ಹಾವೇರಿ

ಪೊಲೀಸರಿಗೆ ಸೋರುವ ಮನೆ!

Published On :

ಕಾನೂನು - ಸುವ್ಯವಸ್ಥೆ ಕಾಪಾಡಲು ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಸಿಪಿಐ, ಪಿಎಸ್‌ಐ, ಎಎಸ್‌ಐ, ಕಾನ್‌ಸ್ಟೇಬಲ್ ಸೇರಿದಂತೆ 47 ಸಿಬ್ಬಂದಿ ಇದ್ದಾರೆ. ಆದರೆ, ಅಗತ್ಯ ವಸತಿಗೃಹಗಳು ಲಭ್ಯವಿಲ್ಲ. 40 ವರ್ಷ ಹಳೆಯ ಕಟ್ಟಡಗಳಲ್ಲಿ 25 ವಸತಿಗೃಹಗಳಿವೆ. ಇವುಗಳ ವಿಸ್ತೀರ್ಣ ಕೇವಲ 500 ಚದರ ಅಡಿ. ಒಂದು ಕುಟುಂಬ ವಾಸಿಸಲೂ ಸಾಧ್ಯವಿಲ್ಲದಷ್ಟು ಚಿಕ್ಕದು. ಮಳೆ ಬಂದರೆ ಎಲ್ಲ ಕಡೆ ಸೋರುತ್ತದೆ. ಸಾಲದ್ದಕ್ಕೆ, ಒಳಗಡೆಯೆಲ್ಲ ವಿದ್ಯುತ್ ಸಂಪರ್ಕ ಕಿತ್ತು ಹೋಗಿದೆ.
ಮಳೆಗಾಲ ಶುರುವಾಗುವ ಮೊದಲೇ ಇಲ್ಲಿನ ಪೊಲೀಸರು ತಮ್ಮ ಮನೆಗಳ ಛಾವಣಿ ಮೇಲಿರುತ್ತಾರೆ. ಒಡೆದ ಹಂಚುಗಳ ಸಂದಿಗೆ ಪ್ಲಾಸ್ಟಿಕ್ ತುರುಕಿ, ಮಳೆ ನೀರು ಒಳಗೆ ಸೋರದಂತೆ ತಡೆಯುವ ವಿಫಲ ಯತ್ನ ಮಾಡುತ್ತಾರೆ. ಗೋಡೆಗಳ ಮೇಲೆ ಇಳಿಯುವ ನೀರು ಎಲ್ಲಿ ಮನೆ ಬಿದ್ದು ತಮ್ಮ ಕುಟುಂಬವನ್ನು ಬಲಿ ತೆಗೆದುಕೊಳ್ಳುವುದೋ ಎಂಬ ಆತಂಕ ಕಾಡುತ್ತದೆ. ಮನೆಯ ಸಾಮಾನುಗಳ ರಕ್ಷಣೆಯೂ ಕಷ್ಟಸಾಧ್ಯವಾಗುತ್ತದೆ. ರಿಪೇರಿಗೆ ಸಾವಿರಾರು ರುಪಾಯಿ ಖರ್ಚು ಮಾಡಲು ಸಾಧ್ಯವಿಲ್ಲದೆ, ಪ್ಲಾಸ್ಟಿಕ್ ಹಾಳೆ ಹಾಕಿ, ಸೋರುವುದನ್ನು ತಡೆಯಲು ಹರಸಾಹಸ ಪಡುತ್ತಾರೆ.
ಬಾಡಿಗೆ ಮನೆಯತ್ತ ಚಿತ್ತ: ಹಳೆಯ ಮನೆಗಳಾಗಿದ್ದರಿಂದ ಇಲ್ಲಿ ನೀರು ಸಂಗ್ರಹಿಸಲು ತೊಟ್ಟಿಗಳಿಲ್ಲ. ತಮ್ಮಲ್ಲಿರುವ ಡ್ರಮ್, ಪಾತ್ರೆ, ಕೊಡಗಳಲ್ಲಿ ಕನಿಷ್ಠ 2-3 ದಿನಗಳಿಗೆ ಬೇಕಾಗುವಷ್ಟು ನೀರು