ಶಂಕಿತ ಡೆಂಘೀಗೆ ಬಾಲಕಿ ಬಲಿ
ಹಾವೇರಿ: ಶಂಕಿತ ಡೆಂಘೀ ಜ್ವರದಿಂದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ನಗರದ ಇಜಾರಿಲಕಮಾಪುರದಲ್ಲಿ ಗುರುವಾರ ರಾತ್ರಿ ನಡೆದಿದೆ. ಇಲ್ಲಿಯ ಕೆಎಲ್ಇ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ ಆಶಾ ಪಾಂಡುರಂಗ ನವಲೆ (11) ಶಂಕಿತ ಡೆಂಘೀ ಜ್ವರಕ್ಕೆ ಬಲಿಯಾದ ಬಾಲಕಿ. ಮೂರು-ನಾಲ್ಕು ದಿನಗಳಿಂದ ಬಾಲಕಿಗೆ ಜ್ವರ ಬಂದಿದ್ದು, ಚಿಕಿತ್ಸೆಗಾಗಿ ನಗರದ ಡಾ ಪಂಡಿತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಡೆಂಘೀ ಜ್ವರದ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವೈದ್ಯರು ದಾವಣಗೆರೆಯ ಎಸ್.ಎಸ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ಮಂಗಳವಾರ ಕಳುಹಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ರಾತ್ರಿ ಬಾಲಕಿ ಮೃತಪಟ್ಟಿದ್ದಾಳೆ.
ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತನ್ನಿ
ಮುಂಡರಗಿ: ಸಮಸ್ತ ಕನ್ನಡಿಗರ ಬಹುದಿನದ ಕನಸಾಗಿರುವ ಡಾ. ಸರೋಜಿನಿ ಮಹಿಷಿ ವರದಿ ಜಾರಿಗೆ ತರಬೇಕು ಎಂದು ಸರ್ಕಾರಕ್ಕೆ ಸಮಸ್ತ ಕನ್ನಡಿಗರ ಪರವಾಗಿ ಮುಂಡರಗಿ ತಾಲೂಕು ಕನ್ನಡ ಜನಾಭಿವೃದ್ಧಿ ವೇದಿಕೆ ಕಾರ್ಯಕರ್ತರು ಗುರುವಾರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಕರ್ನಾಟಕ ತನ್ನದೇ ಆದ ಇತಿಹಾಸ, ಸಂಸ್ಕೃತಿ, ಭಾಷೆ, ನೆಲ, ಜಲಕ್ಕೆ ಮಹತ್ವ ಹೊಂದಿದೆ. ಈ ರಾಜ್ಯದ ಜನತೆಯ ದೌರ್ಭಾಗ್ಯವೋ, ರಾಜಕೀಯ ಪಕ್ಷಗಳ ದ್ವಿಮುಖ ನೀತಿಯೋ, ಸಾಹಿತಿಗಳ ಹೊಂದಾಣಿಕೆ ಕೊರತೆಯಿಂದಲೋ ಹಲವು ವರ್ಷ ಕಳೆದರೂ ಡಾ. ಸರೋಜಿನಿ ಮಹಿಷಿ ವರದಿ ಯೋಜನೆ ಜಾರಿಗೆ ತರಲು ಸಾಧ್ಯವಾಗುತ್ತಿಲ್ಲ. ಸಿಎಂ ಸಿದ್ದರಾಮಯ್ಯನವರು, ವಿರೋಧ ಪಕ್ಷದ ನಾಯಕರು ಸರ್ವಾನುಮತದಿಂದ ಕೇಂದ್ರದ ಮೇಲೆ ಒತ್ತಡ ತಂದು ಶೀಘ್ರವಾಗಿ ಜಾರಿಯಾಗುವಂತೆ ಕ್ರಮ ತೆಗೆದುಕೊಳ್ಳಬೇಕೆಂದು ಮನವಿಯಲ್ಲಿ ವಿವರಿಸಲಾಗಿದೆ. ಕನ್ನಡ ಜನಾಭಿವೃದ್ಧಿ ವೇದಿಕೆಯ ಅಧ್ಯಕ್ಷ ದೇವಪ್ಪ ಇಟಗಿ, ಕುರವತ್ತೆಪ್ಪ ಅರಿಷಿನದ, ನಾಗರಾಜ ಮುರಡಿ, ಮಾರುತಿ ಕವಲೂರ, ಮಂಜುನಾಥ ಕಟ್ಟಿಮನಿ, ಹನುಮಂತ ಅಣ್ಣಿಗೇರಿ, ಎಚ್. ಎನ್. ಬೇವೂರ, ಮಂಜು ಡೋಣ್ಣಿ, ತಿಪ್ಪನವರ, ತಿರ್ಲಾಪುರ, ಇದ್ದರು.
