ಹಾವೇರಿ

ನಮೋ ಅಭಿವೃದ್ಧಿಯ ಆಶಾಕಿರಣ

Published On :

ಶಿಗ್ಗಾಂವಿ:  ಬಡವರ ಜೀವನ ದುಸ್ತರವಾಗಿದೆ. ಜನತೆ ಕಾಂಗ್ರೆಸ್ ದುರಾಡಳಿತ ಕಂಡು ಆಕ್ರೋಶಗೊಂಡಿದ್ದಾರೆ. ಜನರ ಆಕ್ರೋಶದ ನಡುವೆ ನರೇಂದ್ರ ಮೋದಿ ಜನರಿಗೆ ಆಶಾಕಿರಣವಾಗಿದ್ದಾರೆ. ಆಕ್ರೋಶ ಮತ್ತು ಆಶಾಕಿರಣಗಳ ನಡುವೆ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಅವರು ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಧಾರವಾಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿಗೆ ಮತ ನೀಡುವಂತೆ ತೆರೆದ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮತಯಾಚನೆ ಮಾಡಿ ಮಾತನಾಡಿ, ಜೋಶಿ ಕ್ರಿಯಾಶೀಲ ವ್ಯಕ್ತಿ. ಅವರಿಗೆ ತಮ್ಮ ಅಮೂಲ್ಯ ಮತ ನೀಡಿರಿ ಎಂದರು. ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ, ಬಿಜೆಪಿ ತಾಲೂಕು ಅಧ್ಯಕ್ಷ ದೇವಣ್ಣ ಚಾಕಲಬ್ಬಿ, ಜಿಪಂ ಸದಸ್ಯರು, ತಾಪಂ ಸದಸ್ಯರು, ತಿಪ್ಪಣ್ಣ ಸಾಥಣ್ಣವರ ಹಾಗೂ ಗ್ರಾಮದ ಭರಮಪ್ಪ ಓಲೆಕಾರ, ಸುರೇಶ ಪಾಟೀಲ, ಪುಂಡ್ಲಿಕಪ್ಪ ಹರಿಜನ, ಬಿಜೆಪಿ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿಗೆ ಮತ ನೀಡುವಂತೆ ಮನೆಮನೆಗೆ ತೆರಳಿ ಮತ ಯಾಚಿಸಿದರು.
ಕಾಂಗ್ರೆಸ್ ಆಡಳಿತದಿಂದದೇಶ ದಿವಾಳಿ: ಚವ್ಹಾಣ
ಶಿಗ್ಗಾಂವಿ: 10 ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿದ ಕಾಂಗ್ರೆಸ್ ಸರ್ಕಾರ ಅತಿ ಹೆಚ್ಚು ಭ್ರಷ್ಟಾಚಾರದಲ್ಲಿ ಮುಳುಗಿದ ಸರ್ಕಾರ ಎಂಬ ಖ್ಯಾತಿ ಪಡೆದಿದೆ ಎಂದು ಬಿಜೆಪಿ ಶಹರ ಘಟಕದ ಅಧ್ಯಕ್ಷ, ಪುರಸಭೆ ಸದಸ್ಯ ಸುಭಾಸ ಚವ್ಹಾಣ ಆರೋಪಿಸಿದರು.  ಬಿಜೆಪಿ ಯುವಮೋರ್ಚಾ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರೊಂದಿಗೆ ಪಟ್ಟಣದ ವಿವಿಧ ಪ್ರದೇಶಗಳಲ್ಲಿ ಮನೆ-ಮನೆಗೆ ತೆರಳಿ ಪ್ರಹ್ಲಾದ ಜೋಶಿ ಪರ ಮತಯಾಚಿಸಿ ಮಾತನಾಡಿದರು. ಭಾರತ ದೇಶ ಇಂದು ಆರ್ಥಿಕ ಸಂಕಷ್ಟದಲ್ಲಿ ಮುಳುಗಿ ದಿವಾಳಿಯ ಅಂಚಿಗೆ ಬಂದು ನಿಲ್ಲಲು 60 ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷವೇ ಕಾರಣ. ಸಂಪದ್ಭರಿತ ರಾಷ್ಟ್ರವನ್ನು ಸಾಲಗಾರ ರಾಷ್ಟ್ರವನ್ನಾಗಿಸಲು ಕಾಂಗ್ರೆಸ್ ಕಾರಣ. ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ದೇಶದ ನಾಗರಿಕರಿಗೆ ನೆಮ್ಮದಿಯಿಂದ ಬದುಕುವಂತಹ ವಾತಾವರಣ ನಿರ್ಮಿಸುವುದು ನರೇಂದ್ರ ಮೋದಿ ಅವರಿಂದ ಮಾತ್ರ ಸಾಧ್ಯ. ಇದನ್ನು ಅರಿತುಕೊಂಡಿರುವ ದೇಶದ ನಾಗರಿಕರು ಈ ಬಾರಿ ಬಿಜೆಪಿಯನ್ನು ಬೆಂಬಲಿಸಿ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ತಿಳಿಸಿದರು.  ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷೆ ಶಂಕ್ರಮ್ಮ ಅಂದಲಗಿ, ಮಾಜಿ ಅಧ್ಯಕ್ಷ ಪರಶುರಾಮ ಸೊನ್ನದ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಸವರಾಜ ನಾರಾಯಣಪುರ, ಪುರಸಭೆ ಸದಸ್ಯರಾದ ಬಿ.ಎಸ್. ನವಲಗುಂದ, ಫಕ್ಕೀರೇಶ ಶಿಗ್ಗಾಂವಿ, ವೀಣಾ ಕುರ್ಡೇಕರ, ರೂಪಾ ಬನ್ನಿಕೊಪ್ಪ, ಮುಖಂಡರಾದ ಸಾಗರ ಮಲ್ಲೂರು, ಮುತ್ತು ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.
ಕಾಂಗ್ರೆಸ್ ಮತ ಯಾಚನೆ
ಶಿಗ್ಗಾಂವಿ: ಸಂಸದ ಪ್ರಹ್ಲಾದ ಜೋಶಿ ಕುಂಭಕರ್ಣನ ನಿದ್ರೆಯಲ್ಲಿದ್ದಾರೆ ಎಂದು ಮಾಜಿ ಶಾಸಕ ಸೈಯ್ಯದ ಅಜ್ಜಂಪೀರ ಖಾದ್ರಿ ವ್ಯಂಗ್ಯವಾಡಿದರು. ತಾಲೂಕಿನ ಕುರ್ಸಾಪುರ ಗ್ರಾಮದಲ್ಲಿ ಕಾಂಗ್ರೆಸ್ ಪರ ಮನೆ-ಮನೆಗೆ ತೆರಳಿ ಮತಯಾಚಿಸಿ ಮಾತನಾಡಿದ ಅವರು, ದಿನಕ್ಕೆ ನೂರಾರು ಸುಳ್ಳು ಸಂಗತಿಗಳನ್ನು ಜನರ ಮಧ್ಯೆ ಹರಿಬಿಟ್ಟು, ತಮ್ಮ ಸ್ವಾರ್ಥಕ್ಕೆ ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಜೋಶಿ ಹತ್ತು ವರ್ಷ ಸಂಸದರಾಗಿ ಜನರ ಪಾಲಿಗೆ ಹೆಮ್ಮಾರಿಯಾದ ಶಿಗ್ಗಾಂವಿ ಹೆದ್ದಾರಿ ಅನಾನುಕೂಲತೆಗೆ ಪರಿಹಾರ ಕಲ್ಪಿಸಿಲ್ಲ ಎಂದು ದೂರಿದರು. ಧಾರವಾಡ ಕ್ಷೇತ್ರದಿಂದ ವಿನಯ ಕುಲಕರ್ಣಿ ಚುನಾಯಿತರಾಗಿ ಕೆಲವೇ ದಿನಗಳಲ್ಲಿ ಹೆದ್ದಾರಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಜನಸಾಮಾನ್ಯರ ಕೈಗೆ ಸಿಗದಂತ ಸ್ಥಿತಿಯಲ್ಲಿರುವ ಜೋಶಿ ಚುನಾವಣೆ ಬಂದಾಗ ಜನರ ಮುಂದೆ ಅಭಿವೃದ್ಧಿ ಮುಖವಾಡ ಹೊತ್ತು ಮತ ಯಾಚಿಸುತ್ತಿದ್ದಾರೆ. ಸಮರ್ಥ ನಾಯಕತ್ವ ಇಲ್ಲದೇ ಬಳಲುತ್ತಿರುವ ಬಿಜೆಪಿ ಮುಖಂಡರು ವ್ಯಕ್ತಿಗತವಾಗಿ ಚುನಾವಣೆ ಎದುರಿಸುತ್ತಿರುವುದು ನಾಚಿಗೇಡು. ಮೋದಿ ಮುಂದಿಟ್ಟುಕೊಂಡು ಮತ ಕೇಳುತ್ತಿರುವ ಮುಖಂಡರಿಗೆ ಮತದಾರರು ಮತದಾನದ ಮೂಲಕ ತಕ್ಕಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ವಿರುದ್ಧ ಖಾದ್ರಿ ಹರಿಹಾಯ್ದರು. ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ, ಮಾಜಿ ಸಚಿವ ಪಿ.ಸಿ. ಸಿದ್ದನಗೌಡ್ರ ಮಾತನಾಡಿದರು. ಕಾಂಗ್ರೆಸ್ ಅಧ್ಯಕ್ಷ ಹನುಮರಡ್ಡಿ ನಡುವಿನಮನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.