ಹಾವೇರಿ

ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಲಿ

Published On :

ಕನ್ನಡಪ್ರಭ ವಾರ್ತೆ, ಹಾನಗಲ್ಲ, ಅ. 31
ದಲಿತರಿಗೆ ಸಂವಿಧಾನದತ್ತವಾಗಿ ನೀಡುತ್ತಿರುವ ಸೌಲಭ್ಯಗಳು ಫಲಾನುಭವಿಗಳಿಗೆ ಸಿಗುವಂತಾಗಲಿ. ದಲಿತರ ಮೇಲೆ ಯಾರೇ ದೌರ್ಜನ್ಯ ಮಾಡಿದರೂ ಶಿಕ್ಷೆಯಾಗಿ, ಸಾಮಾಜಿಕ ನ್ಯಾಯ ಒದಗಲಿ ಎಂದು ಶಾಸಕ ಮನೋಹರ ತಹಶೀಲ್ದಾರ ಆಶಿಸಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ, ತಾಪಂ, ಸಮಾಜ ಕಲ್ಯಾಣ, ಪೊಲೀಸ್ ಇಲಾಖೆ ಹಾಗೂ ವಿವಿಧ ದಲಿತ ಸಂಘಟನೆಗಳ ಆಶ್ರಯದಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ಪ್ರತಿಬಂಧ ಅಧಿನಿಯಮ ಕುರಿತಾದ ವಿಚಾರ ಸಂಕಿರಣದ ಸಮಾರೋಪ ಭಾಷಣ ಮಾಡಿದ ಅವರು, ಜನಹಿತಕ್ಕಾಗಿ ಕಾನೂನು ಬಳಕೆಯಾಗಬೇಕು. ಕಾನೂನಿನ ದುರಪಯೋಗದಿಂದ ನಿಜವಾದ ದುರ್ಬಲರಿಗೆ ಸೌಲಭ್ಯಗಳು ಸಿಗುವುದಿಲ್ಲ. ದಲಿತರಿಗೆ ನಿಜವಾಗಿಯೂ ದೌರ್ಜನ್ಯವಾಗಿದ್ದರೆ ಪ್ರಕರಣ ದಾಖಲಿಸಿ ನ್ಯಾಯ ಪಡೆಯಲಿ. ದುಷ್ಟ ಉದ್ದೇಶಕ್ಕಾಗಿ ಕಾನೂನನ್ನು ಬಳಸಿಕೊಂಡು ಯಾರ ಗೌರವಕ್ಕೂ ಧಕ್ಕೆ ತರುವುದು ಬೇಡ ಎಂದರು.
ದಲಿತರು ಸುಶಿಕ್ಷಿತರಾಗಿ ಅಭಿವೃದ್ಧಿ ಹೊಂದಬೇಕು. ಸಂವಿಧಾನ ಶಿಲ್ಪಿ ಡಾ೤ ಅಂಬೇಡ್ಕರ್ ಪ್ರತಿಮೆಯನ್ನು ಹಾನಗಲ್ಲ ಹಾಗೂ ಅಕ್ಕಿಆಲೂರಿನ ಪ್ರಮುಖ ಸ್ಥಳಗಳಲ್ಲಿ ಸ್ಥಾಪಿಸಲಾಗುವುದು ಎಂದು ತಿಳಿಸಿದರು.
ಎಲ್ಲರಿಗೂ ನ್ಯಾಯ ಸಿಗಲಿ
ವಿಚಾರ ಸಂಕಿರಣ ಉದ್ಘಾಟಿಸಿದ ತಹಸೀಲ್ದಾರ್ ಡಾ೤ ನಾಗೇಂದ್ರ ಹೊನ್ನಳ್ಳಿ, ಕಾನೂನಿನ ಅರಿವು ಮೂಡದಿದ್ದರೆ ಸೌಲಭ್ಯಗಳು ದುರುಪಯೋಗವಾಗುತ್ತವೆ. ಶತಮಾನಗಳಿಂದ ನಡೆದ ದೌರ್ಜನ್ಯಗಳು ವಿಧ್ವಂಸಕ ಕೃತ್ಯಗಳಿಗೆ ಕಾರಣವಾಗಿವೆ. ದಲಿತರಿಗೆ ಮಾತ್ರವಲ್ಲ, ಎಲ್ಲ ದುರ್ಬಲರಿಗೂ ನ್ಯಾಯ ಸಿಗಬೇಕು. ಜಾತಿ ನಿಂದನೆಯಂತಹ ಕೃತ್ಯಗಳಿಗೆ ತಿಲಾಂಜಲಿ ಹಾಡಿ ಮುಖ್ಯವಾಹಿನಿಯಲ್ಲಿ ಬದುಕುವಂತಾಗಬೇಕು ಎಂದರು.