ಸ್ವಸ್ಥ ಸಮಾಜದ ಕನಸು ನನಸಾಗಲಿ: ಪ್ರಸನ್ನಕುಮಾರ
ಹಾನಗಲ್ಲ: ನಾಡು ಕಟ್ಟಲು ಶ್ರಮಿಸಬೇಕಾದ ಯುವಶಕ್ತಿ ಸಮಾಜಬಾಹಿರ ಚಟುವಟಿಕೆಯಲ್ಲಿ ತೊಡಗುವುದು ದುರದೃಷ್ಟದ ಸಂಗತಿ. ಸ್ವಸ್ಥ ಸಮಾಜದ ಕನಸು ನನಸಾಗಬೇಕಿದೆ ಎಂದು ಮುಂಡಗೋಡದ ಲೋಯಲಾ ಡಿಇಡಿ ಕಾಲೇಜಿನ ಪ್ರಾಚಾರ್ಯ ಪ್ರಸನ್ನಕುಮಾರ ವಿಷಾದ ವ್ಯಕ್ತಪಡಿಸಿದರು. ಹಾನಗಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಹಾವೇರಿ ಜಿಲ್ಲಾ ಜನಜಾಗೃತಿ ವೇದಿಕೆ, ಮದ್ಯಪಾನ ಸಂಯಮ ಮಂಡಳಿ ಸಹಯೋಗದಲ್ಲಿ ನಡೆದ 'ಸ್ವಾಸ್ಥ್ಯ ಸಂಕಲ್ಪ' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಕರು ದುಶ್ಚಟಗಳ ದಾಸರಾಗಿ ಸಮಾಜಕ್ಕೆ ಹೊರೆಯಾಗುವುದು ಬೇಡ. ಭ್ರಮಾ ಲೋಕದಲ್ಲಿ ನಮ್ಮ ಸ್ವಂತಿಕೆ ಹಾಳಾಗಬಾರದು. ವ್ಯವಸಕ್ಕೆ ದಾಸರಾಗಿ ದೈಹಿಕ, ಮಾನಸಿಕ ಆರೋಗ್ಯ ಹಾಳು ಮಾಡಿಕೊಳ್ಳಬೇಡಿ ಎಂದರು. ಸಾಹಿತಿ ಪ್ರೊ ಮಾರುತಿ ಶಿಡ್ಲಾಪುರ ಮಾತನಾಡಿ, ಸಮಾಧಾನಚಿತ್ತರಾಗಿ ಆರೋಗ್ಯ, ಸಂಸ್ಕೃತಿ ಕಾಯ್ದುಕೊಳ್ಳೋಣ. ಮಾನಸಿಕ ವೇದನೆ ಮರೆಯಲು ದುರ್ವ್ಯಸನ ಪರಿಹಾರವಲ್ಲ. ಸಭ್ಯತೆ, ಸಾಮಾಜಿಕ ಗೌರವ ಕಾಯ್ದುಕೊಳ್ಳಬೇಕು. ಸ್ವಾವಲಂಬನೆಯ ಹಾದಿ ಹಿಡಿದು ಶ್ರಮದ ಮೂಲಕ ಒಳ್ಳೆಯ ಗುರಿ ಸಾಧಿಸಬೇಕು ಎಂದರು. ಪ್ರಾಸ್ತಾವಿಕ ಮಾತನಾಡಿದ ಯೋಜನೆ ಸಂಯೋಜನಾಧಿಕಾರಿ ಸದಾನಂದ, ಯೋಜನೆ ಮೂಲಕ ಸ್ವಯಂ ಉದ್ಯೋಗ, ಗುಡಿ ಕೈಗಾರಿಕೆ, ಸಶಸ್ತ ಕೃಷಿ ಹಾಗೂ ಯಾರ ಹಂಗಿಲ್ಲದೆ ಕಾಯಕದಿಂದ ಬದುಕನ್ನು ಮುನ್ನಡೆಸುವ ಮಾರ್ಗದರ್ಶನ ನೀಡಲಾಗುತ್ತಿದೆ. ವ್ಯಸನ ಮುಕ್ತಗೊಳಿಸಲು, ಸಮಾಜ ಪರಿವರ್ತನೆಗೆ ಶ್ರಮಿಸಲಾಗುತ್ತಿದೆ ಎಂದರು. ಪ್ರಾಚಾರ್ಯ ಎಸ್.ಸಿ. ಪೀರಜಾದೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಎಸ್.ಬಿ. ಕಮಾಟಿ, ವಲಯ ಮೇಲ್ವಿಚಾರಕ ಧನಂಜಯ ಇದ್ದರು.
