ಅತಿಕ್ರಮಣ: ಗ್ರಾಪಂಗೆ ಬೀಗ
ಬ್ಯಾಡಗಿ: ಗ್ರಾಮದಲ್ಲಿ ಅನಧಿಕೃತವಾಗಿ ಅತಿಕ್ರಮಿಸಿರುವ ಗ್ರಾಮ ಪಂಚಾಯತ್ ಆಸ್ತಿಗಳನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಭಿವೃದ್ಧಿ ಅಧಿಕಾರಿ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಗ್ರಾಮಘಟಕದ ಕಾರ್ಯಕರ್ತರು ಗ್ರಾಮಸ್ಥರೊಂದಿಗೆ ಪಂಚಾಯತ್ ಕಾರ್ಯಾಲಯಕ್ಕೆ ಬೀಗ ಜಡಿದು ಪ್ರತಿಭಟಿಸಿದ ಘಟನೆ ತಾಲೂಕಿನ ಸೂಡಂಬಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಸ್ವಾತಂತ್ರ್ಯಯೋಧರ ಭವನಕ್ಕೆ ನಿವೇಶನ ಒದಗಿಸುವಲ್ಲಿ ವಿಫಲವಾಗಿರುವ ಗ್ರಾ.ಪಂ. ಕಾರ್ಯಾಲಯದ ಕಾರ್ಯವೈಖರಿಯೇ ಇಂದಿನ ಪ್ರತಿಭಟನೆಗೆ ಕಾರಣವೆನ್ನಲಾಗುತ್ತಿದೆ. ಬೆಳಗ್ಗೆಯಿಂದಲೇ ನೂರಾರು ಕಾರ್ಯಕರ್ತರು ಹಾಗೂ ಸಾರ್ವಜನಿಕರು, ಕಾರ್ಯಾಲಯದೆದುರು ಶಾಮಿಯಾನ ಹಾಕಿ ಗಾಂಧಿ ಫೋಟೋ ಇಟ್ಟು ಪ್ರತಿಭಟನೆ ಪ್ರಾರಂಭಿಸಿದರು. ಇದಕ್ಕೂ ಪಿಡಿಓ ಜಗ್ಗದ್ದನ್ನು ಕಂಡ ಗ್ರಾಮಸ್ಥರು ಕಾರ್ಯಾಲಯಕ್ಕೆ ಬೀಗ ಜಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಲ್ಲನಗೌಡ ಹಿರೇಗೌಡ್ರ, ಗ್ರಾಮದಲ್ಲಿ 20 ಜನ ಸ್ವಾತಂತ್ರ್ಯಯೋಧರಿದ್ದಾರೆ. ಅವರಿಗೆ ಗೌರವ ಸೂಚಕವಾಗಿ ಸ್ವಾತಂತ್ರ್ಯಯೋಧರ ಭವನ ನಿರ್ಮಿಸಲು ಮಂದಾಗಿದ್ದು, ನಿವೇಶನ ಒದಗಿಸಿದಲ್ಲಿ ಸ್ಥಳೀಯ ಶಾಸಕರು ತಮ್ಮ ಅನುದಾನದಲ್ಲಿ ರು. 10 ಲಕ್ಷಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಗಾಂವಠಾಣಾ ವ್ಯಾಪ್ತಿಯಲ್ಲಿ ನಿವೇಶನ ಒದಗಿಸುವಂತೆ ಕಳೆದ 3 ತಿಂಗಳಿನಿಂದ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಯೋಧರಿಗೆ ಅವಮಾನ
ಶಿವು ದೊಡ್ಡಗೌಡ್ರ ಮಾತನಾಡಿ, ಗ್ರಾಮದಲ್ಲಿ ಈಗಾಗಲೇ ಬಹಳಷ್ಟು ಜನರು ಗ್ರಾ.ಪಂ. ಆಸ್ತಿಗಳನ್ನು ಅನಧಿಕೃತವಾಗಿ ಅತಿಕ್ರಮಿಸಿದ್ದಾರೆ. ಹೀಗಿದ್ದರೂ ಪಿಡಿಓ ಪಿ.ಎಚ್. ಅಲ್ಲೂರ ಮಾತ್ರ ಕಂಡು ಕಂಡರಿಯದಂತೆ ವರ್ತಿಸುತ್ತಿದ್ದು ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ. ಜೀವತೆತ್ತು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಸ್ವಾತಂತ್ರ್ಯಯೋಧರಿಗೆ ನೆಲೆ ಇಲ್ಲದಂತೆ ಮಾಡುವ ಮೂಲಕ ಅವಮಾನ ಮಾಡಿದ ಪಿಡಿಓನನ್ನು ಕೂಡಲೇ ಅಮಾನತು ಮಾಡುವಂತೆ ಆಗ್ರಹಿಸಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಷಣ್ಮುಕಪ್ಪ ಮೆಣಿಸಿನಹಾಳ ಮಾತನಾಡಿ, ಗ್ರಾ.