ವಾಮಾಚಾರ: ಪ್ರಕರಣ ದಾಖಲು
ಬ್ಯಾಡಗಿ: ವಾಮಾಚಾರ ನಡೆಸಿದ ವ್ಯಕ್ತಿಯೊಬ್ಬನ ಮೇಲೆ ತಾಲೂಕಿನ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗಿದೆ.
ತಾಲೂಕಿನ ತಿಮಕಾಪುರದ ಭರಮಪ್ಪ ಸಣ್ಣತಮ್ಮಪ್ಪ ದೇವಗಿರಿ ಎಂಬಾತನೇ ಹಳೇ ದ್ವೇಷವಿಟ್ಟುಕೊಂಡು ಕಳಗೊಂಡ ಗ್ರಾಮದ ರಮೇಶ ಓಲೇಕಾರ ಎಂಬುವರ ಮನೆ ಮುಂಭಾಗ ವಾಮಾಚಾರ ನಡೆಸುವ ಸಂದರ್ಭ ಸ್ಥಳೀಯರ ಸಹಕಾರದೊಂದಿಗೆ ಆತನನ್ನು ಕೂಡಿ ಹಾಕಿದ ರಮೇಶ್ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪ್ರೇಮ ಪ್ರಕರಣವೊಂದು ದ್ವೇಷಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಇದೀಗ ದೂರು ದಾಖಲಾಗಿದೆ ಎನ್ನಲಾಗುತ್ತಿದೆ.
ಘಟನೆ ಹಿನ್ನೆಲೆ: ಕಳಗೊಂಡ ಗ್ರಾಮದ ರಮೇಶ ಓಲೇಕಾರ 3 ವರ್ಷಗಳ ಹಿಂದೆ ಅದೇ ಗ್ರಾಮದ ಸೌಭಾಗ್ಯ ಮಲ್ಲಪ್ಪ ಕರಡೇರ ಎಂಬಾಕೆಯನ್ನು ಪ್ರೀತಿಸುತ್ತಿದ್ದನಲ್ಲದೇ ಯಾರಿಗೂ ತಿಳಿಯದಂತೆ ಆಕೆಯನ್ನು ಮಂಗಳೂರಿನಲ್ಲಿ ಮದುವೆಯಾಗಿದ್ದ ಎನ್ನಲಾಗಿದೆ.
ಈ ಸಂದರ್ಭ ಸೌಭಾಗ್ಯಳ ತಂದೆ ಮಲ್ಲಪ್ಪ ರಮೇಶ ಓಲೇಕಾರನ ವಿರುದ್ಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದ. ತನಿಖೆ ಕೈಗೊಂಡ ಪೊಲೀಸರು ಮಂಗಳೂರಿನಲ್ಲಿದ್ದ ಸೌಭಾಗ್ಯ ಮತ್ತು ರಮೇಶನನ್ನು ಬಂಧಿಸಿ ಕರೆತಂದರಲ್ಲದೇ, ಸೌಭಾಗ್ಯಳನ್ನು ಪಾಲಕರ ಜತೆ ಕಳುಹಿಸಿ ರಮೇಶ್ನನ್ನು ಜೈಲಿಗೆ ಕಳುಹಿಸಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ಸೌಭಾಗ್ಯಳಿಗೆ 18 ವರ್ಷ ಪೂರ್ತಿಯಾದ ಬಳಿಕ ಆಕೆಯನ್ನು ರಮೇಶನೇ ಮದುವೆಯಾಗುವಂತೆ ತೀರ್ಪು ನೀಡಿತ್ತು. ನ್ಯಾಯಾಲಯದ ತೀರ್ಪು ಧಿಕ್ಕರಿಸಿದ ಮಲ್ಲಪ್ಪ ಸೌಭಾಗ್ಯಳನ್ನು ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕು ಮಲ್ಲಾಪುರ ಗ್ರಾಮದ ಮಂಜುನಾಥ ಎಂಬ ಯುವಕನ ಜತೆ ಮದುವೆ ಮಾಡಿಕೊಟ್ಟ ಎನ್ನಲಾಗಿದೆ. ಇದರಿಂದ ಕುಪಿತಗೊಂಡು ರಮೇಶ ಕುಟುಂಬದವರು ಮಲ್ಲಪ್ಪನ ವಿರುದ್ಧ ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಜಾತಿ ನಿಂದನೆ ಪ್ರಕರಣ ದಾಖಲಿಸಿದರು. ಮಲ್ಲಪ್ಪನನ್ನು ಬಂಧಿಸಿದ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. 3 ತಿಂಗಳ ಬಳಿಕ ಜಾಮೀನು ಪಡೆದು ಬಂದ ಮಲ್ಲಪ್ಪ ಮತ್ತೆ ರಮೇಶನ ವಿರುದ್ಧ ಕರಡೇರ ಕೊಲೆ ಯತ್ನ ದೂರನ್ನು ಕಾಗಿನೆಲೆ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿದ.
ಪ್ರೇಮ ಪ್ರಕರಣ ದ್ವೇಷಕ್ಕೆ ತಿರುಗಿದ್ದು, ಈ ಬಾರಿ ಮಲ್ಲಪ್ಪ ಕರಡೇರ ತನ್ನ ಅಳಿಯ ಆರೋಪಿ ಭರಮಪ್ಪ ಸಣ್ಣತಮ್ಮಪ್ಪ ದೇವಗಿರಿ ಎಂಬುವನ ಮೂಲಕ ರಮೇಶ ಮನೆ ಮುಂಭಾಗದಲ್ಲಿ ನಿಂಬೆಹಣ್ಣು, ಅಕ್ಕಿ, ಮಂಡಕ್ಕಿ ಇನ್ನಿತರ ವಸ್ತುಗಳನ್ನು ಉಪಯೋಗಿಸಿ ವಾಮಾಚಾರ ನಡೆಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಭರಮಪ್ಪನನ್ನು ಬಂಧಿಸಿ ಇದೀಗ ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