ತಾಪಂ ಅಧ್ಯಕ್ಷ ಮಲ್ಲನಗೌಡ ವೀರನಗೌಡ್ರ ಅಧ್ಯಕ್ಷತೆ ವಹಿಸಿ, ಸೌಲಭ್ಯಗಳನ್ನು ದಲಿತರಿಗೆ ಪ್ರಾಮಾಣಿಕವಾಗಿ ತಲುಪಿಸುವಲ್ಲಿ ಇಲಾಖೆಗಳು ಜಾಗೃತಿ ವಹಿಸಬೇಕು. ರಾಜಕೀಯ, ಸಾಮಾಜಿಕವಾಗಿ ಸಮಾನತೆ ಬರುವ ಅಗತ್ಯವಿದೆ. ಅಭಿವೃದ್ಧಿಗಾಗಿ ಎಲ್ಲರೂ ಒಂದಾಗಬೇಕು ಎಂದರು.
ವಿಚಾರ ಸಂಕಿರಣ
ಪರಿಶಿಷ್ಟ ಜಾತಿ, ವರ್ಗಗಳ ದೌರ್ಜನ್ಯ ಕಾನೂನು ಪ್ರತಿಬಂಧ ಅಧಿನಿಯಮ 1989 ಕುರಿತಾದ ವಿಚಾರ ಸಂಕಿರಣದಲ್ಲಿ ನ್ಯಾಯವಾದಿ ಕೆ.ಬಿ. ದೊಡ್ಡಮನಿ, ಪಿಎಸ್‌ಐ ಮಹಾದೇವ ಯಲಿಗಾರ, ಸಾಹಿತಿ ಮಾರುತಿ ಶಿಡ್ಲಾಪುರ ವಿಚಾರ ಮಂಡಿಸಿದರು. ಜಿಪಂ ಸದಸ್ಯ ಬಸವರಾಜ ಹಾದಿಮನಿ, ಪುರಸಭೆ ಮಾಜಿ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಸದಸ್ಯೆ ಲೀಲಾವತಿ ವಾಲ್ಮೀಕಿ, ತಾಪಂ ಸದಸ್ಯ ಬಸಣ್ಣ, ಮಾಜಿ ಸದಸ್ಯ ದಾನಪ್ಪ ಗಂಟೇರ, ಜಿಲ್ಲಾ ದೌರ್ಜನ್ಯ ಸಮಿತಿ ಸದಸ್ಯ ಚಂದ್ರಪ್ಪ ಹರಿಜನ, ದಲಿತ ನಾಯಕರಾದ ವೀರಪ್ಪ ಮಡ್ಲೂರ, ನಿಂಗಪ್ಪ ಕಾಳೇರ, ಹನುಮಂತಪ್ಪ ಯಳ್ಳೂರ, ಬಸವರಾಜ ಕಟ್ಟಿಮನಿ, ಪರಶುರಾಮ ಹುಳ್ಳಿಕಾಸಿ, ನಾಗರಾಜ ಬಾರ್ಕಿ, ಜಗದೀಶ ಹರಿಜನ, ನಿಂಗಪ್ಪ ಗಾಳೆಮ್ಮನವರ, ಮುಖಂಡರಾದ ರಂಗನಗೌಡ ಪಾಟೀಲ, ಪರಶುರಾಮ ಡೂಗನವರ, ಜಿ.ಎಂ. ಮುಲ್ಲಾ ಇದ್ದರು. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಡಾ೤ ಚಂದ್ರಪ್ಪ ನರಸಗೊಂಡರ ಸ್ವಾಗತಿಸಿದರು. ಪುರಸಭಾ ಯೋಜನಾಧಿಕಾರಿ ಶಿವಾನಂದ ಕ್ಯಾಲಕೊಂಡ ನಿರೂಪಿಸಿ, ವಂದಿಸಿದರು.