ಪಂ. ಮಾಡುತ್ತಿರುವ ಯಾವುದೇ ಕೆಲಸಗಳು ಗ್ರಾಮಸ್ಥರಿಗೆ ತಿಳಿಯುತ್ತಿಲ್ಲ. ಗ್ರಾಮಸಭೆ ನಡಾವಳಿ, ಆಶ್ರಯ ವಿತರಿಸಿದ ಮಾಹಿತಿ, ಗ್ರಾಮದಲ್ಲಿರುವ ಆಸ್ತಿಗಳೆಷ್ಟು, ಪಂಚಾಯಿತಿ ಆಸ್ತಿಗಳೆಷ್ಟು ಈ ಕುರಿತಾದ ಯಾವುದೇ ಮಾಹಿತಿಯನ್ನು ಪಿಡಿಓ ಸಾರ್ವಜನಿಕರಿಗೆ ಒದಗಿಸುತ್ತಿಲ್ಲ, ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದರು.
ಎಂ.ಬಿ. ಪಾಟೀಲ ಮಾತನಾಡಿ, ಆಶ್ರಯ ನಿವೇಶನಗಳಲ್ಲಿ ಅತಿಕ್ರಮಿಸಿಕೊಂಡಿರುವವರ ಪಟ್ಟಿಯನ್ನು ನೀಡುವಂತೆ ಆಗ್ರಹಿಸಿದರು.
ತಾಲೂಕು ಘಟಕ ಬೆಂಬಲ
ರೈತ ಸಂಘದ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನೆ ಸುದ್ದಿ ತಿಳಿದು, ಗ್ರಾಮಕ್ಕೆ ತೆರಳಿದ ಮುಖಂಡರಾದ ಗಂಗಣ್ಣ ಎಲಿ ಹಾಗೂ ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ಇನ್ನಿತರರು ಪಾಲ್ಗೊಂಡರು.
ತಹಸೀಲ್ದಾರ್ ಮಧ್ಯಸ್ಥಿಕೆ
ಪ್ರತಿಭಟನೆ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಆಗಮಿಸಿದ ತಹಸೀಲ್ದಾರ್ ಶಿವಶಂಕರ ನಾಯಕ್ ಹಾಗೂ ಟಿಈಓ ಎಸ್.ಆರ್. ಪಾಟೀಲ ಆಕ್ರೋಶಭರಿತ ಗ್ರಾಮಸ್ಥರನ್ನು ಸಮಾಧಾನಪಡಿಸಲು ಮುಂದಾದರು. ಬರುವ ಒಂದು ತಿಂಗಳಲ್ಲಿ ಗ್ರಾಮದಲ್ಲಿ ಅತಿಕ್ರಮಿಸಿರುವ ಗಾಂವಠಾಣಾದ ಎಲ್ಲ ಆಸ್ತಿಗಳನ್ನು ತೆರವುಗೊಳಿಸುವುದಾಗಿ ತಿಳಿಸಿದರಲ್ಲದೇ ಸ್ವಾತಂತ್ರ್ಯಯೋಧರ ಭವನಕ್ಕೆ ಸೂಕ್ತ ನಿವೇಶನ ಒದಗಿಸುವ ಭರವಸೆ ನೀಡಿದರು. ಭರವಸೆ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ತೆರವುಗೊಳಿಸಿದರು.
ಈ ಸಂದರ್ಭದಲ್ಲಿ ರವಿ ಕನಗುತ್ತಿ ನಿಜಲಿಂಗಪ್ಪ ನೆಲ್ಲಿಕೊಪ್ಪದ, ಮಂಜಪ್ಪ ಬಡಿಗೇರ, ಪ್ರವೀಣ ಇಲಚಿ, ಪ್ರವೀಣ ಕರಡೇರ, ಶಿವಬಸಪ್ಪ ಕರಡೇರ, ವಿಶ್ವನಾಥ ದೊಡ್ಮನಿ, ಸಿದ್ದಪ್ಪ ತಿಮ್ಮಾಪುರ, ರವಿ ಪಾಟೀಲ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

