ತಡವಾಗಿ ಬಂದ ಅಧಿಕಾರಿಗಳು
ಕನ್ನಡಪ್ರಭ ವಾರ್ತೆ, ಹಿರೇಕೆರೂರು, ಅ. 31
ತಾಲೂಕು ಮಟ್ಟದ ಅನುಷ್ಠಾನಾಧಿಕಾರಿಗಳು ಸಭೆಗೆ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ ಎಂದು ತಾಪಂ ಸದಸ್ಯರು ಬೇಸರ ವ್ಯಕ್ತಪಡಿಸಿದ ಘಟನೆ ತಾಪಂ ಸಾಮಾನ್ಯ ಸಭೆಯಲ್ಲಿ ಗುರುವಾರ ಜರುಗಿತು.
ತಾಪಂ ಸಾಮಾನ್ಯ ಸಭೆ ಪ್ರತಿ ಸಲ ಬೆಳಗ್ಗೆ 10.30ಕ್ಕೆ ಆರಂಭಗೊಳ್ಳುತ್ತಿತ್ತು. ಆದರೂ ಕೆಲ ಅಧಿಕಾರಿಗಳು ಸಾಮಾನ್ಯ ಸಭೆಗೆ ತಡವಾಗಿ ಬರುತ್ತಿದ್ದರು. ಇದನ್ನು ಈವರೆಗೂ ಸಹಿಸಿಕೊಂಡಿದ್ದ ಸದಸ್ಯರು ಈ ಬಾರಿ ಅವರ ವರ್ತನೆ ಖಂಡಿಸಿದರು. ಅಧಿಕಾರಿಗಳು ಸಮಯಕ್ಕೆ ಬಾರದ ಕಾರಣ ಗುರುವಾರ ಸಭೆ ಮಧ್ಯಾಹ್ನ 1 ಗಂಟೆಗೆ ಶುರುವಾಯಿತು. ಮಕರಿ ಕ್ಷೇತ್ರದ ಸದಸ್ಯ ಆರ್.ಎನ್. ಗಂಗೋಳ ಮಾತನಾಡಿ, ಸಾಮಾನ್ಯ ಸಭೆಗೆ ಅಧಿಕಾರಿಗಳು ತಡವಾಗಿ ಬರುತ್ತಾರೆ. ಇನ್ನೂ ಕೆಲವರು ಸಭೆ ಮುಗಿಯುವ ಹೊತ್ತಿಗೆ ಹಾಜರಾಗುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಸಭಾತ್ಯಾಗ ಮಾಡಿದರು.
ಶೀಘ್ರ ಪರಿಹಾರ
ವಿವಿಧ ಇಲಾಖೆ ಪ್ರಗತಿ ಪರಿಶೀಲನೆಯ ಸಂದರ್ಭದಲ್ಲಿ ಕೃಷಿ ಇಲಾಖೆಯ ಪ್ರಗತಿ ವರದಿ ಮಂಡಿಸುವಾಗ ತಾಪಂ ಮಾಜಿ ಅಧ್ಯಕ್ಷ ಶಿವಣ್ಣ ಗಡಿಯಣ್ಣನವರ ಮಾತನಾಡಿ, ರೈತರು ಬಿತ್ತನೆ ಮಾಡಿರುವ ಬಿಟಿ ಹತ್ತಿ ಬೀಜಗಳು ಕಳಪೆಯಾಗಿ, ಗಿಡಗಳಲ್ಲಿ ಹೂವು, ಕಾಯಿ ಬಿಟ್ಟಿಲ್ಲ. ಇಲಾಖೆ ಏನು ಕ್ರಮ ಜರುಗಿಸಿದೆ ಎಂದು ಪ್ರಶ್ನಿಸಿದರು ಇದಕ್ಕೆ ಹಲವಾರು ಸದಸ್ಯರು ದನಿಗೂಡಿಸಿದರು. ತಾಲೂಕಿನಲ್ಲಿ ಬಿಟಿ ಹತ್ತಿ ಬಿತ್ತನೆ ಮಾಡಿದ ರೈತರಿಂದ ಅರ್ಜಿ ಸ್ವೀಕರಿಸಲಾಗಿದೆ. ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಶೀಘ್ರದಲ್ಲಿ ಪರಿಹಾರ ನೀಡುವುದಾಗಿ ಕೃಷಿ ಅಧಿಕಾರಿ ಭರವಸೆ ನೀಡಿದರು. ಅಡಕೆ ಬೆಳೆಗಾರರು ಕೊಳೆರೋಗದಿಂದ ಕಂಗೆಟ್ಟಿದ್ದಾರೆ. ಅವರಿಗೆ ಸಹಾಯಧನ ನೀಡಬೇಕು ಎಂದು ಸದಸ್ಯರೊಬ್ಬರು ತೋಟಗಾರಿಕೆ ಅಧಿಕಾರಿಗೆ ತಿಳಿಸಿದರು.
