ಧರ್ಮಗಳಲ್ಲಿ ಸಂಘರ್ಷವಿಲ್ಲ
ಸಂತ ಶಿಶುನಾಳ ಶರೀಫ ವೇದಿಕೆ, ಶಿಗ್ಗಾಂವಿ: ದೇವರು ಒಬ್ಬನೇ ಎಂಬುದೇ ಎಲ್ಲ ಧರ್ಮಗಳೂ ಹೇಳುತ್ತವೆ. ಆದ್ದರಿಂದ ಧರ್ಮಗಳಲ್ಲಿ ಯಾವುದೇ ಸಂಘರ್ಷವಿಲ್ಲ, ಬದಲಾಗಿ ಧರ್ಮದ ಅನುಯಾಯಿಗಳಲ್ಲಿ ಸಂಘರ್ಷವಿದೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು 1108 ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ನುಡಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 5ನೇ ದಿನವಾದ ಸೋಮವಾರದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ದೇವರು ಇದ್ದಾನೆಯೋ ಇಲ್ಲವೇ ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ನಂಬಿದರೆ ದೇವರುಂಟು, ಯಾರಿಗೆ ನಂಬಿಕೆ ಇಲ್ಲವೋ ಅವರಿಗೆ ಇಲ್ಲ ಎಂದಷ್ಟೇ ಹೇಳಬಹುದು. ಕುರುಡನಿಗೆ ಯಾವ ವಸ್ತುವೂ ಕಾಣುವುದಿಲ್ಲ ಎಂದ ಮಾತ್ರಕ್ಕೆ ಯಾವುದೇ ವಸ್ತುವೇ ಇಲ್ಲ ಎನ್ನಲು ಸಾಧ್ಯವಿಲ್ಲ. ದೇವರು ನಮ್ಮೊಳಗೇ ಇದ್ದಾನೆ. ಎಲ್ಲ ಧರ್ಮಗಳೂ ಇದನ್ನೇ ಹೇಳುತ್ತವೆ. ದೇವರ ಬಗ್ಗೆ ಯಾವ ಧರ್ಮದಲ್ಲೂ ಸಂಘರ್ಷವಿಲ್ಲ. ಆದರೆ ಧರ್ಮದ ಅನುಯಾಯಿಗಳಲ್ಲಿ ಮಾತ್ರ ಸಂಘರ್ಷವಿದೆ ಎಂದು ನುಡಿದರು.
ದೇವರು ಎಂಬ ಪರಿಕಲ್ಪನೆ ಬಗ್ಗೆ ಸಾವಿರಾರು ವರ್ಷಗಳಿಂದ ಚರ್ಚೆ ನಡೆಯುತ್ತಿದೆ. ಭೂಮಿಯೂ ಸೂರ್ಯಮಂಡಲದಲ್ಲಿ ತನ್ನ ಕಕ್ಷೆಯಲ್ಲಿ ತಿರುಗುತ್ತಿರುತ್ತದೆ. ನಿರ್ದಿಷ್ಟ ಕಕ್ಷೆ, ವೇಗದಲ್ಲಿ ಸೌರಮಂಡಲದ ಎಲ್ಲಾ ಗ್ರಹಗಳೂ ತಿರುಗುತ್ತಿರುತ್ತವೆ. ನಿರ್ದಿಷ್ಟ ಗುರಿ ಇಲ್ಲದೇ ಬೇಕಾಬಿಟ್ಟಿಯಾಗಿ ತಿರುಗುತ್ತಿರುವ ಮನುಷ್ಯ ಮಾತ್ರ. ಭೂಮಿಯಲ್ಲಿನ ಮನುಷ್ಯ ನಿರ್ದಿಷ್ಟ ಗುರಿ ಇಟ್ಟುಕೊಂಡು ಹೇಗೆ ನಡೆಯಬೇಕು ಎಂದು ಹೇಳುವುದೇ ಧರ್ಮ. ವೇದೋಪನಿಷತ್ತಿನ ಕಾಲದಲ್ಲಿ ಅನೇಕ ದೇವರ ಕಲ್ಪನೆಯನ್ನು ಕಣ್ಣಿಗೆ ಕಾಣಿಸುವ ಪ್ರಾಕೃತಿಕ ಶಕ್ತಿಗಳನ್ನೆಲ್ಲ ದೇವರೆಂದು ಹೇಳಿ ಬಹುದೇವತಾರಾಧನೆಗೆ ಆದ್ಯತೆ ನೀಡಿದ್ದರು. ಉಪನಿಷತ್ತಿನ ಕಾಲದಲ್ಲಿ ಪ್ರಾಕೃತಿಕ ಶಕ್ತಿಗಳ ಆಚೆ ಇನ್ನೊಂದು ಶಕ್ತಿಯಿದೆ. ಆ ಶಕ್ತಿಯಿಂದ ಸೂರ್ಯ, ಚಂದ್ರರೆಲ್ಲ ಪ್ರಜ್ವಲಿಸುತ್ತಿದೆ ಎಂದು ಋಷಿಮುನಿಗಳು ಹೇಳಿದರು. ದೇವನೊಬ್ಬ ನಾಮ ಹಲವು ಎಂಬುದನ್ನು ಎಲ್ಲರೂ ಒಪ್ಪಿಕೊಂಡಿದ್ದರು. 12ನೇ ಶತಮಾನದಲ್ಲಿ ಶರಣರೂ ಇದನ್ನೇ ಪ್ರತಿಪಾದಿಸಿದ್ದರು. ಇದನ್ನೇ ಎಲ್ಲ ಧರ್ಮಗಳು ಹೇಳಿವೆ. ಮಂದಿರ, ಮಸೀದಿ, ಚರ್ಚ್ಗಳಿಗೆ ತೆರಳಲು ಕೆಲವರಿಗೆ ಮಾತ್ರ ಅವಕಾಶವಿದೆ. ಆದರೆ ಶೌಚಾಲಯ ಎಲ್ಲರೂ ಪ್ರವೇಶಿಸುತ್ತಾರೆ. ಅಂದರೆ ಶೌಚಾಲಯಕ್ಕಿಂತ ನಮ್ಮ ಮಂದಿರ, ಮಸೀದಿ, ಚರ್ಚ್ಗಿಂತ ಕಡೆಯಾಗಿದೆ. ಹಿಂದೂಗಳು ದೇವರನ್ನು ಮಸೀದಿಯಲ್ಲಿ ಯಾಕೆ ನೋಡಬಾರದು, ಕ್ರಿಶ್ಚಿಯನ್ನರು ಮಂದಿರದಲ್ಲಿ ಯಾಕೆ ದೇವರನ್ನು ಕಾಣಬಾರದು ಎಂದು ಅವರು ಪ್ರಶ್ನಿಸಿದರು. ವಚನದಲ್ಲಿ ನಾಮಾಮೃತ ತುಂಬಿದೆ. ಶರಣರ ವಚನಗಳು ಅನುಭಾವದಿಂದ ಬಂದಿವೆ. ಶರಣರು, ಸಂತರು, ದಾಸರು ಒಂದು ಹಂತ ಮುಟ್ಟಿದಾಗ ಅದನ್ನು ಹೇಳಲು ಅವರಿಗೆ ಶಬ್ದ ಸಿಗಲಿಲ್ಲ. ಆ ಅನುಭಾವವನ್ನು ಹೇಳಲು ಅಸಮರ್ಥರಾಗುತ್ತಾರೆ. ಕಾಲಾತೀತವಾದದ್ದನ್ನು ಶಬ್ದದಲ್ಲಿ ಹೇಳಲು ಸಾಧ್ಯವಿಲ್ಲ. ವಿಜ್ಞಾನಿಗಳು ಕಂಡದ್ದು ಭೌತಿಕ ಸತ್ಯ. ಆದರೆ ಬುದ್ಧ, ಬಸವಣ್ಣ ಸೇರಿದಂತೆ ಶರಣರು, ಸಂತರು