ದಲಿತರಿಗೆ ಸೌಲಭ್ಯ ಸಿಗುತ್ತಿಲ್ಲ
ಹಾನಗಲ್ಲ: ಮೀಸಲಾತಿ ಪಟ್ಟಭದ್ರರ ಸೊತ್ತಾಗಿ ಶೇ. 30ರಷ್ಟು ದಲಿತರಿಗೆ ಸರ್ಕಾರದ ಸೌಲಭ್ಯ ಹಾಗೂ ಸಾಮಾಜಿಕ ನ್ಯಾಯ ಸಿಗದೆ ದೌರ್ಜನ್ಯ ಅನುಭವಿಸುತ್ತಲೇ ಇದ್ದಾರೆ ಎಂದು ನ್ಯಾಯವಾದಿ ಕೆ.ಬಿ.ದೊಡ್ಡಮನಿ ವಿಷಾದ ವ್ಯಕ್ತಪಡಿಸಿದರು.
ಹಾನಗಲ್ಲಿನಲ್ಲಿ ಏರ್ಪಡಿಸಲಾಗಿದ್ದ ದೌರ್ಜನ್ಯ ಪ್ರತಿಬಂಧ ಅಧಿನಿಯಮ 1989ರ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಕ್ಷಣಿಕ ಪ್ರಲೋಭನೆ ಹಾಗೂ ಕುಚೋದ್ಯಕ್ಕೆ ದಲಿತರ ರಕ್ಷಣಾ ಕಾನೂನಿನ ದುರ್ಬಳಕೆ ಆಗುತ್ತಿದೆ ಎಂದರು.
ಸಾಹಿತಿ ಪ್ರೊ೤ ಮಾರುತಿ ಶಿಡ್ಲಾಪುರ ಮಾತನಾಡಿ, ಬಸವಣ್ಣ, ಬುದ್ಧ, ಅಂಬೇಡ್ಕರ್ ಸಮಾನತೆಯನ್ನು ಪ್ರತಿಬಿಂಬಿಸಿದರು. ಧಾರ್ಮಿಕ ಮುಖಂಡರು ಸಾಮರಸ್ಯಕ್ಕೆ ಮುನ್ನುಡಿ ಬರೆಯಬೇಕು. ಶೋಷಣೆ ಮುಕ್ತ ಸಮಾಜ ನಿರ್ಮಾಣವೇ ಕಾನೂನು ಹಾಗೂ ಧರ್ಮಪೀಠಗಳ ಉದ್ದೇಶವಾಗಬೇಕು ಎಂದರು.
ಹಾನಗಲ್ಲ ಪಿಎಸ್‌ಐ ಮಹದೇವ ಯಲಿಗಾರ ವಿಷಯ ಮಂಡಿಸಿ, ಕಾನೂನು ರಕ್ಷಿಸುವುದಕ್ಕಾಗಿದೆ, ಭಕ್ಷಿಸಲು ಅಲ್ಲ. ಸಾಕ್ಷಿಗಳ ಲೋಪ, ಸಂಧಾನ ಪ್ರಕ್ರಿಯೆಗಳ ಕಾರಣ ಶೇ. 99ರಷ್ಟು ದೌರ್ಜನ್ಯ ಪ್ರಕರಣಗಳು ನಿಲ್ಲುವುದೇ ಇಲ್ಲ. ಈ ನಡುವೆ ಸುಳ್ಳು ಪ್ರಕರಣಗಳ ಸಂಖ್ಯೆಯೂ ಸಾಕಷ್ಟಿದೆ. ಕಾನೂನು ಹಾಗೂ ಸಾಮಾಜಿಕ ಜಾಗೃತಿಯಿಂದ ಮಾತ್ರ ಸಮಾನತೆ ಸಾಧ್ಯ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.