ಮೌಢ್ಯ ನಿಷೇಧ: ಭಾವನೆಗೆ ಗೌರವ
ಸಂತ ಶಿಶುನಾಳ ಷರೀಫ ಮಹಾವೇದಿಕೆ, ಶಿಗ್ಗಾಂವಿ: ಮೂಢನಂಬಿಕೆ ಹಾಗೂ ಮೌಢ್ಯ ನಿಷೇಧಿಸುವ ವಿಚಾರದ ಬಗ್ಗೆ ತೀವ್ರ ಪರ ವಿರೋಧಗಳು ವ್ಯಕ್ತವಾದವು. ಚರ್ಚೆಗೆ ಗೌರವ ನೀಡಲಾಗಿದ್ದು, ಅಲ್ಲಿ ಬಂದ ವಿಚಾರಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸುವ ಕಾರ್ಯವನ್ನು ಮಾಡಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಕೊನೆಯ ದಿನವಾದ ಶುಕ್ರವಾರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ಕಂದಾಚಾರ, ಮೌಢ್ಯಗಳನ್ನು ಪಟ್ಟಭದ್ರ ಹಿತಾಸಕ್ತಿಗಳನ್ನು ಬಿತ್ತಿ ಬೆಳೆಸಿದ್ದಾರೆ. ಅದನ್ನೇ ಧರ್ಮ ಎಂದು ಬೋಧನೆ ಮಾಡಿ ಜನರಿಗೆ ತಪ್ಪು ತಿಳಿವಳಿಕೆ ನೀಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕಾರ್ಯ ಶತಮಾನಗಳಿಂದಲೂ ನಡೆಯುತ್ತಿದೆ. ಅದು ಇಂದಿಗೂ ಕಾಣುತ್ತಿದ್ದು, ಅದನ್ನು ನಿಷೇಧಿಸುವ ಕಾರ್ಯಕ್ಕೆ ನಾವು ಮುಂದಾಗಿದ್ದೆವು. ಆದರೆ, ಅದಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಈ ಬಗ್ಗೆ ಸಂಪೂರ್ಣ ಚರ್ಚೆಯಾದ ಬಳಿಕವೇ ಅಲ್ಲಿ ಬಂದ ವಿಚಾರಗಳನ್ನು ನಾವು ಪರಿಗಣಿಸುತ್ತೇವೆ. ಬಹುಸಂಖ್ಯಾತರ ಭಾವನೆಗೆ ಧಕ್ಕೆ ತರುವ ಕಾರ್ಯ ಎಂದೂ ಮಾಡುವುದಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ ಎಂದು ಅವರು ಹೇಳಿದರು.
ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಅನೇಕ ಸಾಮಾಜಿಕ, ವೈಚಾರಿಕ ಚರ್ಚೆಗಳಾಗಿವೆ. ಇದರ ಉದ್ದೇಶ ಜನರಲ್ಲಿ ಧಾರ್ಮಿಕವಾಗಿ ಸಾಮಾಜಿಕವಾಗಿ ಜಾಗೃತಿ ತರುವುದಾಗಿದೆ. ಜನರಲ್ಲಿ ಅರಿವನ್ನು ಮೂಡಿಸುವ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಶ್ರೀಗಳದ್ದಾಗಿದೆ. ಅದಕ್ಕಾಗಿ ನಿರಂತರವಾಗಿ ತರಳಬಾಳು ಹುಣ್ಣಿಮೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದ್ದಾರೆ. ಸಾಮಾಜಿಕ ಬದಲಾವಣೆ ದೃಷ್ಟಿಯಿಂದ ಇದೊಂದು ಉತ್ತಮ ಬೆಳವಣಿಗೆ. ಅದಕ್ಕಾಗಿ ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕು ಎಂಬುದು ಹೊಸ ವಿಚಾರವಲ್ಲ. ಬಸವಾದಿ ಶರಣರು, ಮರುಳುಸಿದ್ದರು, ಸಮಾಜ ಸುಧಾರಕರು, ದಾರ್ಶನಿಕರು ಸಮಾಜದಲ್ಲಿ ಬದಲಾವಣೆಗೆ ನಿರಂತರ ಶ್ರಮಿಸುತ್ತಿದ್ದಾರೆ. ಅದಕ್ಕಾಗಿ 12ನೇ ಶತಮಾನ ಜಗತ್ತಿನಲ್ಲಿ ಮಹತ್ವದ ಘಟ್ಟ. ಬಸವಾದಿ ಶರಣರು ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ವಿರುದ್ಧ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ.
ಬಸವಣ್ಣನವರ ಸಮಕಾಲೀನರಾದ ಮರುಳು ಸಿದ್ದರೂ ಇದೇ ಕಾರ್ಯ ಮಾಡಿದ್ದಾರೆ. ಸಮಾಜದಲ್ಲಿನ ಮೂಢ ನಂಬಿಕೆ. ಕಂದಾಚಾರ, ಗೊಡ್ಡು ಸಂಪ್ರದಾಯದ ವಿರುದ್ಧ ಅವರು ಹೋರಾಟ ನಡೆಸಿದ್ದರು ಹೇಳಿದರು.
ಶೋಷಣೆಗೆ ಅವಕಾಶ ಮಾಡಿಕೊಡುವ ವಿಚಾರಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮರುಳುಸಿದ್ದರು ಮಾಡಿದ್ದರು. ಮರುಳಸಿದ್ದರ ಬಗ್ಗೆ ಮಕ್ಕಳಿಗೂ ತಿಳಿಸುವ ಕಾರ್ಯ ಆಗಬೇಕು. ಇಂದು ಮಂಡಿಸಿದ ಬಜೆಟ್ ನನ್ನ ಪ್ರಕಾರ ಸಮಾಜಮುಖಿ, ಸಾಮಾಜಿಕ ನ್ಯಾಯದ ತಳಹದಿ ಮೇಲೆ ಬಜೆಟ್ ಮಂಡಿಸಿದ್ದೇನೆ. ಸಮಾಜದ ಬೆಳವಣಿಗೆಗೆ ಪೂರಕವಾದ ಹಾಗೂ ಗ್ರಾಮೀಣರ ಬದುಕು ಎತ್ತರಿಸುವ ಕಾರ್ಯ ಮಾಡಿದ್ದೇನೆ ಎಂದು ಹೇಳಿದರು. ಸಚಿವ ಎಚ್.ಕೆ.ಪಾಟೀಲ ಮಾತನಾಡಿ, ಸ್ವಾಮೀಜಿ ಕೆಲ ವರ್ಷಗಳಿಂದ ಮದ್ಯಪಾನ ನಿಷೇಧಕ್ಕಾಗಿ ದೊಡ್ಡ ಹೋರಾಟ ಹಮ್ಮಿಕೊಂಡಿದ್ದರು. ಈಗ ಕೂಡ ಅವರು ಸಿಎಂ ಜತೆ ಮದ್ಯಪಾನ ನಿಷೇಧಿಸುವ ಕುರಿತು ಚರ್ಚಿಸಿದ್ದಾರೆ. ಆದರೆ, ಅದರ ಸಾಧಕ ಬಾಧಗಳನ್ನು ಸಿದ್ದರಾಮಯ್ಯನವರು ಶ್ರೀಗಳಿಗೆ ತಿಳಿಸಿದ್ದಾರೆ. ಹುಣ್ಣಿಮೆ ಕಾರ್ಯಕ್ರಮ ಜಾತ್ರೆಯಾಗಿರದೇ ವೈಚಾರಿಕ ಚಿಂತನ ಮಂಥನ ನಡೆದಿದೆ ಎಂದರು. ನಾಡೋಜ್ ಪಾಟೀಲ ಪುಟ್ಟಪ್ಪ ಮಾತನಾಡಿ, ಬಾಯಿಲ್ಲದವರಿಗೆ ಬಾಯಿ ಕೊಟ್ಟು ಜಾತೀಯತೆಯ ಭೇದ ಲವಲೇಶವೂ ಇಲ್ಲದಂತೆ ಸಿರಿಗೆರೆ ಮಠ ನಡೆದುಕೊಳ್ಳುತ್ತಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಚಿವರಾದ ಎಚ್. ಆಂಜನೇಯ, ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ, ನೆಹರು ಯುವ ಕೇಂದ್ರದ ಮಹಾನಿರ್ದೇಶಕ ಸಲೀಂ ಅಹ್ಮದ್, ನಾಡೋಜ ಪಾಟೀಲ ಪುಟ್ಟಪ್ಪ, ಸಾಣೇಹಳ್ಳಿ ಶಾಖಾಮಠದ ಡಾ. ಪಂಡಿತಾರಧ್ಯ ಶಿವಾಚಾರ್ಯ ಸ್ವಾಮೀಜಿ, ಮಂಜುನಾಥ ಕುನ್ನೂರ, ಬಸವರಾಜ ಶಿವಣ್ಣನವರ, ಶಂಭು ಬಳಿಗಾರ, ಸೋಮಣ್ಣ ಬೇವಿನಮರದ, ಅಜ್ಜಂಪೀರ ಖಾದ್ರಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

