ಟ್ಯಾಂಕ್ ಇದ್ದರೂ ಸಿಗದ ನೀರು
ಕನ್ನಡಪ್ರಭ ವಾರ್ತೆ, ಹಾನಗಲ್ಲ, ಫೆ. 27
ಚಿಕ್ಕಾಂಶಿ ಗ್ರಾಮದಲ್ಲಿ ಸರ್ಕಾರ ನಿರ್ಮಿಸಿದ ಕುಡಿಯುವ ನೀರು ಸರಬರಾಜು ಟ್ಯಾಂಕಿನ ನೀರು ಈಗ ಗ್ರಾಮದ ಜನತೆಗೆ ಕುಡಿಯಲು ಲಭ್ಯವಾಗದೇ ಹೋಗಿದ್ದು, ಊರು, ಕೇರಿಯಲ್ಲಿ ನೀರಿದ್ದರೂ ಮನೆಗೆ ತರಲಾಗದ ಸ್ಥಿತಿ ನಮ್ಮದು ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಗ್ರಾಮ ಪಂಚಾಯಿತಿ ನಿರ್ಮಿಸಿರುವ ಕಿರುನೀರು ಸರಬರಾಜು ಯೋಜನೆಯ ನೀರಿನ ಟ್ಯಾಂಕ್ ಕಥೆ ಇದಾಗಿದೆ. ಆದರೆ, ಈ ಟ್ಯಾಂಕ್ ಕಟ್ಟಲು ಸ್ಥಳೀಯರೊಬ್ಬರು ಜಾಗೆ ನೀಡಿದ್ದಾರೆನ್ನಲಾಗಿದೆ. ಇದೇ ಕಾರಣ ಮುಂದಿಟ್ಟು ಗ್ರಾಮಸ್ಥರು ನೀರು ಕೊಂಡೊಯ್ಯದಂತೆ ತಡೆಯೊಡ್ಡಿ ನೀರಿನ ಸಮಸ್ಯೆ ಸೃಷ್ಟಿಸಿದ ಘಟನೆ ಇದಾಗಿದೆ.
ನೀರು ತೆಗೆದುಕೊಳ್ಳಲು ಕುಟುಂಬ ನಿರ್ಬಂಧ: ಹೊಸೂರು ಗ್ರಾಮ ಪಂಚಾಯ್ತಿಯಿಂದ ಚಿಕ್ಕಾಂಶಿ ಗ್ರಾಮದ ಸುಭಾಸ ಮೂಡೇರ ಎಂಬುವವರ ಜಾಗೆಯಲ್ಲಿ ಕಿರುನೀರು ಸರಬರಾಜು ಯೋಜನೆಯ ಟ್ಯಾಂಕ್ ನಿರ್ಮಿಸಲಾಗಿದೆ. ಇದರಿಂದಾಗಿ ಆ ಕುಟುಂಬದ ಸದಸ್ಯರು ಗ್ರಾಮದ ಬೇರೆ ಯಾರಿಗೂ ನೀರು ಕೊಂಡೊಯ್ಯಲು ಅವಕಾಶ ನೀಡುತ್ತಿಲ್ಲ. ಅಲ್ಲದೇ ತಮ್ಮ ಸ್ವಂತದ ಕೆಲಸಗಳಿಗಾಗಿ ಮಾತ್ರ ನೀರು ಬಳಸುತ್ತಿರುವ ಈ ಕುಟುಂಬ, ಮನೆಯೊಂದನ್ನು ಕಟ್ಟುತ್ತಿದ್ದು, ಅದಕ್ಕೆ ಇಲ್ಲಿಂದಲೇ ನೀರು ಪಡೆಯುತ್ತಿದ್ದಾರೆ.
