ಹಾವೇರಿ

ಇನ್ನು ಪರಿಹಾರ ನಿರೀಕ್ಷೆ

Published On :

ಕನ್ನಡಪ್ರಭ ವಾರ್ತೆ, ಹಾವೇರಿ. ಜ. 23
ಕಳಪೆ ಬಿಟಿ ಹತ್ತಿ ಬೀಜ ಬಿತ್ತಿ ಬೆಳೆ ಬಾರದೆ ನಷ್ಟ ಅನುಭವಿಸಿದ ರೈತರು ನಾಲ್ಕು ತಿಂಗಳಿಂದ ನಡೆಸಿದ ಹೋರಾಟದ ಫಲವಾಗಿ ಅಂತೂ ಸಮೀಕ್ಷಾ ಕಾರ್ಯ ಮುಗಿದಿದೆ. ಕಳಪೆ ಬೀಜದಿಂದ ಜಿಲ್ಲೆಯಲ್ಲಿ 22,628 ಹೆಕ್ಟೇರ್ ಪ್ರದೇಶದ ಹತ್ತಿ ನಷ್ಟವಾಗಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದ್ದು, ಈ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
ಜಿಲ್ಲೆಯಲ್ಲಿ ಕಳಪೆ ಬಿಟಿ ಹತ್ತಿ ಬೀಜ ಬಿತ್ತಿದ್ದರಿಂದ ಬೆಳೆ ಬಾರದೇ ಇದ್ದಾಗ ನಡೆದ ಹೋರಾಟದ ಫಲವಾಗಿ ಸರ್ಕಾರ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಳೆದ ನವೆಂಬರ್‌ನಿಂದ ಹತ್ತಿ ಬೆಳೆ ಸಮೀಕ್ಷೆ ಕಾರ್ಯ ನಡೆದಿತ್ತು. ಈಗ ಸಮೀಕ್ಷೆ ಮುಗಿದಿದ್ದು, ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿದೆ.
22628 ಹೆಕ್ಟೇರ್‌ನಲ್ಲಿ ಹಾನಿ:
ಜಿಲ್ಲೆಯ 7 ತಾಲೂಕುಗಳ 593 ಗ್ರಾಮಗಳಲ್ಲಿ ಕಳಪೆ ಬಿಟಿ ಹತ್ತಿ ಬಿತ್ತನೆಯಾಗಿತ್ತು. 25,122 ರೈತರಿಗೆ ಸೇರಿದ 22,628 ಹೆಕ್ಟೇರ್ ಪ್ರದೇಶದಲ್ಲಿ ಕಳಪೆ ಬೀಜದಿಂದ ಹತ್ತಿ ಬೆಳೆ ಹಾನಿಯಾಗಿದೆ. ಇದರಲ್ಲಿ 21,708 ಹೆಕ್ಟೇರ್ ಪ್ರದೇಶ ಕನಕ ಬಿಟಿಗೆ ಸೇರಿದ್ದಾಗಿದೆ. ನಿಕ್ಕಿ ಪ್ಲಸ್ 1978 ಹೆಕ್ಟೇರ್, ಜಾಕ್‌ಪಾಟ್ ಹತ್ತಿ ಬೀಜ ಬಿತ್ತಿದ 704 ಹೆಕ್ಟೇರ್ ಪ್ರದೇಶಲ್ಲಿ ಬೆಳೆ ಹಾನಿಯಾಗಿದೆ. ಜಿಲ್ಲೆಯಲ್ಲಿ ಬಿಟಿ ಹತ್ತಿ ಕ್ಷೇತ್ರ 89,654 ಹೆಕ್ಟೇರ್ ಆಗಿದ್ದು, ಇದರಲ್ಲಿ 40,115 ಹೆಕ್ಟೇರ್ ಪ್ರದೇಶ ಕಳಪೆ ಬೀಜದಿಂದ ಹಾನಿಯಾಗಿದೆ ಎಂದು 31,119 ರೈತರಿಂದ ಅರ್ಜಿ ಸಲ್ಲಿಕೆಯಾಗಿತ್ತು.
ಶಿಗ್ಗಾಂವಿಯಲ್ಲಿ ಹೆಚ್ಚು ಹಾನಿ
ಜಿಲ್ಲೆಯ ಎಲ್ಲ 7 ತಾಲೂಕುಗಳಲ್ಲೂ ಕಳಪೆ ಹತ್ತಿ ಬೀಜದಿಂದ ಹಾನಿಯಾಗಿದ್ದು, ಈ ಪೈಕಿ ಶಿಗ್ಗಾಂವಿ ತಾಲೂಕಿನಲ್ಲಿ ಅತಿ ಹೆಚ್ಚು 4734 ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. ಹಾವೇರಿ ತಾಲೂಕಿನ 3778 ರೈತರ 3372 ಹೆಕ್ಟೇರ್, ಹಾನಗಲ್ಲ ತಾಲೂಕಿನ 1760 ರೈತರ 1183, ಹಿರೇಕೆರೂರಿನ 4063 ರೈತರ 3660, ಸವಣೂರು ತಾಲೂಕಿನ 3700 ರೈತರ 3257 ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಂದು ಎಕರೆ ಪ್ರದೇಶದಲ್ಲಿ 4 ಕ್ವಿಂಟಲ್‌ಗಿಂತ ಕಡಿಮೆ ಬೆಳೆ ಬಂದರೆ ಮಾತ್ರ ಅದು ಕಳಪೆ ಬೀಜದಿಂದ ಎಂದು ಸಮೀಕ್ಷೆಯಲ್ಲಿ ಪರಿಗಣಿಸಲಾಗಿದೆ.
