ಹಾವೇರಿ

ಹಂದಿ ತಾಣ ನಗರದ ಬಸ್ ತಂಗುದಾಣ

Published On :

ಕನ್ನಡಪ್ರಭ ವಾರ್ತೆ, ಹಾವೇರಿ, ಜ. 1
ನಗರದ ಜನತೆಗೆ ಉಪಯೋಗವಾಗಲೆಂದು ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದ ಅಡಿಯಲ್ಲಿ ನಗರಸಭೆ ನಗರದ ವಿವಿಧೆಡೆ ನಿರ್ಮಿಸಿರುವ ಬಸ್ ಶೆಲ್ಟರ್‌ಗಳು ನಿರುಪಯುಕ್ತವಾಗಿವೆ. ಲಕ್ಷಾಂತರ ರುಪಾಯಿ ಖರ್ಚು ಮಾಡಿ ಕಟ್ಟಿದ ಈ ತಂಗುದಾಣಗಳು ಹಂದಿ, ಬೀದಿ ನಾಯಿಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ.
ಈ ಬಸ್ ತಂಗುದಾಣಗಳನ್ನು ನಿರ್ಮಿಸಿದ್ದು ಪ್ರಯಾಣಿಕರ ಅನುಕೂಲಕ್ಕೋ ಅಥವಾ ಸಿನಿಮಾ ಪೋಸ್ಟರ್ ಅಂಟಿಸಿ ಪ್ರಚಾರ ಮಾಡಲಿಕ್ಕೋ ಎಂಬುದು ಗೊತ್ತಾಗುತ್ತಿಲ್ಲ. ನಗರದ ಸಿನಿಮಾ ಮಂದಿರಗಳಲ್ಲಿ ಬಂದ ಚಲನಚಿತ್ರಗಳ ಪೋಸ್ಟರ್‌ಗಳು ಈ ತಂಗುದಾಣದ ಎಲ್ಲ ಕಡೆಗಳಲ್ಲಿ ರಾರಾಜಿಸುತ್ತಿರುತ್ತವೆ. ಕೆಲ ಬಸ್ ಶೆಲ್ಟರ್‌ಳನ್ನು ರಸ್ತೆಗಿಂತ ದೂರದಲ್ಲಿ ನಿರ್ಮಿಸಲಾಗಿದ್ದು, ಜನರ ಓಡಾಟವಿಲ್ಲದೆ ಅದರ ಸುತ್ತ ಗಿಡ-ಗಂಟಿ ಬೆಳೆದು ನಿಂತಿವೆ. ಹಂದಿ, ಬೀದಿ ನಾಯಿ ವಾಸಕ್ಕೆ ಸಿನಿಮಾ ಪ್ರಚಾರಕ್ಕೆ ಹಾಗೂ ಪೊಲೀಸರ ಬ್ಯಾರಿಕೇಡ್ ಇಡಲಷ್ಟೇ ಸೀಮಿತವಾಗಿವೆ. ಇದು ನಗರಸಭೆಯ ದೂರದೃಷ್ಟಿಗೆ ಹಿಡಿದ ಕೈಗನ್ನಡಿಯಾಗಿದೆ.
ಸ್ಥಳ ಆಯ್ಕೆಯೇ ಸರಿಯಿಲ್ಲ
2010-11ನೇ ಸಾಲಿನಲ್ಲಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಅನುದಾನದಲ್ಲಿ ನಿರ್ಮಿಸಿದ ಈ ತಂಗುದಾಣಗಳು ನಗರದ ಜನತೆಗೆ ಉಪಯೋಗವಾಗದೆ ಹಾಳಾಗುತ್ತಿವೆ. ನಗರಾದ್ಯಂತ 10 ಶೆಲ್ಟರ್‌ಗಳನ್ನು ನಿರ್ಮಿಸಿದ ನಗರಸಭೆ ಪ್ರತಿಯೊಂದಕ್ಕೂ ತಲಾ ರು. 10 ಲಕ್ಷ ವೆಚ್ಚ ಮಾಡಿದೆ. ನಿಲ್ದಾಣಗಳನ್ನು ನಿರ್ಮಿಸಿ ಮೂರು ವರ್ಷ ಕಳೆದರೂ ಜನತೆಗೆ ನಗರ ಸಂಚಾರಕ್ಕೆ ಬಸ್ಸುಗಳನ್ನೇ ಆರಂಭ ಮಾಡದೆ ಅವು ಹಾಳಾಗಲು ಪರೋಕ್ಷವಾಗಿ ಕಾರಣವಾಗಿದೆ. ಜಿಲ್ಲೆಯಾಗಿ 15 ವರ್ಷ ಕಳೆದರೂ ನಗರದ ಜನತೆಗೆ ನಗರ ಸಾರಿಗೆ ಬಸ್ಸುಗಳನ್ನು ಕಲ್ಪಿಸದಿರುವುದು ದೌರ್ಭಾಗ್ಯವೇ ಸರಿ. ತಂಗುದಾಣಗಳನ್ನು ನಿರ್ಮಿಸಿರುವ ನಗರಸಭೆ ಸೂಕ್ತ ಸ್ಥಳ ಆಯ್ಕೆ ಮಾಡುವಲ್ಲೂ ಎಡವಿದೆ. ಜನ ಸಂಚಾರವಿಲ್ಲದ ಕಡೆಗಳಲ್ಲಿ ತಂಗುದಾಣ ನಿರ್ಮಿಸಿ ಯೋಜನೆಯಡಿ ಬಂದ ಹಣವನ್ನು ಹಾಳು ಮಾಡಿದೆ ಎಂಬುದು ಜನರ ಆರೋಪ.
