ಹಾವೇರಿ

ನಾಳೆ ಪರಿತಪಿಸಬೇಡಿ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಏ. 16
ಪ್ರಜಾಪ್ರಭುತ್ವವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸುವ ಅವಕಾಶ ಸಾಮಾನ್ಯನ ಕೈಯಲ್ಲಿದೆ. ಚುನಾವಣೆ ಬಳಿಕ ಪರಿತಪಿಸುವಂತಾಗಬಾರದು ಎಂದರೆ ಏ. 17ರಂದು ಕಡ್ಡಾಯವಾಗಿ ಎಲ್ಲರೂ ಹಕ್ಕು ಚಲಾಯಿಸಬೇಕಿದೆ. ಸಮರ್ಥ ಅಭ್ಯರ್ಥಿಗೆ ಮತ ಹಾಕುವ ಮೂಲಕ ಮತದಾರನೇ ನಿಜವಾದ ಪ್ರಭು ಎಂಬ ವಿಶೇಷಣಕ್ಕೆ ನೈಜ ಅರ್ಥ ತರಬೇಕಿದೆ.
16ನೇ ಸಾರ್ವತ್ರಿಕ ಚುನಾವಣೆಯ ಮತದಾನದ ದಿನ ಬಂದಿದೆ. ಗುರುವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೂ ಅರ್ಹ ಮತದಾರರು ಹಕ್ಕು ಚಲಾಯಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಸುವರ್ಣಾವಕಾಶ ಕೈಚೆಲ್ಲದೇ ಕ್ಷೇತ್ರದ ಜನರು ಯೋಚಿಸಿ ಮತ ಹಾಕಬೇಕಿದೆ. ಹಾವೇರಿ ಕ್ಷೇತ್ರದಲ್ಲಿ 19 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸುವ, ಸಂಸತ್ತಿನಲ್ಲಿ ತಮ್ಮ ಕಷ್ಟಗಳಿಗೆ ಧ್ವನಿಯಾಗುವ ಸಮರ್ಥರನ್ನು ಆಯ್ಕೆ ಮಾಡುವ ಜವಾಬ್ದಾರಿ ಮತದಾರರ ಮೇಲಿದೆ. ಆದ್ದರಿಂದ ಆಸೆ, ಆಮಿಷಗಳಿಗೆ ಬಲಿಯಾಗದೇ ಹಕ್ಕನ್ನು ಚಲಾಯಿಸಬೇಕು. ಈಗ ಎಚ್ಚರ ತಪ್ಪಿದರೆ ಮುಂದಿನ 5 ವರ್ಷ ಪರಿತಪಿಸಬೇಕಾಗುತ್ತದೆ ಎಂಬುದು ನೆನಪಿರಬೇಕು.
15.57 ಲಕ್ಷ ಮತದಾರರು: ಹಾವೇರಿ, ಗದಗ ಜಿಲ್ಲೆ ಒಳಗೊಂಡ ಲೋಕಸಭಾ ಕ್ಷೇತ್ರದಲ್ಲಿ 8,63,339 ಪುರುಷ, 7,51,399 ಮಹಿಳಾ ಹಾಗೂ ಇತರ 71 ಸೇರಿ ಒಟ್ಟು 15,57,815 ಮತದಾರರು ಗುರುವಾರ ಹಕ್ಕು ಚಲಾಯಿಸುವ ಅವಕಾಶ ಪಡೆದಿದ್ದಾರೆ. ಹಾವೇರಿ ಜಿಲ್ಲೆಯ 5 ವಿಧಾನಸಭೆ, ಗದಗ ಜಿಲ್ಲೆಯ 3 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜನರು ಅಭ್ಯರ್ಥಿ ಆಯ್ಕೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ. 2009ರ ಚುನಾವಣೆಯಲ್ಲಿ ಶೇ. 63.59ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾರರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ವ್ಯಾಪಕವಾಗಿ ನಡೆದ ಹಿನ್ನೆಲೆಯಲ್ಲಿ ಮತದಾನದ ಪ್ರಮಾಣ ಇನ್ನೂ ಅಧಿಕಗೊಳ್ಳುವ ನಿರೀಕ್ಷೆ ಹೊಂದಲಾಗಿದೆ.
