ಸಂಭಾಜಿ ಪ್ರತಿಕೃತಿ ದಹನ
ಬ್ಯಾಡಗಿ: ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಪಾಟೀಲರ ಅಣಕು ಶವಯಾತ್ರೆ ನಡೆಸಿ, ಪ್ರತಿಕೃತಿ ದಹಿಸಿ, ಆಕ್ರೋಶ ವ್ಯಕ್ತಪಡಿಸಿದರು.
ಮುರಿಗೆಪ್ಪ ಶೆಟ್ಟರ ಮಾತನಾಡಿ, ಭಾಷೆ ನೆಪದಲ್ಲಿ ಸಮಾಜದ ಸಾಮರಸ್ಯ ಹಾಳು ಮಾಡುತ್ತಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲರ ವಿಧಾನಸಭೆ ಸದಸ್ಯತ್ವ ರದ್ದುಗೊಳಿಸಿ ಮಹಾರಾಷ್ಟ್ರಕ್ಕೆ ಗಡಿಪಾರು ಮಾಡುವಂತೆ ಆಗ್ರಹಿಸಿದರು.
ಇಲ್ಲಿನ ನೆಲ, ಜಲ, ಭಾಷೆ ಸಂಪತ್ತನ್ನು ಬಳಸಿಕೊಂಡು ಶಾಸಕನಾಗಿರುವ ಸಂಭಾಜಿ ಪಾಟೀಲ ಯಾವ ರಾಜ್ಯದ ಶಾಸಕರಾಗಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. ಅವರ ಕ್ಷೇತ್ರದಲ್ಲಿ ನೆಲೆಸಿರುವ ಕನ್ನಡಿಗರಿಗೆ ಅನ್ಯಾಯ ಮಾಡಿದರೆ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ನೂರು ಸಂಭಾಜಿಗಳು ಬರಲಿ: ಮಂಜುನಾಥ ಬೋವಿ ಮಾತನಾಡಿ, ಮರಾಠಿ, ಕನ್ನಡ ಭಾಷಿಕರು ಈಗಲೂ ಸಹೋದರತ್ವ ಹಾಗೂ ಸಾಮರಸ್ಯದಿಂದ ಬದುಕುತ್ತಿದ್ದೇವೆ. ನೂರು ಸಂಭಾಜಿ ಪಾಟೀಲರು ಬಂದರೂ ಬೆಳಗಾವಿ ವಿಷಯದಲ್ಲಿ ಮಹಾಜನ ವರದಿಯೇ ಅಂತಿಮ ಎಂದರು.
ಕೈಗಲಾದ ಹೇಡಿ: ಎ.ಬಿ. ಪರಮೇಶಪ್ಪ, ಮಂಜುನಾಥ ಶಿರವಾಡಕರ್ ಮಾತನಾಡಿ, ಸಂಭಾಜಿ ಪಾಟೀಲರಿಗೆ ತಾಕತ್ತಿದ್ದರೆ ಮುಂಬೈ ಮುಂತಾದೆಡೆ ಠಿಕಾಣಿ ಹೂಡಿರುವ ಉತ್ತರ ಭಾರತೀಯರನ್ನು ಹೊರಗೆ ಹಾಕಿ ಮರಾಠಿಗರ ಶಕ್ತಿಯನ್ನು ಪ್ರದರ್ಶಿಸಲಿ. ಕೈಲಾಗದ ಹೇಡಿಯಂತೆ ವರ್ತಿಸುವುದು ಬೇಡ ಎಂದರು.