ಕಂಡುಹಿಡಿಯಲು ಹೋಗಿದ್ದು ಅಧ್ಯಾತ್ಮಿಕ ಸತ್ಯ. ಅಂಥ ಜ್ಞಾನದ ಕಡೆಗೆ ನಮ್ಮ ನೋಟವಿರಬೇಕು. ಹೀಗೆಂದ ಮಾತ್ರಕ್ಕೆ ಈ ಜೀವನ ನಶ್ವರ ಎಂದು ತಿಳಿಯಬೇಕಿಲ್ಲ. ನಮ್ಮಲ್ಲಿಯೇ ದೇವರಿದ್ದಾನೆ. ಆ ಅರಿವನ್ನು ಮೂಡಿಸುವ ಪ್ರಯತ್ನವನ್ನು ಬಸವಾದಿ ಶರಣರು ಮಾಡಿದ್ದಾರೆ ಎಂದು ಹೇಳಿದರು. ಎಲ್ಲ ಧರ್ಮಗಳೂ ಹುಟ್ಟಿದ್ದು ಮಾನವತೆಗೆ ಒಳ್ಳೆಯದಾಗಬೇಕು ಎಂಬ ಕಾರಣಕ್ಕಾಗಿ. ಇಸ್ಲಾಂ ಎಂದರೆ ಶಾಂತಿ. ಎಲ್ಲ ಧರ್ಮಗಳೂಶಾಂತಿ, ಸೌಹಾರ್ದತೆಯನ್ನೇ ಸಾರುತ್ತವೆ. ಒಬ್ಬರನ್ನೊಬ್ಬರನ್ನು ಪ್ರೀತಿಯಿಂದ, ಆತ್ಮೀಯತೆಯಿಂದ ಕಾಣುವ ಅಗತ್ಯವಿದೆ. ಈ ಸಂದೇಶ ಸಾವಿರಾರು ವರ್ಷಗಳಿಂದ ಪ್ರತಿಪಾದಿಸುತ್ತಲೇ ಬರಲಾಗುತ್ತಿದೆ. ತರಳಬಾಳು ಹುಣ್ಣಿಮೆ ಮೂಲಕ ಈ ಸಂದೇಶವನ್ನು ಅನೇಕ ವರ್ಷಗಳಿಂದ ನಾಡಿನಲ್ಲಿ ಸಾರಲಾಗುತ್ತಿದೆ. ಹುಣ್ಣಿಮೆ ಕಾರ್ಯಕ್ರಮದ ನಂತರವೂ ಸಮಾಜದಲ್ಲಿ ಸೌಹಾರ್ದತೆಯಿಂದ ನೆಲೆಸುವ ವಾತಾವರಣ ಬರಲಿ ಎಂದು ಆಶೀರ್ವಚನ ನೀಡಿದರು. ಬಿಜಾಪುರದ ಗದ್ದಿ ನಸೀನ್, ಸಜ್ಜಾದೆ ನಸೀನ್ ಮುಖ್ಯಸ್ಥ ಸೈಯದ್ ಷಾ ಮುರ್ತುಜಾ ಹುಸೈನಿ ಹಾಷ್ಮಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ, ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರುನಂಜೇಶ್ವರ ಶಿವಾಚಾರ್ಯ ಸ್ವಾಮೀಜಿ, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಬಸವರಾಜ ಹೊರಟ್ಟಿ, ಎಸ್.ಎಸ್. ಮಲ್ಲಿಕಾರ್ಜುನ, ಸೋಮಣ್ಣ ಬೇವಿನಮರದ, ಮಾಜಿ ಶಾಸಕರಾದ ಅಜ್ಜಂಪೀರ ಖಾದ್ರಿ, ಬಿ.ಪಿ.ಹರೀಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

