ಹಾವೇರಿ

ಪಂಚಾಯ್ತಿಗೆ ಬೀಗ: ಪ್ರತಿಭಟನೆ

Published On :

ಗುತ್ತಲ: ಕಸಾಯಿಖಾನೆಗೆ ನೀಡಿದ ಜಾಗವನ್ನು ಪಂಚಾಯಿತಿಯವರು ಬೇರೆಯವರಿಗೆ ನೀಡಿದ್ದಾರೆಂದು ಆರೋಪಿಸಿ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪಟ್ಟಣದ ಅಂಬೇಡ್ಕರ್ ನಗರದ ನಿವಾಸಿಗಳು ಹಾಗೂ ಗ್ರಾಮಸ್ಥರು ಸೋಮವಾರ ಪಂಚಾಯಿತಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಪಂಚಾಯಿತಿಯ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಕಾರರು, ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಬೆಳಗ್ಗೆಯಿಂದಲೇ ಪ್ರತಿಭಟನೆಯನ್ನು ಪ್ರಾರಂಭಿಸಿದ ಪ್ರತಿಭಟನಾಕಾರರು ಮಧ್ಯಾಹ್ನವಾದರೂ ಸಮಸ್ಯೆಗೆ ಸ್ಪಂದಿಸದೇ ಇರದ ಅಧಿಕಾರಿಗಳ ವಿರುದ್ಧ ಹರಿಹಾಯ್ದು, ಪಂಚಾಯಿತಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ ಕೋಟೇರ, ಈ ಹಿಂದೆ ಪಂಚಾಯಿತಿಯವರು ಕಸಾಯಿ ಖಾನೆಗೆ ಜಾಗೆಯನ್ನು ಮೀಸಲಿರಿಸಿದ್ದರು. ಯಾರಿಗೂ ತಿಳಿಸದ ಹಾಗೆ ಅದೇ ಜಾಗೆಯನ್ನು ಬೇರೆಯವರಿಗೆ ನೀಡಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದು ದೂರಿದರು. ಅಲ್ಲದೇ ಜಾಗೆ, ಮನೆ ಇಲ್ಲದೇ ಅನೇಕ ಕುಟುಂಬಗಳು ಅಂಬೇಡ್ಕರ್ ನಗರದಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದಾರೆ. ಉಳ್ಳವರಿಗೆ ಮೀಸಲು ಜಾಗೆಯನ್ನು ನೀಡಿದ್ದು ಯಾವ ನ್ಯಾಯವೆಂದು ಪ್ರಶ್ನಿಸಿದರು.  
ಅಲ್ಲದೇ ಚಿದಂಬರನಗರ ಅನೇಕ ಮೂಲ ಸಮಸ್ಯೆಗಳಿಂದ ತಾಂಡವಾಡುತ್ತಿದೆ. ಚರಂಡಿ, ಕುಡಿಯುವ ನೀರು ಹಾಗೂ ಬೀದಿ ದೀಪ ಸೇರಿದಂತೆ ಅನೇಕ ಸಮಸ್ಯೆಗಳಿಂದ ಇಲ್ಲಿನ ನಿವಾಸಿಗಳು ರೋಸಿಹೋಗಿದ್ದಾರೆ. ಅನೇಕ ಬಾರಿ ಅಧಿಕಾರಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ಇನ್ನೂ ಒಂದು ವಾರದಲ್ಲಿ ಚಿದಂಬರ ನಗರದ ಜನರ ಸಮಸ್ಯೆಗಳಿಗೆ ಸ್ಪಂದಿಸದೇ ಹೋದರೆ, ಉಗ್ರ ಹೋರಾಟ ಮಾಡಲಾಗುವುದೆಂದು ನಿಂಗಪ್ಪ ಗೊರವರ ಹಾಗೂ ಶಂಕ್ರಪ್ಪ ಆನ್ವೇರಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಪ್ರತಿಭಟನಾಕರರ ಮನವೊಲಿಸಿದ ಅಧಿಕಾರಿಗಳು, ಬೇಡಿಕೆಗಳನ್ನು ಸಭೆಯಲ್ಲಿ ಚರ್ಚಿಸಿ ಪರಿಹಾರವನ್ನು ಶೀಘ್ರದಲ್ಲಿ ಕಂಡುಕೊಳ್ಳಲು ಪ್ರಯತ್ನಿಸಲಾಗುವುದೆಂದು ಭರವಸೆ ನೀಡಿದಾಗ, ಪ್ರತಿಭಟನೆ ಹಿಂದಕ್ಕೆ ಪಡೆದರು. ಗಂಗವ್ವ ಮ್ಯಾಗೇರಿ, ಸುರೇಶ ಕೋಟೇರ, ದ್ಯಾಮವ್ವ ಮ್ಯಾಗೇರಿ, ಬಸವರಾಜ ಕನವಳ್ಳಿ, ಪರಮೇಶಪ್ಪ ಕುಮಾರ ಸಿದ್ಧಣ್ಣನವರ, ರಾಮಪ್ಪ ಚಿಂದಿ, ಫಕ್ಕೀರಪ್ಪ ಮರಡಿ, ಸುರೇಶ, ಮರಿಯಪ್ಪ ಚಂದಾಪುರ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.