ಆಮಿಷಕ್ಕೆ ಬಲಿಯಾಗದಿರಿ: ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದಿರಿ. ಪುಡಿಗಾಸಿಗೆ ಕೈಚಾಚಿದರೆ ಮುಂದೆ ಆಯ್ಕೆಯಾಗುವ ಅಭ್ಯರ್ಥಿಯನ್ನು ನಿಲ್ಲಿಸಿ ಕೇಳುವ ನೈತಿಕತೆ ಉಳಿಯುವುದಿಲ್ಲ. ನಿಮ್ಮ ಸಮಸ್ಯೆಗೆ ಪರಿಹಾರ ಕೇಳುವ ಹಕ್ಕು ಕಳೆದುಕೊಂಡಂತಾಗುತ್ತದೆ.ಮತಗಟ್ಟೆಗೆ ಬನ್ನಿ: ಚುನಾವಣಾ ಆಯೋಗ ಈ ಬಾರಿ ಮತ ಚಲಾಯಿಸುವ ಅವಧಿಯನ್ನು ಒಂದು ಗಂಟೆ ವಿಸ್ತರಿಸಿದ್ದು, ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿ ಸಂಜೆ 6 ಗಂಟೆವರೆಗೂ ಮತ ಹಾಕಲು ಅವಕಾಶವಿದೆ. ಕ್ಷೇತ್ರದಲ್ಲಿ
1,876 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಮತದಾನಕ್ಕೆ ಅರ್ಹರಿರುವವರಿಗೆ ಮತದಾರರ ಚೀಟಿಯನ್ನು ವಿತರಿಸಲಾಗಿದೆ. ಒಂದು ವೇಳೆ ಮೊದಲೇ ಚೀಟಿ ಪಡೆಯದಿದ್ದರೂ ಮತಗಟ್ಟೆಯಲ್ಲೇ ಚೀಟಿ ಪಡೆದು ಹಕ್ಕು ಚಲಾಯಿಸುವ ವ್ಯವಸ್ಥೆಯಿದೆ. ಆದ್ದರಿಂದ ರಜೆಯೆಂದು ಮನೆಯಲ್ಲಿ ಕುಳಿತುಕೊಳ್ಳದೇ ಕಡ್ಡಾಯವಾಗಿ ಮತ ಚಲಾಯಿಸು ಮೂಲಕ ನಿಮ್ಮ ಹಕ್ಕಿನ ಮೌಲ್ಯ ಉಳಿಸಿಕೊಳ್ಳಬೇಕು.
ಸೂಕ್ತ ಭದ್ರತೆ: ಮತದಾನದ ವೇಳೆ ಅಹಿತಕರ ಘಟನೆ ನಡೆಯದಂತೆ ಎಲ್ಲ ಮತಗಟ್ಟೆ ವ್ಯಾಪ್ತಿಯಲ್ಲಿ ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಹಾಗೂ ಭದ್ರತೆ ಕಲ್ಪಿಸಲಾಗಿದೆ. ಮತಗಟ್ಟೆಗೆ ತೆರಳುವ ಮುನ್ನ ಚುನಾವಣಾ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಒಂದನ್ನು ಹಿಡಿದುಕೊಂಡು ಹೋಗುವುದನ್ನು ಮತದಾರರು ಮರೆಯಬಾರದು. ಮತದಾರರ ಪಟ್ಟಿಯಲ್ಲಿ ಹೆಸರಿರುವುದನ್ನು ಖಚಿತಪಡಿಸಿಕೊಂಡು ಭಾವಚಿತ್ರವಿರುವ ಮತದಾರರ ಚೀಟಿ, ಚಾಲನಾ ಪರವಾನಗಿ, ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್ ಇತ್ಯಾದಿ ದಾಖಲೆ ಹಿಡಿದುಕೊಂಡು ಮತ ಚಲಾಯಿಸಿ. ಯೋಗ್ಯ ಅಭ್ಯರ್ಥಿಯನ್ನು ಸಂಸತ್ತಿಗೆ ಕಳುಹಿಸಲು ನಿಮ್ಮ ಶಕ್ತಿ ಉಪಯೋಗಿಸಿ.



-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.