ವಿಳಂಬವಾದ ಸಮೀಕ್ಷೆ
ಈ ಬಾರಿ ಉತ್ತಮ ಮುಂಗಾರು ಮಳೆ ಬಂದರೂ ಕಳಪೆ ಬೀಜದಿಂದ ಉತ್ತಮ ಬೆಳೆ ಬಾರದೇ ಜಿಲ್ಲೆಯ ರೈತರು ಸಂಕಷ್ಟಕ್ಕೀಡಾಗಿದ್ದರು. ಆ ಸಮಯದಲ್ಲಿ ರೈತರು, ರೈತ ಸಂಘಟನೆಗಳು, ವಿರೋಧ ಪಕ್ಷಗಳ ನೇತೃತ್ವದಲ್ಲಿ ತಿಂಗಳುಗಳ ಕಾಲ ನಡೆಸಿದ ಹೋರಾಟದ ಪ್ರತಿಫಲವಾಗಿ ಸರ್ಕಾರ ಹಾವೇರಿ ಸೇರಿದಂತೆ ರೈತರ ಹೋರಾಟ ತೀವ್ರಗೊಂಡಿತ್ತು.
ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿ ಕಳಪೆ ಬೀಜ ವಿತರಿಸಿದ ಮಹಿಕೋ ಕಂಪನಿಯಿಂದ ಪರಿಹಾರ ಕೊಡಿಸಲು ಕಳೆದ ಅ. 29ರಂದು ಬೆಂಗಳೂರನಲ್ಲಿ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಕೃಷಿ ವಿವಿ ವಿಜ್ಞಾನಿಗಳು, ಕೃಷಿ ಇಲಾಖೆ ಹಾಗೂ ಮಹಿಕೋ ಸಂಸ್ಥೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಈ ತೀರ್ಮಾನದಂತೆ ಬಿಟಿ ಹತ್ತಿ ಬೆಳೆಹಾನಿ ಕುರಿತು ಹಾನಿಗೊಳಗಾದ ರೈತರ ಜಮೀನು ಸಮೀಕ್ಷೆ ನಡೆಸಲು ಕೃಷಿ ಸಂಬಂಧಿತ ಇಲಾಖೆಗಳ ಅಧಿಕಾರಿಗಳು(ಕಂದಾಯ, ಕೃಷಿ, ಜಲಾನಯನ ಮತ್ತು ತೋಟಗಾರಿಕೆ ಇಲಾಖೆ), ಮಹಿಕೋ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಕೃಷಿ ವಿವಿಯ ವಿಜ್ಞಾನಿಗಳನ್ನೊಳಗೊಂಡ ಮೂವರು ಅಧಿಕಾರಿಗಳ ತಂಡವನ್ನು ರಚಿಸಬೇಕು. ಈ ಸಮೀಕ್ಷೆಯನ್ನು ನ. 30ರೊಳಗೆ ಮುಗಿಸಿ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೆ ಸಲ್ಲಿಸಬೇಕು ಎಂದು ಸೂಚಿಸಲಾಗಿತ್ತು. ಆದರೆ, ಜಿಲ್ಲೆಯಲ್ಲಿ ಒಂದು ತಿಂಗಳ ತಡವಾಗಿ ಸಮೀಕ್ಷೆ ಮುಗಿದಿದೆ.
ಸರ್ಕಾರಕ್ಕೆ ವರದಿ
ಈ ಕುರಿತು ಜಿಲ್ಲಾಧಿಕಾರಿ ಪಾಂಡುರಂಗ ನಾಯಕ ಅವರನ್ನು ಕೇಳಿದಾಗ, ಕೃಷಿ ಇಲಾಖೆ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಹತ್ತಿ ಬೆಳೆ ಸಮೀಕ್ಷೆ ನಡೆಸಲಾಗಿದೆ. ಹತ್ತಿ ಬೆಳೆ ಕ್ಷೇತ್ರ ಹೆಚ್ಚಿರುವುದರಿಂದ ಸಮೀಕ್ಷೆ ತುಸು ತಡವಾಗಿದೆ. ಈಗ ಸಮೀಕ್ಷೆ ಮುಗಿದಿದ್ದು, 22628 ಹೆಕ್ಟೇರ್ ಪ್ರದೇಶದಲ್ಲಿ ಕಳಪೆ ಹತ್ತಿ ಬೀಜದಿಂದ ಬೆಳೆ ನಷ್ಟವಾಗಿದೆ. ಕಳೆದ ಜ. 2ರಂದು ಸಮೀಕ್ಷಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

 ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.