ಸಂಗ್ರಹಿಸಬೇಕಾಗುತ್ತದೆ. ಸೂಕ್ತ ವಸತಿ ಗೃಹಗಳಿಲ್ಲದೆ ಇಲ್ಲಿನ ಬಹುತೇಕ ಪೊಲೀಸ್ ಸಿಬ್ಬಂದಿ ಬಾಡಿಗೆ ಮನೆಗಳತ್ತ ಮುಖ ಮಾಡಿದ್ದಾರೆ. ನಾಲ್ವರಿಗಿಂತ ಹೆಚ್ಚು ಸದಸ್ಯರಿರುವ ಕುಟುಂಬಗಳಂತೂ ಈ ವಸತಿ ಗೃಹಗಳನ್ನು ಬಳಸಲು ಸಾಧ್ಯವೇ ಇಲ್ಲ. ಹೊಸದಾಗಿ ಕಟ್ಟಿರುವ ವಸತಿಗೃಹದ ಶೌಚಾಲಯಗಳಲ್ಲಿ ಸೆಪ್ಟಿಕ್ ಟ್ಯಾಂಕ್ ತುಂಬಿಕೊಂಡು ದುರ್ವಾಸನೆ ಹೊಮ್ಮುತ್ತಿದೆ.  ಹಳೆಯ ವಸತಿಗೃಹಗಳ ಸಿಬ್ಬಂದಿ ಮೂಗು ಮುಚ್ಚಿಕೊಂಡು ಬದುಕಬೇಕಾಗಿದೆ.
ಕಾಂಪೌಂಡ್ ಶಿಥಿಲ: ವಸತಿ ಗೃಹಗಳಿಗೆ ನಿರ್ಮಿಸಿದ ಕಾಂಪೌಂಡ್ ಶಿಥಿಲಗೊಂಡಿದ್ದು, ಸಮುಚ್ಚಯಕ್ಕೆ ಸೂಕ್ತ ರಕ್ಷಣೆಯೇ ಇಲ್ಲ. ಕೆಲವು ಭಾಗಗಳಲ್ಲಿ ಆವರಣ ಗೋಡೆಯೇ ಇಲ್ಲ. ವಿಷ ಜಂತುಗಳ ಕಾಟದಿಂದ ರಾತ್ರಿ ನಿರ್ಭಯವಾಗಿ ಓಡಾಡಲು ಸಾಧ್ಯವಿಲ್ಲ. ಕಳೆದ ವರ್ಷ ಮೂರು ನಾಗರ ಹಾವುಗಳು ಠಾಣೆಗೆ ಬಂದಿದ್ದನ್ನು ಮರೆಯುವಂತಿಲ್ಲ.
ಕುಡಿಯುವ ನೀರಿಲ್ಲ: ಕುಡಿಯುವ ನೀರಿಗಾಗಿ ಸಮುಚ್ಚಯದ ಆವರಣದಲ್ಲಿ ಕೊಳವೆ ಬಾವಿಯಿದೆ. ಆದರೆ, ವಿದ್ಯುತ್ ಬಿಲ್ ತುಂಬದೆ ಈಗ ಪುರಸಭೆ ಪೂರೈಸುವ ನೀರನ್ನೇ ಎರಡು ದಿನಗಳಿಗೆ ಬೇಕಾಗುವಷ್ಟು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗಿದೆ. ಆಗಾಗ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುತ್ತದೆ. ಸಮಸ್ಯೆಗಳತ್ತ ಹಿರಿಯ ಅಧಿಕಾರಿಗಳು ಗಮನ ಹರಿಸಿ, ಪೊಲೀಸರಿಗೂ ಒಂದಿಷ್ಟು ನೆಮ್ಮದಿಯ ಬದುಕು ಸಾಗಿಸಲು ಅನುಕೂಲ ಕಲ್ಪಿಸುವರೇ?

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.