ಹಾವೇರಿ

ಸೌಲಭ್ಯಕ್ಕಾಗಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ರಾಣಿಬೆನ್ನೂರು, ಮೇ 19
ಮೂಲ ಸೌಲಭ್ಯಗಳಿಂದ ವಂಚಿತಗೊಂಡಿರುವ ಇಲ್ಲಿನ ಅಡವಿ ಆಂಜನೇಯ ನಗರದ ನಿವಾಸಿಗಳು ಸೌಲಭ್ಯಗಳಿಗಾಗಿ ಆಗ್ರಹಿಸಿ ಸೋಮವಾರ ನಗರಸಭೆಯ ಅಧ್ಯಕ್ಷ, ಸದಸ್ಯರ ಹಾಗೂ ನೌಕರರ ವಿರುದ್ಧ ಪ್ರತಿಭಟನೆ ನಡೆಸಿದರು.
ಅಡವಿ ಆಂಜನೇಯ ಬಡಾವಣೆಯ ಶಾಲೆಯ ಸಮಿಪದ ಬೈಲು ಜಾಗೆಯಲ್ಲಿ ಸೇರಿದ್ದ ನೂರಾರು ಜನ ಮಹಿಳೆಯರು-ಪುರುಷರು ಮೂಲ ಸೌಲಭ್ಯಗಳಿಗಾಗಿ ಆಗ್ರಹಿಸಿ ನಗರಸಭೆಗೆ ಬಂದು ಮುತ್ತಿಗೆ ಹಾಕಲು ನಿರ್ಧರಿಸಿದ್ದ ಸುದ್ದಿ ತಿಳಿದು ನಗರಸಭೆಯ ಪ್ರಭಾರಿ ಅಧ್ಯಕ್ಷ ಶಿವಣ್ಣ ಮಣೇಗಾರ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪುಟ್ಟಪ್ಪ ಮರಿಯಮ್ಮನವರ, ಸದಸ್ಯರಾದ ಅಯೋಬಖಾನ ಐರಣಿ, ಪ್ರಕಾಶ ಜೈನ್ ನಗರಸಭೆಯ ನೌಕರರೊಂದಿಗೆ ಸ್ಥಳಕ್ಕಾಗಮಿಸಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರಿಂದ ಪ್ರತಿಭಟನಾಕಾರರು ಪ್ರತಿಭಟನೆಯಿಂದ ಹಿಂದಕ್ಕೆ ಸರಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಮುಖಂಡ ನಂದೀಶ ಕೋರಿಶೆಟ್ಟರ ಮಾತನಾಡಿ, ನಗರದಿಂದ ಸುಮಾರು 2 ಕಿ.ಮೀ. ಅಂತರದಲ್ಲಿರುವ ಅಡವಿ ಆಂಜನೆಯ ನಗರವು ಮೂಲ ಸೌಲಭ್ಯಗಳಿಂದ ವಂಚಿತಗೊಂಡಿದ್ದು, ಮೂಲ ಸೌಲಭ್ಯಗಳಾದ ಸಾರ್ವಜನಿಕ ಮಹಿಳಾ ಮತ್ತು ಪುರುಷ ಶೌಚಾಲಯ ನಿರ್ಮಿಸಬೇಕು. ಕುಡಿಯಲು ನಗರದ ಜನರಿಗೆ ಪೂರೈಸಿದಂತೆ ಅಡವಿ ಆಂಜನೇಯ ನಗರದ ಜನರಿಗೊ ನದಿಯ ನೀರನ್ನು ಪೂರೈಸಬೇಕು, ನಗರ ಆಶ್ರಯ ಸಮಿತಿ ಹಾಗೂ ರಾಜ್ಯ ಆಶ್ರಯ ಸಮಿತಿಯ ಹೆಸರಿನಲ್ಲಿ ನಿವೇಶನ ನೀಡಿ ಮನೆ ಕಟ್ಟಿಕೊಳ್ಳಲು ಪರವಾನಗಿ ನೀಡುವುದಾಗಿ ಪ್ರತಿ ಫಲಾನುಭವಿಗಳಿಂದ ರು. 30,000 ಗಳಂತೆ ಸುಮಾರು 150 ಫಲಾನುಭವಿಗಳಿಂದ ಹಣ ತುಂಬಿಸಿಕೊಂಡಿದ್ದು ಹಣ ತುಂಬಿ 4 ವರ್ಷಗತಿಸಿದರೂ ಅವರಿಗೆ ನಿವೇಶನವನ್ನಾಗಲಿ ಮನೆ ನಿರ್ಮಾಣಕ್ಕೆ ಆದೇಶವನ್ನಾಗಲಿ ನೀಡಿಲ್ಲ ಎಂದು ಆರೋಪಿಸಿ, ಶೀಘ್ರದಲ್ಲಿ ಈ ಎಲ್ಲ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ನಿರ್ಮಾಣಗೊಂಡಿರುವ ಆಶ್ರಯ ಮನೆಯಲ್ಲಿ ಹಲವಾರು ಫಲಾನುಭವಿಗಳು ವಾಸವಾಗಿದ್ದು, ನಗರಸಭೆಯ ಉತಾರಗಳಲ್ಲಿ ಮಾಲೀಕರ ಕಾಲಂನಲ್ಲಿ ರಾಜ್ಯಪಾಲರ ಹೆಸರನ್ನು ತೆಗೆದು ಮನೆಯಲ್ಲಿ ವಾಸವಾಗಿರುವ ಫಲಾನುಭವಿಗಳ ಹೆಸರನ್ನು ಸೇರಿಸಬೇಕು. ಸಂಪೂರ್ಣ ಹಾಳಾಗಿರುವ ಎಲ್ಲಾ ರಸ್ತೆಗಳನ್ನು ಡಾಂಬರೀಕರಣಗೊಳಿಸಬೇಕು. ಬಟ್ಟೆ ತೊಳೆಯಲು ದೋಬಿ ಘಾಟ ನಿರ್ಮಿಸಬೇಕು, ಸಾರ್ವಜನಿಕ ಗ್ರಂಥಾಲಯ, ಬಸ್ ನಿಲ್ದಾಣ, ಸಮುದಾಯ ಭವನ ನಿರ್ಮಿಸಬೇಕೆಂದು ನಂದೀಶ ಕೋರಿಶೆಟ್ಟರ ಆಗ್ರಹಿಸಿದರು.
ರಾಜು ಎಂ.ವಿ., ಮಂಜುನಾಥ ವಿಭೂತಿ, ಫಕ್ಕಿರೇಶ ನಾಯ್ಕ, ನಾಗರಾಜ ಬಡಿಗೇರ, ಪ್ರಕಾಶ ಪೀಸೆ, ಮೂಹನ ಇಂಗೂಲಿ, ಹನುಮಂತಪ್ಪ ಅಗಡಿ, ಹಾಜರಾಭಿ ಪಠಾಣ, ರತ್ನಮ್ಮ ಮರಡೇರ ಸೇರಿದಂತೆ ನೂರಾರು ಜನರು ನಗರಸಭೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.