ದ್ಯಾಮವ್ವ ಜಾತ್ರೆಯಲ್ಲಿಂದು ಸಿಡಿಮದ್ದು ಪ್ರದರ್ಶನ
ಕನ್ನಡಪ್ರಭ ವಾರ್ತೆ, ಗುತ್ತಲ, ಫೆ. 4
ಉತ್ತರ ಕರ್ನಾಟಕದ ಪ್ರಸಿದ್ಧ ಜಾತ್ರೆಗಳಲ್ಲಿ ಮಹತ್ವದೆಂದೆನೆಸಿಕೊಂಡಿರುವ ತುಂಗಭದ್ರೆಯ ನದಿ ದಂಡೆಯಲ್ಲಿರುವ ಸಮೀಪದ ಹಾವನೂರ ದ್ಯಾಮವ್ವನ ಜಾತ್ರೆ ಸಡಗರ ಸಂಭ್ರಮದಿಂದ ನಡೆಯುತ್ತಿದೆ. ಈಗಾಗಲೇ ಜಾತ್ರೆ ಆರಂಭಗೊಂಡಿದ್ದು, ಕೊನೆಯ ದಿನವಾದ ಫೆ. 5ರಂದು ಲಕ್ಷಾಂತರ ಭಕ್ತರು ಸೇರುವ ನಿರೀಕ್ಷೆಯಿದೆ.
ಹಾವನೂರ ದ್ಯಾಮವ್ವನ ಜಾತ್ರೆಗೆ ನಾಡಿನಾದ್ಯಂತ ವಿವಿಧ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳು ಪ್ರತಿ ವರ್ಷ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ಜ. 31ರಿಂದ ಪ್ರಾರಂಭವಾಗುವ ಈ ಜಾತ್ರೆ 5 ದಿನಗಳವರೆಗೆ ಸಂಭ್ರಮದಿಂದ ಜರುಗುತ್ತಿದೆ. ಮಂಗಳವಾರ ರಂಗೇರುವ ಈ ಜಾತ್ರೆಯ ವೈಭವ ನೋಡಲು ಎರಡು ಕಣ್ಣು ಸಾಲದು. ಮಂಗಳವಾರ ಮುಂಜಾನೆಯಂದು ವೈಭವದ ಮೆರವಣಿಗೆಯೊಂದಿಗೆ, ಸಕಲ ವಾದ್ಯಗಳೊಂದಿಗೆ ಭಾಜಾ ಭಜಂತ್ರಿಗಳೊಂದಿಗೆ ಗ್ರಾಮದ ನಾಗರಿಕರು ಮತ್ತು ಜಾತ್ರೆಗೆ ಆಗಮಿಸಿದ ಭಕ್ತಾದಿಗಳು ಬುಟ್ಟಿ ಊರಮ್ಮಳನ್ನು ಚೌತಮನಿ ಕಟ್ಟೆಗೆ ಕರೆತಂದು ಅಲಂಕರಿಸಿದರು. ನಂತರದಲ್ಲಿ ಪೂಜಾ ವಿಧಿ ವಿಧಾನಗಳ ಪ್ರಕಾರ ದೇವಿಗೆ ಪೂಜೆ ಸಲ್ಲಿಸಿದರು. ಬಂದಂತಹ ಭಕ್ತಾದಿಗಳು ದ್ಯಾಮವ್ವ ನಿನ್ನಾಲ್ಕ ಉದೋ..ಉದೋ ಎಂದು ಹರ್ಷೋದ್ಗಾರ ವ್ಯಕ್ತಪಡಿಸಿದರು.
ಫೆ. 5ರಂದು ನಸುಕಿನ ಜಾವ ದೇವಿಗೆ ಸಕಲ ವೈಭವದೊಂದಿಗೆ ತಮಾಷಾ ರಂಗುರಂಗಿನ ಮದ್ದುಗಳನ್ನು ಸಿಡಿಸಿ ಸಂಭ್ರಮಿಸುವುದರೊಂದಿಗೆ, ವಿಜೃಂಭಣೆಯಿಂದ ಹೊರಟು ಚವುತಮನಿಕಟ್ಟೆಗೆ ದೇವಿಯನ್ನು ಕರೆತಂದು ಪ್ರತಿಷ್ಠಾಪಿಸುವ ಕಾರ್ಯಕ್ರಮವಿದೆ. ವರ್ಷದಲ್ಲಿ ಒಮ್ಮೆ ಮಾತ್ರ ದೇವಿಯ ದರ್ಶನವಾಗುತ್ತಿದ್ದು, ಈ ವೈಭವದ ಕಾರ್ಯಕ್ರಮವನ್ನು ನೋಡಲೆಂದೇ ಸಹಸ್ರಾರು ಜನ ನಿದ್ದೆಯನ್ನು ಲೆಕ್ಕಿಸದೇ ಶ್ರೀದೇವಿಯ ವೈಭವದ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ದೇವಿಯ ದರ್ಶನವನ್ನು ಪಡೆದುಕೊಳ್ಳುತ್ತಿದ್ದಾರೆ.
ಜಾತ್ರೆಯ ವೈಭವ: ಸುಮಾರು ದಶಕಗಳ ಇತಿಹಾಸವಿರುವ ಈ ದ್ಯಾಮವ್ವನ ಜಾತ್ರೆ ಪ್ರತಿ ವರ್ಷ ವೈಭವದಿಂದ ಕೂಡಿರುತ್ತಿದೆ. ಪ್ರತಿ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ಸಂಖ್ಯೆ ಜನ ಸೇರುವ ನಿರೀಕ್ಷೆಯಿದೆ. ಅಂದಾಜು 2 ಲಕ್ಷಕ್ಕಿಂತ ಅಧಿಕ ಜನ ಸೇರಿರುವ ನಿರೀಕ್ಷೆ ಇದೆ ಎಂದು ತಿಳಿದು ಬಂದಿದೆ. ಅದರಲ್ಲೂ ಶ್ರಿದೇವಿ ಚೌತಮನಿ ಕಟ್ಟಿಗೆ ಬರುವುದನ್ನು ವೀಕ್ಷಿಸಲು ಜನ ಮಂಗಳವಾರ ಸಂಜೆಯಿಂದ ತಂಡೋಪತಂಡವಾಗಿ ಹಾವನೂರ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ.
ಭಾರಿ ಬಂದೋಬಸ್ತ್: ನಿರೀಕ್ಷೆಗೂ ಮಿರಿ ದ್ಯಾಮವ್ವನ ಜಾತ್ರೆಗೆ ಆಗಮಿಸುತ್ತಿರುವ ಜನರ ನಿಯಂತ್ರಣಕ್ಕೆ ಮತ್ತು ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿದೆ. ಎರಡು ಜನ ಸಿಪಿಐ, ನಾಲ್ಕು ಪಿಎಸ್‌ಐ, 12 ಜನ ಎಎಸ್‌ಐ, 28 ಹೆಡ್ ಕಾನಸ್ಟೇಬಲ್, ಮಹಿಳಾ ಪೊಲೀಸರು ಸೇರಿದಂತೆ 100ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ, 2 ಡಿಆರ್ ವಾಹನಗಳನ್ನು ನಿಯೋಜನೆಗೊಳಿಸಿದೆ. ನಾಡಿನ ಬಹುತೇಕ ಜಿಲ್ಲೆಗಳಿಂದ ದೇವಿಯ ದರ್ಶನಕ್ಕೆ ಸೋಮವಾರದಿಂದಲೇ ಜನರು ಟ್ರ್ಯಾಕ್ಟರ್, ಚಕ್ಕಡಿ ಮುಂತಾದ ವಾಹನಗಳಿಂದ ಆಗಮಿಸುತ್ತಿದ್ದು, ಕುಡಿಯುವ ನೀರು ಜಾಗೆಯ ವ್ಯವಸ್ಥೆಗೆ ಸ್ಥಳೀಯ ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಕಲ್ಪಿಸಿಕೊಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