ಸ್ಕ್ಯಾನಿಂಗ್ ಆರಂಭಿಸಿ
ತಾಪಂ ಸದಸ್ಯೆ ರೂಪಾ ಆಡೂರ ಮಾತನಾಡಿ, ಪಟ್ಟಣದ ತಾಲೂಕು ಅಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರ ಇದ್ದರೂ ಇಲ್ಲದಂತಾಗಿದೆ. ಮಹಿಳಾ ರೋಗಿಗಳು ಪರದಾಡುವಂತಾಗಿದೆ. ಶ್ರೀಮಂತರು ದಾವಣಗೆರೆ, ಶಿವಮೊಗ್ಗ ಮುಂತಾದೆಡೆ ಸ್ಕ್ಯಾನಿಂಗ್ ಮಾಡಿಸಿಕೊಂಡು ಉತ್ತಮ ಚಿಕಿತ್ಸೆ ಪಡೆಯುತ್ತಾರೆ. ಬಡವರ, ಕಾರ್ಮಿಕರ ಗತಿ ಏನು ಎಂದು ತಾಲೂಕು ಆರೋಗ್ಯಾಧಿಕಾರಿಯನ್ನು ಪ್ರಶ್ನಿಸಿದರು. ತಾಲೂಕು ಆರೋಗ್ಯಾಧಿಕಾರಿ ಝಡ್.ಆರ್. ಮಕಾಂದಾರ ಉತ್ತರಿಸಿ, ಸ್ಕ್ಯಾನಿಂಗ್ ಯಂತ್ರವನ್ನು ಆರಂಭಿಸಬೇಕಾದರೆ ತಜ್ಞ ವೈದ್ಯರು ಬೇಕು. ವೈದ್ಯರ ಕೊರತೆ ಕಾರಣ ಯಂತ್ರ ಸ್ಥಗಿತಗೊಳಿಸಲಾಗಿದೆ. ಇನ್ನೂಂದು ವಾರದಲ್ಲಿ ವೈದ್ಯರ ನೇಮಕಾತಿ ನಡೆಯಲಿದ್ದು, ಆಗ ಸೇವೆ ಆರಂಭಿಸಲಾಗುವುದು ಎಂದರು.
ಲೋಕೋಪಯೋಗಿ, ಶಿಕ್ಷಣ, ಪಶುಸಂಗೋಪನೆ ಇಲಾಖೆಗಳ ಅಧಿಕಾರಿಗಳು ಪ್ರಗತಿ ವರದಿ ಮಂಡಿಸಿದರು. ಮೀನುಗಾರಿಕೆ, ಪಿಎಲ್ಡಿ ಬ್ಯಾಂಕ್, ಎಸ್ಸಿ-ಎಸ್ಟಿ ನಿಗಮ, ನಿರ್ಮಿತಿ ಕೇಂದ್ರ, ಕೆಎಂಎಫ್, ಕೈಗಾರಿಕೆ ಇಲಾಖೆಗಳ ಅಧಿಕಾರಿಗಳು ಗೈರಾಗಿದ್ದರು. ತಾಪಂ ಅಧ್ಯಕ್ಷೆ ಮಂಜುಳಾ ಚಲುವಾದಿ, ಉಪಾಧ್ಯಕ್ಷೆ ಅನ್ನಪೂರ್ಣಾ ಗಾಳಿ, ತಹಸೀಲ್ದಾರ್ ಶಕುಂತಲಾ ಚೌಗುಲೆ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರು ಅಣ್ಣಪ್ಪನವರ,ಇಒ ಪಿ.ಎಂ. ಜನಿವಾಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