ಸಾಮಾಜಿಕ ಪಿಡುಗು ನಿವಾರಣೆಗೆ ಕೈಜೋಡಿಸಿ: ಪದ್ಮಾವತಿ
ಶಿಗ್ಗಾಂವಿ: ಬಾಲ್ಯವಿವಾಹ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ ಸಮಾಜಕ್ಕೆ ಅಂಟಿದ ಪಿಡುಗು. ನಾವೆಲ್ಲ ಸೇರಿ ಅವುಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಡೋಣ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜಿ. ಪದ್ಮಾವತಿ ಕರೆ ನೀಡಿದರು. ತಾಲೂಕಿನ ಹನುಮರಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಸೇವೆಗಳ ಸಮಿತಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಕಾನೂನು ಅರಿವು, ಬಾಲ್ಯವಿವಾಹ ನಿಷೇದ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿ, ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ದೇವತೆಯ ಸ್ಥಾನ ಕೊಟ್ಟಿದ್ದರೂ ಶೋಷಣೆ ನಿರಂತರವಾಗಿದೆ ಎಂದು ವಿಷಾದಿಸಿದರು.
ಗ್ರಾಪಂ ಅಧ್ಯಕ್ಷ ಚನ್ನವ್ವ ವಾಲ್ಮೀಕಿ ಉದ್ಘಾಟಿಸಿದರು. ನ್ಯಾಯವಾದಿ ಕೆ.ಎನ್. ಭಾರತಿ ಬಾಲ್ಯವಿವಾಹ ಹಾಗೂ ಕೌಟುಂಬಿಕ ದೌರ್ಜನ್ಯ ವಿಷಯವಾಗಿ ಉಪನ್ಯಾಸ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಶೈನಾಬೇಗಂ ನದಾಫ, ಪಿಡಿಒ ಎಸ್.ಎಸ್. ಪಾಲಿನ, ಕಾರ್ಯದರ್ಶಿ ಎಂ.ಬಿ. ನೆಲ್ಲೂರ ಇದ್ದರು. ಮೇಲ್ವಿಚಾರಕಿ ಕಲ್ಪನಾ ಕೇಸ್ತಿ ಸ್ವಾಗತಿಸಿ, ನಿರೂಪಿಸಿದರು. ಲಕ್ಷ್ಮಿಬಾಯಿ ಬಗಾಡೆ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

