ಸುದ್ದಿ ಸಂಕ್ಷೇಪ
ಇಂದು ಸಮುದಾಯ ಭವನ ಉದ್ಘಾಟನೆ
ಹಿರೇಕೆರೂರು: ಪಟ್ಟಣದ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ ವತಿಯಿಂದ ನೂತನವಾಗಿ ನಿರ್ಮಿಸಿದ ಸಹಕಾರಿ ರತ್ನ ಬಿ.ಜಿ. ಬಣಕಾರ ಸಹಕಾರಿ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಮಾ. 4ರಂದು ಬೆಳಗ್ಗೆ 11.30 ಪಿಕಾರ್ಡ್ ಬ್ಯಾಂಕ್ನ ನೂತನ ಸಭಾಭವನದಲ್ಲಿ ನೆರವೇರಲಿದೆ. ರಟ್ಟಿಹಳ್ಳಿ ಕಬ್ಬಿಣ ಕಂಥಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು.
ಬತ್ತದ ಹುಲ್ಲಿನ ಟ್ರ್ಯಾಕ್ಟರ್ಗೆ ಬೆಂಕಿ: ಪ್ರಕರಣ ದಾಖಲು
ಶಿಗ್ಗಾಂವಿ: ಬತ್ತದ ಹುಲ್ಲಿನ ಟ್ರ್ಯಾಕ್ಟರ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಬಂಕಾಪುರದಲ್ಲಿ ಜರುಗಿದೆ. ಬಂಕಾಪುರ ಪಟ್ಟಣದ ಅಂಚೆ ಕಚೇರಿ ಎದುರಿಗೆ ಚನ್ನಬಸಪ್ಪ ಶಿವಪ್ಪ ಕರಿದ್ಯಾಮನವರ ಎಂಬಾತರಿಗೆ ಸೇರಿದ ಟ್ರ್ಯಾಕ್ಟರ್ ಪೋಸ್ಟ್ ಆಫೀಸ್ ಹತ್ತಿರ ವಿದ್ಯುತ್ ತಂತಿಗಳು ಕೆಳಗೆ ಜೋತು ಬಿದ್ದ ಕಾರಣ ಹುಲ್ಲಿಗೆ ಬೆಂಕಿ ಬಿದ್ದಿದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಶಿಗ್ಗಾಂವಿಯ ಅಗ್ನಿಶಾಮಕ ದಳದವರು ಆಗಮಿಸಿ ಸಾರ್ವಜನಿಕರ ಸಹಕಾರದೊಂದಿಗೆ ಟ್ಯಾಕ್ಟರ್ ಬೆಂಕಿಗೆ ಆಹುತಿಯಾಗುವುದನ್ನು ತಡೆದರು. ಹುಲ್ಲು ಸಂಪೂರ್ಣ ಭಸ್ಮವಾಗಿ ಸುಮಾರು ಹಾನಿ ಸಂಭವಿಸಿದೆ ಎನ್ನಲಾಗಿದೆ.
ವಿಷ ಸೇವಿಸಿ ಆತ್ಮಹತ್ಯೆ
ಶಿಗ್ಗಾಂವಿ: ವ್ಯಕ್ತಿಯೊಬ್ಬ ತಾಲೂಕಿನ ಗುಡ್ಡದ ಚನ್ನಾಪುರ ಬಸ್ ತಂಗುದಾಣದ ಹಿಂದುಗಡೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ಜಗದೀಶ ಬೀರಪ್ಪ ಕತ್ತಿ (32) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದು ಈತ ಕೊಟ್ಟಿಗೇರಿ ನಿವಾಸಿಯಾಗಿದ್ದಾನೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಪ್ರಕರಣವು ಬಂಕಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿ ತನಿಖೆ ಕೈಗೊಂಡಿದ್ದಾರೆ.
ಕೆಚವಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಬಣಕಾರ ಭೂಮಿಪೂಜೆ
ಹಿರೇಕೆರೂರು: ಮನುಷ್ಯನಿಗೆ ಮೂಲಸೌಲಭ್ಯಗಳಲ್ಲಿ ಸುಗಮ ಸಂಚಾರಕ್ಕೆ ಉತ್ತಮವಾದ ರಸ್ತೆಗಳು ಪೂರಕವಾಗಿದ್ದು, ಇದೀಗ ಸರ್ಕಾರ ರಸ್ತೆಗಳ ದುರಸ್ತಿ ಸೇರಿದಂತೆ ಗುಣಮಟ್ಟದ ರಸ್ತೆ ನಿರ್ಮಾಣಕ್ಕಾಗಿ ಹೆಚ್ಚು ಅನುದಾ ನೀಡುತ್ತಿದೆ. ಗುಣಮಟ್ಟದಿಂದ ರಸ್ತೆಗಳನ್ನು ನಿರ್ಮಿಸಿ ಜನರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಲ್ಲಿ ಅಧಿಕಾರಿಗಳು ಹೆಚ್ಚು ಗಮನ ಹರಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.
ಅವರು ತಾಲೂಕಿನ ಕಚವಿ ಗ್ರಾಮದಲ್ಲಿ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ವತಿಯಿಂದ ಮಂಜೂರಾದ 2013-14ನೇ ಸಾಲಿನ ಜಿಲ್ಲಾ ಮುಖ್ಯ ರಸ್ತೆ ಸುಧಾರಣೆ ಯೋಜನೆಯಡಿ 100 ಲಕ್ಷ ವೆಚ್ಚದಲ್ಲಿ ಹಿರೇಕೆರೂರು ತಾಲೂಕಿನ ಬೀರೂರ-ಸಮ್ಮಸಗಿ ರಾಜ್ಯ ಹೆದ್ದಾರಿ ನಂ.76ರಿಂದ ಯಮ್ಮಿಗನೂರಿಗೆ ಕೂಡು ರಸ್ತೆ ಕಾಮಗಾರಿ ನೆರವೇರಿಸಿ ಮಾತನಾಡಿದರು.
ಜಿಪಂ ಸದಸ್ಯೆ ಪಾರ್ವತಿ ಬೋಗಾವಿ, ತಾಪಂ ಉಪಾಧ್ಯಕ್ಷೆ ಅನ್ನಪೂರ್ಣಾ ಗಾಳಿ, ಗ್ರಾಪಂ ಅಧ್ಯಕ್ಷ ಚಂದ್ರಗೌಡ ಹಳ್ಳೂರ, ಶಶಿಧರ ಪ್ಯಾಟೇರ, ದಿನೇಶ ಆಲದಕಟ್ಟಿ, ಸವಿತಾ ಬಣಕಾರ, ವೆಂಕಪ್ಪ ಬಣಕಾರ, ಮಲ್ಲೇಶಪ್ಪ ಪ್ಯಾಟಿ, ಕರಿಬಸಪ್ಪ ಬಾರ್ಕಿ, ಲಿಂಗನಗೌಡ ನಿಂಗನಗೌಡ್ರ, ಮಹೇಶಪ್ಪ ಬ್ಯಾಗಾದಿ, ಎಂ.ಬಿ. ತುರುಮರಿ, ಬಸಲಿಂಗಪ್ಪಗೌಡ ತೋಟದ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

