ದೂರು, ಅಹವಾಲು ಸ್ವೀಕಾರ
ಹಾವೇರಿ: ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಜಿಲ್ಲೆಯ ಆರು ತಾಲೂಕುಗಳಲ್ಲಿ ಅ. 28, 29 ಹಾಗೂ 31ರಂದು ಸರ್ಕಾರಿ ಕಚೇರಿಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರು, ಅಹವಾಲು ಸ್ವೀಕರಿಸಿ, ವಿಚಾರಣೆ ಕೈಗೊಳ್ಳಲಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ. ಅ. 28ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 1ರ ತನಕ ರಾಣಿಬೆನ್ನೂರು ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 2ರಿಂದ 5 ಗಂಟೆ ವರೆಗೆ ಬ್ಯಾಡಗಿ ಪ್ರವಾಸಿ ಮಂದಿರದಲ್ಲಿ ಅಹವಾಲು ಸ್ವೀಕರಿಸುವರು. ಅ. 29ರಂದು ಬೆಳಗ್ಗೆ 10ರಿಂದ 1ರ ವರೆಗೆ ಹಿರೇಕೆರೂರು ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 3ರಿಂದ 5ರ ವರೆಗೆ ಹಾನಗಲ್ ಪ್ರವಾಸಿ ಮಂದಿರದಲ್ಲಿ, ಅ. 31ರಂದು ಬೆಳಗ್ಗೆ 10ರಿಂದ 1ರ ತನಕ ಶಿಗ್ಗಾಂವಿ ಪ್ರವಾಸಿ ಮಂದಿರದಲ್ಲಿ, ಮಧ್ಯಾಹ್ನ 2ರಿಂದ 5ರ ತನಕ ಸವಣೂರು ಪ್ರವಾಸಿ ಮಂದಿರದಲ್ಲಿ ದೂರು, ಅಹವಾಲು ಸ್ವೀಕರಿಸುವರು. ಆಸಕ್ತರು ತಮ್ಮ ದೂರು, ದುಮ್ಮಾನವನ್ನು ನಿವೇದಿಸಿಕೊಳ್ಳಬಹುದು. ಹಾವೇರಿ ತಾಲೂಕಿಗೆ ಸಂಬಂಧಿಸಿದ ಅರ್ಜಿಗಳಿದ್ದರೆ ಜಿಲ್ಲಾ ಕೇಂದ್ರದಲ್ಲಿರುವ ಆರಕ್ಷಕ ಉಪಾಧೀಕ್ಷಕರು ಮತ್ತು ಪೊಲೀಸ್ ನಿರೀಕ್ಷಕರು, ಕರ್ನಾಟಕ ಲೋಕಾಯುಕ್ತ ಕಚೇರಿಗೆ ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.
ವೃದ್ಧಾಶ್ರಮಕ್ಕೆ ಪ್ರವೇಶ
ಹಾವೇರಿ: ರಾಣಿಬೆನ್ನೂರು ತಾಲೂಕಿನ ಕುಮಾರಪಟ್ಟಣಂನಲ್ಲಿ ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಸುತ್ತಿರುವ ಲಲಿತ ಅಕಾಡೆಮಿಯ ಲಲಿತ ವೃದ್ಧಾಶ್ರಮದಲ್ಲಿ 60 ವರ್ಷ ತುಂಬಿದ ಪುರುಷರು, ಮಹಿಳೆಯರಿಗೆ ಊಟ, ವಸತಿ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುವುದು. ಈ ಆಶ್ರಮದಲ್ಲಿ ಕೆಲವೇ ಸೀಟುಗಳು ಖಾಲಿ ಉಳಿದಿದ್ದು, ಆಸಕ್ತರು ಮೊ. 9844011532 ಅಥವಾ 9482068652 ಸಂಪರ್ಕಿಸಬೇಕೆಂದು ಸಿ.ಎಂ. ಮಲ್ಲಿಕಾರ್ಜುನಾಚಾರ್ ತಿಳಿಸಿದ್ದಾರೆ.
ಇಂದು ಉಪಗ್ರಹ ಆಧಾರಿತ ತರಬೇತಿ
ಹಿರೇಕೆರೂರು: ಪಟ್ಟಣದ ತಾಲೂಕು ಪಂಚಾಯತ್ ಆವರಣದಲ್ಲಿ ತಾಲೂಕಿನ ಎಲ್ಲ ಜನಪ್ರತಿನಿಧಿಗಳಿಗೆ ಉಪಗ್ರಹ ಆಧಾರಿತ ಸಂವಹನ ಕಾರ್ಯಕ್ರಮ ಅ. 26ರಂದು ಬೆಳಗ್ಗೆ ನಡೆಯಲಿದೆ. ತಾಲೂಕಿನ ಜಿಪಂ, ತಾಪಂ, ಗ್ರಾಪಂ ಸದಸ್ಯರು, ಪಿಡಿಒಗಳು ಮತ್ತು ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಸರ್ಕಾರದ ವಿವಿಧ ಅಭಿವೃದ್ಧಿ ಯೋಜನೆಗಳ ಬಗ್ಗೆ ಮುದ್ರಣ ಮಾಡಿರುವ ಮಾಹಿತಿ ಪುಸ್ತಕ ಬಿಡುಗಡೆ ಹಾಗೂ ಉಪಗ್ರಹ ಆಧಾರಿತ ಸಂವಹನ ಕಾರ್ಯಕ್ರಮ ಮೈಸೂರಿನ ಅಬ್ದುಲ್ ನಜೀರಸಾಬ್ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ನಡೆಸಲಾಗುವುದು. ಕಾರ್ಯಕ್ರಮಕ್ಕೆ ಮೇಲ್ಕಾಣಿಸಿದ ಎಲ್ಲರೂ ತಪ್ಪದೆ ಹಾಜರಾಗಬೇಕೆಂದು ತಾಪಂ ಇಒ ತಿಳಿಸಿದ್ದಾರೆ.
ಮಳೆ ಇಳಿಮುಖ
ಹಾವೇರಿ: ಜಿಲ್ಲಾದ್ಯಂತ ಮಳೆ ಇಳಿಮುಖವಾಗಿದೆ. ಅ. 25ರಂದು ಸರಾಸರಿ 4.2 ಮಿ.ಮೀ. ಮಳೆಯಾಗಿದೆ. ಸವಣೂರು ತಾಲೂಕಿನಲ್ಲಿ 10.9 ಮಿ.ಮೀ., ಹಾನಗಲ್ಲ 5.5, ಹಿರೇಕೆರೂರು 5.2, ಶಿಗ್ಗಾಂವಿ 3.4 ಮಿ.ಮಿ. ಬ್ಯಾಡಗಿ 2, ಹಾವೇರಿ 1.8 ಮಿ.ಮೀ. ಮಳೆಯಾಗಿತ್ತು. ಅ. 24ರಂದು ಜಿಲ್ಲಾದ್ಯಂತ 46.4 ಮಿ.ಮೀ. ಮಳೆ ಬಿದ್ದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

