ಹಾವೇರಿ

30ರಂದು ತಿಲ ಲಕ್ಷ ದೀಪೋತ್ಸವ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ನ. 24
ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ನೆವಾಸ ತಾಲೂಕಿನ ಶನಿ ಶಿಂಗಣಾಪುರ ಗ್ರಾಮದಲ್ಲಿರುವ ಶನೇಶ್ವರ ದೇವಸ್ಥಾನದ ಮಾದರಿಯಲ್ಲೇ ಇಲ್ಲಿನ ಗಂಗಾಪುರ ರಸ್ತೆಯಲ್ಲಿರುವ ಹಿರೇಮಠದ ಪರಿಸರದಲ್ಲಿ ರು. 10 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶನೇಶ್ವರ ಸ್ವಾಮಿಯ ದೇವಸ್ಥಾನದ ಜಾತ್ರೆ ನ. 28ರಿಂದ ನಡೆಯಲಿದೆ.
ದೇವಸ್ಥಾನದಲ್ಲಿ ಶನೈಶ್ಚರ, ಆಂಜನೇಯ ಹಾಗೂ ವಿಘ್ನೇಶ್ವರ ಮೂರ್ತಿಗಳು ಪ್ರತಿಷ್ಠಾಪನೆಗೊಂಡು ವರ್ಷ ಗತಿಸಿದೆ. ಅಮಾವಾಸ್ಯೆ, ಹುಣ್ಣಿಮೆ ಹಾಗೂ ವಿಶೇಷ ದಿನಗಳಲ್ಲಿ ಇಲ್ಲಿ ಭಾರಿ ಸಂಖ್ಯೆಯ ಭಕ್ತರು ಬರುತ್ತಿದ್ದಾರೆ.
ನ. 30ರಂದು ಕಾರ್ತಿಕ ಮಾಸದ ಕೊನೆಯ ಶನಿವಾರ ಉಜ್ಜಯಿನಿ, ಶ್ರೀಶೈಲ ಹಾಗೂ ಕಾಶಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಲೋಕ ಕಲ್ಯಾಣಾರ್ಥವಾಗಿ ತಿಲ (ಎಳ್ಳೆಣ್ಣಿ) ಲಕ್ಷ ದೀಪೋತ್ಸವ ಕಾರ್ಯಕ್ರಮ ನಡೆಸಲು ಸಿದ್ಧತೆಗಳು ಭರದಿಂದ ಸಾಗಿವೆ ಎಂದು ಹಿರೇಮಠದ ಪಟ್ಟಾಧ್ಯಕ್ಷ ಷ.ಬ್ರ. ಶಿವಯೋಗಿ ಶಿವಾಚಾರ್ಯರು ಹೇಳಿದರು.
28ರಂದು ಕುಂಭಮೇಳ, ರುದ್ರಾಭಿಷೇಕ
ನ. 28ರಂದು ಬೆಳಗಿನ ಜಾವ 5 ಗಂಟೆಗೆ ಶಿವಯೋಗಿ ಶಿವಾಚಾರ್ಯರ ನೇತೃತ್ವದಲ್ಲಿ ತುಂಗಭದ್ರಾ ನದಿಯಲ್ಲಿ ಗಂಗಾಪೂಜೆ ನೆರವೇರಲಿದೆ. ಬಳಿಕ ನದಿಯಿಂದ ಕುದರಿಹಾಳ, ಗಂಗಾಪುರ ಮಾರ್ಗವಾಗಿ 10 ಕಿ.ಮೀ. ದೂರ ಕುಂಭಮೇಳ ಸಂಚರಿಸಿ, ಮಠ ತಲುಪಲಿದೆ. ಶನೈಶ್ಚರ ಸ್ವಾಮಿ ಮೂರ್ತಿಯನ್ನು ತುಂಗಾ ಜಲದಿಂದ ಶುದ್ಧಗೊಳಿಸಿ, ಮಹಾ ರುದ್ರಾಭೀಷೇಕ ನಡೆಯಲಿದೆ.
ತಿಲ ಲಕ್ಷ ದೀಪೋತ್ಸವಕ್ಕೆ ಸಿದ್ಧತೆ
ಪ್ರಕೃತಿಯ ಸ್ವರೂಪವಾದ 1 ಲಕ್ಷ ಮಣ್ಣಿನ ಪ್ರಣತಿಗಳನ್ನು ಆಕಳ ಸಗಣಿಯಿಂದ ಸಾರಿಸಿದ ನೆಲದ ಮೇಲಿಟ್ಟು ತಲಾ 15 ಕೆಜಿಯ 50 ಡಬ್ಬ ಎಣ್ಣೆಗಳನ್ನು ಪ್ರಣತಿಗಳಲ್ಲಿ ಸುರಿಯಲಾಗುವುದು. ಸುಮಾರು 15 ಕ್ವಿಂಟಲ್ ಎಳ್ಳನ್ನು 15 ಸಾವಿರ ಮೀ. ಕರಿ ಬಟ್ಟೆಯಲ್ಲಿ ಸುತ್ತಿ, ಒಟ್ಟು 1 ಲಕ್ಷ ಗಂಟು ಕಟ್ಟಿ, ಅವುಗಳನ್ನು ಪ್ರಣತಿಗಳ ಮೇಲಿಟ್ಟು, ಕಡೆಯ ಕಾರ್ತಿಕ ಶನಿವಾರವಾದ ನ. 30ರಂದು ತಿಲ ಲಕ್ಷ ದೀಪೋತ್ಸವ ಆಚರಿಸಲು ಸಿದ್ಧತೆ ನಡೆದಿದೆ.
ಅಂದಾಜು 2 ಕೋಟಿ ವೆಚ್ಚದಲ್ಲಿ ಹಿರೇಮಠದ ಪರಿಸರದ ಆವರಣದಲ್ಲಿ ಗಾಯಿತ್ರಿ ಮಂದಿರ, ದ್ವಾದಶ ಜ್ಯೋರ್ತಿಲಿಂಗಗಳ ಸ್ಥಾಪನೆ, ಉಜ್ಜಯಿನಿ ಸಿದ್ಧಲಿಂಗ ಜಗದ್ಗುರುಗಳ ಮೂರ್ತಿ ಪ್ರತಿಷ್ಠಾಪನೆ ಹಾಗೂ ಭಕ್ತರ ಅನುಕೂಲಕ್ಕಾಗಿ ಧ್ಯಾನಮಂದಿರ ನಿರ್ಮಿಸಲಾಗುವುದು. ತಿಲ ಲಕ್ಷ ದೀಪೋತ್ಸವ ಹಾಗೂ ಇತರ ಕಾರ್ಯಕ್ರಮಗಳ ಮಾಹಿತಿಗಾಗಿ ಭಕ್ತರು ಮೊ. 9481526053 ಅಥವಾ 7204341998ಗೆ ಸಂಪರ್ಕಿಸಬೇಕೆಂದು ಶ್ರೀಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.