ಪೋಸ್ಟರ್ ಅಂಟಿಸಲು ಬಳಕೆ
ಕೆಲವು ತಂಗುದಾಣಗಳಲ್ಲಿ ಜನತೆಗೆ ಕುಳಿತುಕೊಳ್ಳಲೆಂದು ಹಾಕಲಾಗಿದ್ದ ಆಸನಗಳೇ ಮಾಯವಾಗಿವೆ. ಕೆಲವು ನಿಲ್ದಾಣಗಳಲ್ಲಿ ಜಾಹೀರಾತಿಗೆಂದು ನಿರ್ಮಿಸಿದ ಸ್ಥಳಗಳಲ್ಲಿ ನಗರಸಭೆ ನಿಯಮಗಳನ್ನು ಗಾಳಿಗೆ ತೂರಿ ಸಿನಿಮಾ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇದು ನಗರದ ಸೌಂದರ್ಯವನ್ನು ಹಾಳು ಮಾಡಿದೆ. ನಗರಸಭೆ ನಿಲ್ದಾಣಗಳನ್ನು ಸುಸ್ಥಿತಿಯಲ್ಲಿಟ್ಟು, ಜಾಹೀರಾತುಗಳನ್ನು ಹಾಕಿ, ಬರುವ ಆದಾಯದಿಂದ ಅವುಗಳ ನಿರ್ವಹಣೆ ಮಾಡಬಹುದು.
ಹಣ ವ್ಯರ್ಥ
ನಗರ ಸಂಚಾರಕ್ಕೆ ಉಪಯೋಗವಾಗಲೆಂದು ನಿಲ್ದಾಣಗಳನ್ನು ನಿರ್ಮಿಸಿದ್ದು ಉತ್ತಮ ನಿರ್ಧಾರ. ಆದರೆ ನಗರ ಸಾರಿಗೆ ಬಸ್ ಸೇವೆ ಇಲ್ಲದೆ ಕೇವಲ ತಂಗುದಾಣ ನಿರ್ಮಿಸಿ ಕೈತೊಳೆದುಕೊಂಡಿದ್ದು ಸರಿಯಲ್ಲ. ರಸ್ತೆಗಿಂತ ದೂರದಲ್ಲಿ ತಂಗುದಾಣ ನಿರ್ಮಿಸಿದ್ದರಿಂದ ಅವು ಪ್ರಯಾಣಿಕರಿಗೆ ನಿರುಪಯುಕ್ತವಾಗಿವೆ. ಸಾರ್ವಜನಿಕರ ಹಣವನ್ನು ಹಾಳು ಮಾಡದೆ ಮುಂದಾಲೋಚನೆ ಮಾಡಿ ಸ್ಥಳ ಆಯ್ಕೆ ಮಾಡಿದ್ದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು ಎಂದು ಸ್ಥಳೀಯರಾದ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಗರಸಭೆ ಈ ತಂಗುದಾಣಗಳನ್ನು ಸ್ವಚ್ಛಗೊಳಿಸಿ ಪ್ರಯಾಣಿಕರ ಅನುಕೂಲಕ್ಕೆ ಕಲ್ಪಿಸುವುದೋ ಕಾದು ನೋಡಬೇಕಿದೆ.
ಆಟೋ ದುಬಾರಿ
ನಗರದ ವಿವಿಧ ಬಡಾವಣೆಗಳಲ್ಲಿ ವಾಸಿಸುವ ಜನರಿಗೆ ಆಟೋ ರಿಕ್ಷಾ ಅನಿವಾರ್ಯವಾಗಿದೆ. ಸಾರಿಗೆ ಸಂಸ್ಥೆಯವರು ನಗರ ಸಾರಿಗೆ ಸೇವೆಯನ್ನು ಇನ್ನೂ ಆರಂಭಿಸದ ಕಾರಣ ಆಟೋಗೆ ಹಣ ತೆರುವಂತಾಗಿದೆ. ನಗರದಲ್ಲಿ ರಸ್ತೆ ಸರಿಯಾಗಿಲ್ಲದೆ ಪ್ರಯಾಣಿಕರಿಂದ ಹೆಚ್ಚಿನ ಹಣ ಕೇಳುವುದಾಗಿ ರಿಕ್ಷಾ ಚಾಲಕರು ಕಾರಣ ಹೇಳುತ್ತಾರೆ. ಏನಿದ್ದರೂ ಸಾರ್ವಜನಿಕರಿಗೇ ತೊಂದರೆ.
- ವೀರೇಶ ಮಡ್ಲೂರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.