ಈ ಕಿರುನೀರು ಸರಬರಾಜು ಟ್ಯಾಂಕ್ ಪಕ್ಕದಲ್ಲೇ ತಮ್ಮದೊಂದು ನೀರಿನ ತೊಟ್ಟಿಯೊಂದನ್ನೂ ನಿರ್ಮಿಸಿಕೊಂಡಿದ್ದು, ಹಿಂದೊಮ್ಮೆ ಇವೆಲ್ಲವನ್ನೂ ಸೇರಿಸಿ ಸುತ್ತಲೂ ತಂತಿ ಬೇಲಿ ನಿರ್ಮಿಸಿ ಸಾರ್ವಜನಿಕರಿಗೆ ಪ್ರವೇಶ ನಿರ್ಬಧಿಸಿದ್ದರು. ಆಗ ಗ್ರಾಪಂ ಅಧಿಕಾರಿಗಳು ಬೇಲಿ ತೆರವುಗೊಳಿಸಿದಾಗ, ಸಾರ್ವಜನಿಕರಿಗೆ ನೀರು ಪಡೆಯಲು ಅನುಕೂಲವಾಗಿತ್ತು. ಈ ಕುಟುಂಬದ ಸದಸ್ಯರು ಈಗ ಮತ್ತೆ ತಕರಾರು ಒಡ್ಡುತ್ತಿರುವುದು ಗ್ರಾಮಸ್ಥರಿಗೆ ತೊಂದರೆ ತಂದಿಟ್ಟಿದೆ.
ಹೆಚ್ಚಿನ ಶುಲ್ಕ ವಸೂಲಿ: ಇದೆಲ್ಲದರ ನಡುವೆ ಗ್ರಾಮ ಪಂಚಾಯಿತಿ ವಾಟರ್ಮನ್ ಅನಧೀಕೃತವಾಗಿ ಗ್ರಾಮಸ್ಥರ ಪ್ರತಿ ಮನೆಗಳಿಂದ 35ಗಳನ್ನು ವಸೂಲಿ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ದೂರಿದ್ದಾರೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದು ಸಾರ್ವಜನಿಕ ಕುಡಿಯುವ ನೀರು ಸರಬರಾಜು ಯೋಜನೆಯಾಗಿದ್ದು, ಶುಲ್ಕ ಕಟ್ಟಲೇಬೇಕು ಎನ್ನುತ್ತಾರೆ. ಬೇರೆ ಗ್ರಾಮ ಪಂಚಾಯಿತಿಗಳಲ್ಲಿ ರು. 10 ಶುಲ್ಕವಿದ್ದರೂ. ಇಲ್ಲಿ ಮಾತ್ರ ರು. 35 ರು ವಸೂಲಿ ಮಾಡಲಾಗುತ್ತಿದೆ. ಅದಕ್ಕೆ ಯಾವುದೇ ರಸೀದಿಯನ್ನೂ ನೀಡುವುದಿಲ್ಲ. ಆದಾಗ್ಯೂ ಇತ್ತ ಶುಲ್ಕ ಕಟ್ಟುವುದೂ ತಪ್ಪುತ್ತಿಲ್ಲ. ನೀರೂ ಸಿಗುತ್ತಿಲ್ಲ. ಈ ಸಮಸ್ಯೆಗೆ ಪರಿಹಾರ ಒದಗಿಸುವರಾರು ಎಂಬುದು ಗ್ರಾಮಸ್ಥರ ಪ್ರಶ್ನೆಯಾಗಿದೆ.
ಈ ಕುರಿತು ಈ ಗ್ರಾಮದ ನಿವೃತ್ತ ಅಂಚೆ ಅಧಿಕಾರಿ ಬಿ.ಎನ್. ನೆಲವಾಗಲ ಹಾಗೂ ನಿವೃತ್ತ ಶಿಕ್ಷಕ ಜಿ.ಜಿ. ರೇವಣಕರ, ಜಗದೀಶಪ್ಪ ಪೂಜಾರ, ನಾಗಮ್ಮ ಕುರುಬರ ಮುಂತಾದವರು ಗ್ರಾಮ ಪಂಚಾಯಿತಿ ಅಧಿಕಾರಿಗಳು, ತಾಲೂಕು ಪಂಚಾಯಿತಿ ಹಾಗೂ ಹಾವೇರಿ ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗೆ ದೂರು ಸಲ್ಲಿಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

