂರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

