ಹಾವೇರಿ

ಹಣಾಹಣಿಗೆ ಸಜ್ಜಾದ ವೇದಿಕೆ

Published On :

ಹಾವೇರಿ: ಹಾವೇರಿ ಲೋಕಸಭಾ ಕ್ಷೇತ್ರದ ಚುನಾವಣಾ ಕಣ ಸಜ್ಜಾಗಿದೆ. ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆಯ ದಿನವಾದ ಶನಿವಾರ 6 ಅಭ್ಯರ್ಥಿಗಳು ಉಮೇದುವಾರಿಕೆ ವಾಪಸ್ ಪಡೆದಿದ್ದು, 19 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಇದರಿಂದ ಚುನಾವಣಾ ಕಣದ ಸ್ಪಷ್ಟ ಚಿತ್ರಣ ಲಭ್ಯವಾಗಿದ್ದು, ಅಭ್ಯರ್ಥಿಗಳ ಹಣಾಹಣಿಗೆ ಇನ್ನು ಕ್ಷೇತ್ರ ಸಾಕ್ಷಿಯಾಗಲಿದೆ.
ಕ್ಷೇತ್ರ ಮರುವಿಂಗಡಣೆ ಬಳಿಕ 2ನೇ ಚುನಾವಣೆ ಎದುರಿಸುತ್ತಿರುವ ಹಾವೇರಿ ಕ್ಷೇತ್ರದಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಕ್ಷೇತ್ರದಿಂದ ಸ್ಪರ್ಧಿಸಲು 26 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಆ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿತ್ತು. ನಾಮಪತ್ರ ಹಿಂದಕ್ಕೆ ಕೊನೆಯ ದಿನವಾದ ಶನಿವಾರ 6 ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ ಸರಿಯಲು ನಿರ್ಧರಿಸಿದ್ದರಿಂದ ಅಂತಿಮವಾಗಿ 19 ಅಭ್ಯರ್ಥಿಗಳು ಉಳಿದಿದ್ದಾರೆ. ಕಳೆದ 15 ಲೋಕಸಭಾ ಚುನಾವಣೆಯಲ್ಲಿ ಇಷ್ಟೊಂದು ಅಭ್ಯರ್ಥಿಗಳು ಸ್ಪರ್ಧಿಸುತ್ತಿರುವುದು ಇದು 2ನೇ ಬಾರಿಯಾಗಿದೆ.
91ರಲ್ಲಿ 28 ಜನ ಸ್ಪರ್ಧಿಸಿದ್ದರು: ಹಿಂದಿನ ಧಾರವಾಡ ಹಾಗೂ ಇಂದಿನ ಹಾವೇರಿ ಲೋಕಸಭಾ ಕ್ಷೇತ್ರ ಇದುವರೆಗೆ 15 ಸಾರ್ವತ್ರಿಕ ಲೋಕಸಭಾ ಚುನಾವಣೆ ಎದುರಿಸಿದೆ. ಈ ಪೈಕಿ 1991ರಲ್ಲಿ ಅತಿಹೆಚ್ಚು ಅಂದರೆ 28 ಅಭ್ಯರ್ಥಿಗಳು ಸ್ಪರ್ಧಿಸಿ ದಾಖಲೆ ನಿರ್ಮಿಸಿದ್ದರು. 5 ಜನರು ವಿವಿಧ ಪಕ್ಷಗಳಿಂದ ಹಾಗೂ ಉಳಿದ 23 ಜನರು ಪಕ್ಷೇತರರಾಗಿ ಸ್ಪರ್ಧಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ 19 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಇದನ್ನು ಬಿಟ್ಟರೆ 1996ರಲ್ಲಿ 16 ಜನ, 1984ರಲ್ಲಿ 15 ಹಾಗೂ ಕಳೆದ 2009ರ ಚುನಾವಣೆಯಲ್ಲಿ 12 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇವಿಷ್ಟು ಚುನಾವಣೆ ಹೊರತುಪಡಿಸಿದರೆ ಉಳಿದ ಎಲ್ಲಾ ಚುನಾವಣೆಗಳಲ್ಲಿ ಗರಿಷ್ಠ 6ರಿಂದ 7 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 1952ರಿಂದ ಸತತ ಮೂರು ಚುನಾವಣೆಗಳಲ್ಲಿ ಕೇವಲ ಇಬ್ಬರು ಅಭ್ಯರ್ಥಿಗಳು ಸ್ಪರ್ಧಿಸಿದ್ದು ವಿಶೇಷ. ನಂತರ 1967ರಿಂದ 1977ರ ವರೆಗಿನ ಸತತ ಮೂರು ಚುನಾವಣೆಗಳಲ್ಲಿ ಹಾಗೂ 1999ರಲ್ಲಿ ಕೇವಲ ಮೂವರು ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆದಿತ್ತು.
ಪ್ರಚಾರದ ಅಬ್ಬರ ಶುರು: ಈಗಾಗಲೇ ಕ್ಷೇತ್ರದಲ್ಲಿ ವಿವಿಧ ಪ್ರಮುಖ ಪಕ್ಷಗಳ ಅಭ್ಯರ್ಥಿ ಪರವಾಗಿ ಪ್ರಚಾರದ ಅಬ್ಬರ ಚುರುಕುಗೊಂಡಿದೆ. ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಕ್ಷೇತ್ರಾದ್ಯಂತ ಒಂದು ಸುತ್ತಿನ ಮತಯಾಚನೆ ಕಾರ್ಯ ಮುಗಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ಅವರೂ ಎಲ್ಲೆಡೆ ಪ್ರಚಾರ ಕೈಗೊಂಡಿದ್ದಾರೆ. ಅವರ ಪರವಾಗಿ ಶಾಸಕರು, ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದಾರೆ. ಅದೇ ರೀತಿ ಜೆಡಿಎಸ್‌ನ ರವಿ ಮೆಣಸಿನಕಾಯಿ ಅವರೂ ಗದಗ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ಮೂವರು ಅಭ್ಯರ್ಥಿಗಳನ್ನು ಹೊರತುಪಡಿಸಿದರೆ ಪಕ್ಷೇತರರಿಂದ ಇನ್ನು ಪ್ರಚಾರ ಆಗಬೇಕಿದೆ.
ಎಲ್ಲೆಡೆ ಆಯೋಗದ ಕಣ್ಣು: ಈ ಬಾರಿ ಚುನಾವಣಾ ಆಯೋಗ ಎಲ್ಲ ಪಕ್ಷಗಳು ಹಾಗೂ ಅಭ್ಯರ್ಥಿಗಳ ಹಿಂದೆ ಬಿದ್ದಿದೆ. ಎಲ್ಲಿಗೆ ಪ್ರಚಾರಕ್ಕೆ ಹೋದರೂ ಅವರ ಹಿಂದೆ ಚುನಾವಣಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ 15ಕ್ಕೂ ಹೆಚ್ಚು ಸಿಬ್ಬಂದಿ ವೀಡಿಯೋಗ್ರಾಫಿಯೊಂದಿಗೆ ಹೋಗುತ್ತಿದ್ದಾರೆ. ಯಾವ ಅಭ್ಯರ್ಥಿಯೂ ಆಯೋಗದ ಹದ್ದಿನಕಣ್ಣನ್ನು ತಪ್ಪಿಸಿ ಹೋಗದಂತಾಗಿದೆ. ಅಲ್ಲದೆ, ಆಮಿಷ ಒಡ್ಡುವುದು, ಜಾತಿ ಹಾಗೂ ಕೋಮು ಭಾವನೆ ಕೆರಳಿಸುವಂಥ ಭಾಷಣ ಮಾಡದಂತೆ ತಡೆ ಒಡ್ಡುತ್ತಿದ್ದಾರೆ. ಅಭ್ಯರ್ಥಿಗಳ ಚುನಾವಣಾ ವೆಚ್ಚದ ಮೇಲೂ ಆಯೋಗ ಕಣ್ಣಿಟ್ಟಿದೆ. ಅಭ್ಯರ್ಥಿಗಳಿಗೆ ಪ್ರಚಾರ ಕಾರ್ಯ ನಡೆಸಲು ಇನ್ನು 17 ದಿನಗಳ ಕಾಲಾವಕಾಶವಿದ್ದು, ಅಷ್ಟು ದಿನಗಳಲ್ಲಿ ಮತದಾರರನ್ನು ತಲುಪಲು ಕಸರತ್ತು ನಡೆಸಬೇಕಿದೆ.


-ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.