ಬಿಡಾಡಿ ದನ, ಶ್ವಾನ ನಿಯಂತ್ರಣ
ಹಾವೇರಿ: ನಗರದಲ್ಲಿ ಹಂದಿ, ಬೀದಿ ನಾಯಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ಇವುಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಶನಿವಾರ ನಡೆದ ನಗರಸಭೆಯ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.
ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆಯಲ್ಲಿ ಶನಿವಾರ ನಗರಸಭೆ ಸಭಾಂಗಣದಲ್ಲಿ ಕರೆಯಲಾಗಿದ್ದ ವಿಶೇಷ ಸಾಮಾನ್ಯ ಸಭೆಯಲ್ಲಿ ಈ ವಿಷಯ ಗಂಭೀರ ಚರ್ಚೆಯಾಗಿ, ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಲಾಯಿತು. ವಿಷಯ ಪ್ರಸ್ತಾಪಿಸಿದ ಅಧ್ಯಕ್ಷ ಐ.ಯು. ಪಠಾಣ, ನಗರದಲ್ಲಿ ಹಂದಿಗಳ, ಬಿಡಾಡಿ ದನ, ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇವುಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸುರೇಶ ದೊಡ್ಡಮನಿ, ಹಲವೆಡೆ ಮಕ್ಕಳ ಮೇಲೆ ಹಂದಿ ದಾಳಿ ನಡೆದಿವೆ. ಮಾಲೀಕರೇ ಇದಕ್ಕೆ ಜವಾಬ್ದಾರಿ ವಹಿಸಿಕೊಳ್ಳಬೇಕು. ಬಿಡಾಡಿ ದನಗಳನ್ನು ಗೋಶಾಲೆಗೆ ಸಾಗಿಸಬೇಕೆಂದು ಹೇಳಿದರು.
ಸ್ವಚ್ಛತೆ ಆಗುತ್ತಿಲ್ಲ: ನಗರದಲ್ಲಿ ನೈರ್ಮಲೀಕರಣ ವ್ಯವಸ್ಥೆ ಹದಗೆಟ್ಟಿದೆ. ಎಲ್ಲಿಯೂ ಚರಂಡಿಗಳ ಸ್ವಚ್ಛತಾ ಕಾರ್ಯ ನಡೆಯುತ್ತಿಲ್ಲ. ಇದರಿಂದ ಮಾರಕ ರೋಗಗಳು ಬರುತ್ತಿವೆ ಎಂದು ಸದಸ್ಯರು ಹೇಳಿದರು.
ಸದಸ್ಯ ಹನುಮಂತಪ್ಪ ದೇವಗಿರಿ, ನಗರಸಭೆಯಿಂದ ಸಿದ್ಧಪಡಿಸಿರುವ ಕ್ರಿಯಾ ಯೋಜನೆಯನ್ನು ಸಭೆಯಲ್ಲಿ ಮಂಡಿಸಿ ಎಂದು ಪಟ್ಟು ಹಿಡಿದರು. ಆಗ ಅಧ್ಯಕ್ಷ ಪಠಾಣ, ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅನುಮೋದನೆಯಾಗಿ ಬಂದ ಮೇಲೆ ಗಮನಕ್ಕೆ ತರುವುದಾಗಿ ಹೇಳಿದರು.
ಪೈಪ್ಲೈನ್ ದುರಸ್ತಿ: ಪೈಪ್ಲೈನ್ ದುರಸ್ತಿಗೆ ಸಂಬಂಧಿಸಿ ಟೆಂಡರ್ ಕರೆಯುವ ಬಗ್ಗೆ ನಡೆದ ಚರ್ಚೆಯಲ್ಲಿ ಅಧಿಕಾರಿಗಳ ಕರ್ತವ್ಯ ಲೋಪದ ಬಗ್ಗೆ ದೂರುಗಳು ಕೇಳಿಬಂದವು. ಶಾಸಕ ರುದ್ರಪ್ಪ ಲಮಾಣಿ, ನಗರಸಭೆ ಕಾಮಗಾರಿಗಳಿಗೆ ಲೈಸೆನ್ಸ್ ಇದ್ದವರಿಗೆ ಮಾತ್ರ ಟೆಂಡರ್ ಅವಕಾಶ ನೀಡಿ ಎಂದು ಸೂಚಿಸಿದರು. ಒಡೆಯುವ ಪೈಪ್ಲೈನ್ ದುರಸ್ತಿಗೆ ಆಯಾ ವಾರ್ಡುಗಳ ಸದಸ್ಯರ ಗಮನಕ್ಕೆ ತಂದು 5 ಪ್ಯಾಕೇಜ್ ಟೆಂಡರ್ ಕರೆಯಲು ಸಭೆ ನಿರ್ಧರಿಸಿತು.
ಸಂಚಾರಿ ಪೊಲೀಸ್ ಠಾಣೆ ಇಲ್ಲದ್ದರಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಚರ್ಚೆಯಾಯಿತು. ಶಾಸಕ ಲಮಾಣಿ, ಸರ್ಕಾರ ಹಾಗೂ ಸಚಿವರ ಜತೆ ಮಾತನಾಡಿ ಸಂಚಾರಿ ಠಾಣೆ ಆರಂಭಿಸುವುದಾಗಿ ಹೇಳಿದರು. ಉಪಾಧ್ಯಕ್ಷೆ ರತ್ನಾ ಭೀಮಕ್ಕನವರ, ಪೌರಾಯುಕ್ತ ಶಿವಕುಮಾರಯ್ಯ, ಸದಸ್ಯರಾದ ಸಂಜೀವಕುಮಾರ ನೀರಲಗಿ, ರಮೇಶ ಕಡಕೋಳ, ಶಿವಬಸವ ವನಳ್ಳಿ, ಇರ್ಫಾನ್ಖಾನ್ ಪಠಾಣ, ನಿರಂಜನ ಹೆರೂರು, ಶಿವಯೋಗಿ ಅರಿಷಿಣದ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

