ಫೆ. 2ರಂದು ಉದಾಸಿ ಹುಟ್ಟುಹಬ್ಬ
ಹಾವೇರಿ: ಸಿ.ಎಂ. ಉದಾಸಿ ಅಭಿಮಾನಿಗಳ ಬಳಗದಿಂದ ಫೆ.2ರಂದು ಬೆಳಗ್ಗೆ 11.30ಕ್ಕೆ ನಗರದ ಶಿವಶಕ್ತಿ ಪ್ಯಾಲೇಸ್ನಲ್ಲಿ ಉದಾಸಿ ಅವರ 78ನೇ ಹುಟ್ಟುಹಬ್ಬ ಆಚರಿಸಲಾಗುತ್ತಿದ್ದು, ಈ ನಿಮಿತ್ತ ಅಂದು ರಕ್ತದಾನ ಶಿಬಿರ ಹಾಗೂ ವೆಬ್ಸೈಟ್ ಬಿಡುಗಡೆ ಮಾಡಲಾಗುವುದು ಎಂದು ಮಾಜಿ ಶಾಸಕ ನೆಹರೂ ಓಲೇಕಾರ ಹಾಗೂ ಶಿವರಾಜ ಸಜ್ಜನರ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿ.ಎಂ. ಉದಾಸಿ ಅವರು ಸುದೀರ್ಘ 45 ವರ್ಷಗಳ ರಾಜಕೀಯ ಜೀವನದಲ್ಲಿ ಯಾವ ಕಪ್ಪು ಚುಕ್ಕೆ ಇಲ್ಲದೇ ಜನಸಾಮಾನ್ಯರ ಏಳ್ಗೆಗಾಗಿ ಅವಿರತ ಶ್ರಮಿಸಿದ್ದಾರೆ. ಜಿಲ್ಲೆ ಸೇರಿದಂತೆ ರಾಜ್ಯದೆಲ್ಲೆಡೆ ಉದಾಸಿ ಅವರ ಅಭಿಮಾನಿಗಳಿದ್ದು, ಇಷ್ಟು ವರ್ಷಗಳ ಕಾಲ ತಾಲೂಕು ಮಟ್ಟದಲ್ಲಿ ಹುಟ್ಟುಹಬ್ಬ ಆಚರಣೆ ನಡೆಯುತ್ತಿತ್ತು. ಈ ಬಾರಿ ಜಿಲ್ಲಾ ಕೇಂದ್ರದಲ್ಲೇ ಕಾರ್ಯಕ್ರಮ ನಡೆಸಲು ಅವರ ಅಭಿಮಾನಿಗಳು ನಿರ್ಧರಿಸಿದ್ದು, ಅಂದು ಬೆಳಗ್ಗೆ 9 ಗಂಟೆಯಿಂದ ಶಿವಶಕ್ತಿ ಪ್ಯಾಲೇಸ್ನಲ್ಲಿ ರಕ್ತದಾನ ಶಿಬಿರ ನಡೆಯಲಿದೆ. ಉದಾಸಿ ಅವರ ಸಾಧನೆ, ಕೈಗೊಂಡ ಯೋಜನೆ, ಕೊಡುಗೆಗಳನ್ನು ಒಳಗೊಂಡ ವೆಬ್ಸೈಟ್ ಅನ್ನು ಅಂದು ಲೋಕಾರ್ಪಣೆ ಮಾಡಲಾಗುವುದು.
ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು. ಉದಾಸಿಯವರು ಈ ಹಿಂದೆ ಸಚಿವರಾಗಿದ್ದಾಗ ಜಿಲ್ಲೆಯ ಅಭಿವೃದ್ಧಿಗೆ ಹಲವಾರು ಯೋಜನೆ ರೂಪಿಸಿದ್ದರು. ಆದರೆ, ಮೆಡಿಕಲ್ ಕಾಲೇಜು, ಟಾಟಾ ಮೆಟಾಲಿಕ್ ಕೈಗಾರಿಕೆ ಸ್ಥಾಪನೆಯ ಕನಸು ಈಡೇರಿಲ್ಲ. ಟಾಟಾ ಮೆಟಾಲಿಕ್ ಕಂಪನಿಗೆ ರೈತರಿಂದ ಜಮೀನು ಸ್ವಾಧೀನ ಮಾಡಿಕೊಳ್ಳಲಾಗಿದೆ. ಆದರೆ ಈಗಿನ ಸರ್ಕಾರ ಕಾರ್ಖಾನೆ ಸ್ಥಾಪನೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಭೂಮಿ ನೀಡಿದ ರೈತರು ಜಮೀನನ್ನು ಮಾರುವಂತೆಯೂ ಇಲ್ಲ. ಆದ್ದರಿಂದ ಸರ್ಕಾರ ಈ ಕಾರ್ಖಾನೆ ಸ್ಥಾಪನೆ ಬಗ್ಗೆ ತನ್ನ ನಿಲುವು ತಿಳಿಸಬೇಕು. ಜಿಲ್ಲೆಗೆ ಮೆಡಿಕಲ್ ಕಾಲೇಜನ್ನು ಜಗದೀಶ ಶೆಟ್ಟರ್ ಸಿಎಂ ಇದ್ದಾಗಲೇ ಘೋಷಣೆ ಮಾಡಲಾಗಿತ್ತು. ಆದರೆ, ಉಳಿದ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಆರಂಭವಾದರೂ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರದ ನಿರ್ಲಕ್ಷ್ಯದಿಂದ ಜಿಲ್ಲೆಯಲ್ಲಿ ಆರಂಭವಾಗಿಲ್ಲ ಎಂದು ಆರೋಪಿಸಿದರು. ಪ್ರಮುಖರಾದ ಕೆ.ಸಿ. ಕೋರಿ, ಗಿರೀಶ ತುಪ್ಪದ, ಸುರೇಶ ದೊಡ್ಮನಿ, ಲಕ್ಷ್ಮವ್ವ ಮೇಲ್ಮುರಿ, ಪದ್ಮನಾಭ ಕುಂದಾಪುರ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