ಕೆ.ಸಿ. ಗಡಾದ, ಗಡಿ ಕ್ಯಾತೆ ತೆಗೆದ ಸಂಭಾಜಿ ಪಾಟೀಲರ ವರ್ತನೆ ಖಂಡಿಸಿದರು. ಅವರಿಗೆ ಮಹಾರಾಷ್ಟ್ರದ ಬಗ್ಗೆ ಕಳಕಳಿಯಿದ್ದರೆ ಶಾಸಕತ್ವಕ್ಕೆ ರಾಜಿನಾಮೆ ನೀಡಲಿ ಎಂದರು. ಈರಣ್ಣ ಅಕ್ಕಿ, ಈರಪ್ಪ ಭೈರಾಪುರ, ಚನ್ನಬಸಪ್ಪ ಕೊಂಬಳಿ, ಹನುಮಂತಪ್ಪ ಮಾಗೋಡ, ಶಿವಪ್ಪ ಬಣಕಾರ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಮತ್ತು ಪ್ರವೀಣ ಶೆಟ್ಟಿ ಬಣ, ಡಾ ರಾಜ್ ಅಭಿಮಾನಿಗಳ ಸಂಘದ ಪದಾಧಿಕಾರಿಗಳು ಇದ್ದರು.
ಸಂಭಾಜಿ ವಿರುದ್ಧ ಕರವೇ ಪ್ರತಿಭಟನೆ
ಹಿರೇಕೆರೂರು: ಕನ್ನಡ ವಿರೋಧಿ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಬೆಳಗಾವಿ ವಿಧಾನ ಸಭೆಯಲ್ಲಿ ತೋರಿದ ದುರ್ವತನೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಕಾರ್ಯಕರ್ತರು ಸಾಂಬಾಜಿ ಪ್ರತಿಕೃತಿ ದಹಿಸುವ ಮೂಲಕ ಉಗ್ರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ವಜ್ಞ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರನ್ನು ಉದ್ದೇಶಿಸಿ ಕರವೇ ತಾಲೂಕು ಅಧ್ಯಕ್ಷ ಗಿರೀಶ ಬಾರ್ಕಿ ಮಾತನಾಡಿ, ಬೆಳಗಾವಿ ಅಧಿವೇಶನದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡುವ ಮೂಲಕ ಕನ್ನಡಿಗರಿಗೆ ಅವಮಾನ ಮಾಡಿದ ಪಾಟೀಲರ ದುರ್ವರ್ತನೆ ಖಂಡನೀಯ. ಅವರನ್ನು ರಾಜ್ಯದಿಂದ ಗಡಿಪಾರು ಮಾಡಬೇಕು. ಕನ್ನಡ ನೆಲ ಜಲ ಬಳಸಿ ಬದುಕುತ್ತಿರುವ ಪಾಟೀಲ, ಎಂಇಎಸ್ ನಡೆಸಿದ ಮಹಾಮೇಳಾವದಲ್ಲಿ ಪಾಲ್ಗೊಂಡು, ಇನ್ನಿಬ್ಬರು ಶಾಸಕರಿದ್ದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುತ್ತಿದ್ದೆವು ಎಂದು ಪ್ರಚೋದನಕಾರಿ ಹೇಳಿಕೆ ನೀಡಿ, ಕನ್ನಡಿಗರ ಸೌಜನ್ಯವನ್ನು ಅವಮಾನಿಸಿದ್ದಾರೆ. ಕನ್ನಡಿಗರ ಭಾವನೆಗಳಿಗೆ ಧಕ್ಕೆ ತಂದವರ ಶವಯಾತ್ರೆಯನ್ನೇ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ಸರ್ಕಾರ ಸಂಭಾಜಿ ಶಾಸಕತ್ವ ರದ್ದುಪಡಿಸಬೇಕು. ಸಂಭಾಜಿ ಹಾಗೂ ಅರವಿಂದ ಪಾಟೀಲರನ್ನು ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ಶಿವಾನಂದ ಪೂಜಾರ, ರಟ್ಟಿಹಳ್ಳಿ ಘಟಕದ ಅಧ್ಯಕ್ಷ ಮಂಜುನಾಥ ಮುದಿಯಪ್ಪನವರ, ಸಂಘಟನಾ ಕಾರ್ಯದರ್ಶಿ ಭರಮಪ್ಪ ಹೊಸಳ್ಳಿ, ಜಾಕೀರ ಹುಸೇನ ಮಕಾಂದಾರ, ಮಲ್ಲನಗೌಡ ಪುಟ್ಟಳ್ಳವರ, ಜಗದೀಶ ಮಡಿವಾಳರ, ದೇವರಾಜ ಕಡೇಮನಿ, ಬಸವರಾಜ ಬೂದಿಹಾಳ, ಮಂಜುನಾಥ ಅಣಜಿ, ಪ್ರವೀಣ ಅಣಜಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ವಾಕರವೇ ಪ್ರತಿಭಟನೆ
ರಾಣಿಬೆನ್ನೂರು: ಬೆಳಗಾವಿ ಅಧಿವೇಶನಕ್ಕೆ ಪ್ರತಿಯಾಗಿ ಎಂಇಎಸ್ ಸಂಘಟಿಸಿದ್ದ ಮಹಾಮೇಳಾವದಲ್ಲಿ ಪಾಲ್ಗೊಂಡಿದ್ದಲ್ಲದೆ, 4 ಸ್ಥಾನ ಗೆಲ್ಲಿಸಿದರೆ ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುವುದಾಗಿ ಹೇಳಿದ, ಅಧಿವೇಶನದಲ್ಲಿ ಮರಾಠಿ ಮಾತನಾಡಿದ ಶಾಸಕ ಸಂಭಾಜಿ ಪಾಟೀಲರ ಸದಸ್ಯತ್ವ ರದ್ದು ಮಾಡುವಂತೆ ಆಗ್ರಹಿಸಿ ಸ್ವಾಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ತುಮ್ಮಿನಕಟ್ಟಿ ಗ್ರಾಮದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿ, ಎಂಇಎಸ್ ಗೂಂಡಾ ವರ್ತನೆ ಹಾಗೂ ಶಾಸಕ ಸಂಭಾಜಿ ಪಾಟೀಲರ ವಿರುದ್ಧ ಘೋಷಣೆ ಕೂಗಿದರು.
ಸ್ವಾತಂತ್ರ್ಯ ಹೋರಾಟಗಾರ ಮೆಣಸಿನಹಾಳ ತಿಮ್ಮನಗೌಡರ ವೃತ್ತದಲ್ಲಿ ನಡೆದ ಸಭೆಯಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ರವಿ ಮೂಲಿಮನಿ ಮಾತನಾಡಿ, ಬೆಳಗಾವಿ ಸಮಸ್ತ ಕನ್ನಡಿಗರ ಆಸ್ತಿ. ಇಲ್ಲಿ ಮರಾಠಿಗರ ಆಟ ನಡೆಯಲು ಬಿಡುವುದಿಲ್ಲ. ಎಂಇಎಸ್ ನಾಯಕರು ಸರಿಯಾಗಿ ಕನ್ನಡ ಮಾತನಾಡಲು ಕಲಿಯದಿದ್ದರೆ ಮುಂದೆ ಶಾಶ್ವತವಾಗಿ ಶಾಸಕ ಸ್ಥಾನದಿಂದ ದೂರ ಉಳಿಯಬೇಕಾದೀತು ಎಂದು ಎಚ್ಚರಿಸಿದರು.
ತುಮ್ಮಿನಕಟ್ಟಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನವಿ ಸ್ವೀಕರಿಸಿದರು. ಸ್ವಾಕರವೇ ಜಿಲ್ಲಾ ಉಪಾಧ್ಯಕ್ಷ ಸಿದ್ದಾರೂಢ ಗುರಂ, ತಾಲೂಕು ಅಧ್ಯಕ್ಷ ಚಂದ್ರು ಕಡ್ಲಿಗೊಂದಿ, ತುಮ್ಮಿನಕಟ್ಟಿ ಗ್ರಾಮ ಘಟಕದ ಅಧ್ಯಕ್ಷ ಮಡಿವಾಳಪ್ಪ ಮಡಿವಾಳರ, ಸಂಘಟನಾ ಕಾರ್ಯದರ್ಶಿ ಪರಸಪ್ಪ ಶೆಟ್ಟೇರ, ರಾಜು ಅಳಲಗೇರಿ, ರಮೇಶ ಚೌಟಗಿ, ಶಂಕರ ಪಾಟೀಲ, ಶಾಮರಡ್ಡಿ ರಡ್ಡೇರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

