ಮಠಾಧೀಶರಾಗಲು ಜ್ಞಾನ ಮುಖ್ಯ
ಹಾವೇರಿ: ಮಠಾಧೀಶರಾಗಲು ಯಾವುದೇ ಶೈಕ್ಷಣಿಕ ಅರ್ಹತೆ ಮುಖ್ಯವಲ್ಲ. ತತ್ವ, ಸಿದ್ಧಾಂತ ನೆಲೆಗಟ್ಟಿನ ಮೇಲೆ ಸಮಾಜ ಮತ್ತು ಮಠವನ್ನು ಸಮತೋಲನದಿಂದ ನಿಭಾಯಿಸುವ ಜ್ಞಾನ ಹೊಂದಿದವರು ಸ್ವಾಮೀಜಿಗಳಾಗಲು ಯೋಗ್ಯರು ಎಂದು ಹುಬ್ಬಳ್ಳಿಯ ಮೂರುಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ನುಡಿದರು.
ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶನಿವಾರ ನಡೆದ ಸದಾಶಿವ ಶ್ರೀಗಳ ಜ್ಯೇಷ್ಠ ಮಾಸದ ನಿಮಿತ್ತ ಲೋಕಕಲ್ಯಾಣಾರ್ಥವಾಗಿ ಕೈಗೊಂಡಿದ್ದ ಮೌನ ಅನುಷ್ಠಾನ ಮಂಗಲ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನೆ ನೀಡಿದರು.
ಮನಸ್ಸು ಎಂಬುದು ಹರಿಯುವ ನದಿ ಇದ್ದಂತೆ, ಸದಾ ಚಂಚಲತೆಯಿಂದ ಕೂಡಿರುತ್ತದೆ. ಇಂತಹ ಮನಸ್ಸನ್ನು ಹತೋಟಿಯಲ್ಲಿ ಇಡಲು ಕೇವಲ ಅನುಷ್ಠಾನ ಕೈಗೊಳ್ಳುವ ಮೂಲಕ ಸಾಧಿಸಬಹುದಾಗಿದೆ. ಇಂಥ ಕಾರ್ಯವನ್ನು ಸದಾಶಿವ ಶ್ರೀಗಳು ಪಾಲಿಸುವ ಮೂಲಕ ಶ್ರೀಮಠದ ಪರಂಪರೆಯನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.
ಹುಕ್ಕೇರಿಮಠದ ಸದಾಶಿವ ಶ್ರೀಗಳು ಮೌನ ಅನುಷ್ಠಾನದ ಮಂಗಲ ನುಡಿಗಳನ್ನಾಡಿ, ದೇಹವು ಮಣ್ಣಲ್ಲಿ ಮಣ್ಣಾಗಿ ಹೋಗುತ್ತದೆ. ಆದರೆ, ಮನಸ್ಸಿಗೆ ಸಾವಿಲ್ಲ. ಅದು ಸದಾ ಚೈತನ್ಯದ ಚಿಲುಮೆಯಾಗಿರುತ್ತದೆ. ಇಂತಹ ಮನಸ್ಸನ್ನು ಹಿಡಿತದಲ್ಲಿಟ್ಟು ಉನ್ನತ ಕಾರ್ಯಗಳನ್ನು ಮಾಡಲು ಅನುಷ್ಠಾನ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮನಸ್ಸನ್ನು ಜಾಗೃತಗೊಳಿಸಿ ಆಧ್ಯಾತ್ಮಿಕ ಶಕ್ತಿಯನ್ನು ಸಾಧಿಸಲು ಅನುಷ್ಠಾನದಂತಹ ಕಾರ್ಯಗಳು ಸಹಕಾರಿಯಾಗುತ್ತವೆ. ದೇಹ ಮುಪ್ಪಾಗಬಹುದು, ಮನಸ್ಸಿಗೆ ಮುಪ್ಪು ಎಂಬುದಿಲ್ಲ. ಆದ್ದರಿಂದ ಇಂತಹ ಮನಸ್ಸನ್ನು ಉತ್ತಮ ಕಾರ್ಯಗಳಿಗೆ ಬಳಸಿ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡಸಲು ನಾವೆಲ್ಲರೂ ಮುಂದಾಗಬೇಕು ಎಂದರು.
ಸಂಸದ ಶಿವಕುಮಾರ ಉದಾಸಿ ಮಾತನಾಡಿದರು. ಪರಿಸರವಾದಿ ಡಾ. ಮಾಧುರಿ ದೇವಧರ, ಗದಗ ಲೋಕೋಪಯೋಗಿ ಇಲಾಖೆಯ ಸಿ.ಆರ್. ಬಳ್ಳಾರಿ, ನಿವೃತ್ತ ಶಿಕ್ಷಕ ಎ.ಪಿ. ದುಮ್ಮಾಳ ಅವರನ್ನು ಶ್ರೀಗಳು ಸನ್ಮಾಸಿದರು. ಗುರುಸಿದ್ಧರಾಜಯೋಗೀಂದ್ರ ಶ್ರೀ, ಸದಾಶಿವ ಶ್ರೀಗಳು ಬಡ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕವನ್ನು ವಿತರಿಸಿದರು. ಸವಣೂರಿನ ಅಡವಿ ಸ್ವಾಮಿಮಠದ ಕುಮಾರಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಅಕ್ಕಿಆಲೂರಿನ ವಿರಕ್ತಮಠದ ಶಿವಬಸವ ಸ್ವಾಮೀಜಿ, ಗದಿಗೇಶ್ವರ ಸ್ವಾಮೀಜಿ, ಶಾಸಕ ರುದ್ರಪ್ಪ ಲಮಾಣಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಶಿವಲಿಂಗೇಶ್ವರ ವಿದ್ಯಾಪೀಠದ ಚೇರಮನ್ ಪಿ.ಡಿ. ಶಿರೂರ, ಬಿ. ಬಸವರಾಜ, ವೀರಣ್ಣ ಅಂಗಡಿ, ಸಿ.ಎಸ್. ಮರಳಿಹಳ್ಳಿ, ಶಿವಯೋಗಿ ವಾಲೀಶೆಟ್ಟರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

