ಹಾವೇರಿ

ಮುಂಡಗೋಡದಲ್ಲಿ ಹಾಕಿ ಜ್ವರ!

Published On :

ಮುಂಡಗೋಡ: ಪಟ್ಟಣದಲ್ಲೀಗ ರಾಷ್ಟ್ರ ಕ್ರೀಡೆ ಹಾಕಿ ಆಟದ್ದೇ ದರ್ಬಾರು. ಯುವ ಜನತೆಯನ್ನು ಹಾಕಿ ಜ್ವರ ಆವರಿಸಿದೆ. ಇದು ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಈ ಭಾಗಕ್ಕೆ ಅಷ್ಟಾಗಿ ಪರಿಚಯವಿಲ್ಲದ ಹಾಕಿ ಆಟದಲ್ಲಿ ತೊಡಗಿಸಿಕೊಳ್ಳುತ್ತಿರುವ ಸ್ಥಳೀಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತ ಸಾಗಿದೆ. ನಮ್ಮ ರಾಷ್ಟ್ರೀಯ ಕ್ರೀಡೆ ಯಾವುದು ಎಂಬುದನ್ನೇ ಮರೆತಿರುವ ಇಂದಿನ ದಿನಗಳಲ್ಲಿ ಇದ್ದಕ್ಕಿದ್ದಂತೆ 'ಹಾಕಿ' ಬಗ್ಗೆ ಆಸಕ್ತಿ ಹೆಚ್ಚಿದ್ದು ಆಶ್ಚರ್ಯ ಮೂಡಿಸಿದೆ. ನಿತ್ಯ ಬೆಳಗಾಗುತ್ತಿದ್ದಂತೆ ಬಾಲಕರು, ಯುವಕರು, ಯುವತಿಯರು ಲಿಂಗ ಭೇದವಿಲ್ಲದೆ ಪಾಲ್ಗೊಂಡು ಹಾಕಿ ಆಡುತ್ತಾರೆ. ಬೆಳಗಿನ ಜಾವ ಇಲ್ಲಿಯ ತಾಲೂಕು ಕ್ರೀಡಾಂಗಣದತ್ತ ಮುಖ ಮಾಡಿದರೆ ನೂರಾರು ಜನ ಹಾಕಿ ಆಡುವ ದೃಶ್ಯ ಕಾಣಬಹುದು. ಹಾಕಿ ಬಗ್ಗೆ ಅರಿವಿಲ್ಲದವರೂ ಈಗ ವೃತ್ತಿಪರ ಕ್ರೀಡಾಪಟುವಿನಂತೆ ಆಟ ಪ್ರದರ್ಶಿಸುತ್ತಿದ್ದಾರೆ.
ಮುದ ನೀಡುತ್ತಿರುವ ಹಾಕಿ: ಟೀವಿಯಲ್ಲಿ ಮಾತ್ರ ನೋಡುತ್ತಿದ್ದ ಮನಮೋಹಕ ಆಟ ಹಾಕಿ, ಈಗ ಮುಂಡಗೋಡ ತಾಲೂಕು ಕ್ರೀಡಾಂಗಣದಲ್ಲಿ ಕಣ್ಣಿಗೆ ಸಮೃದ್ಧವಾಗಿ ಗೋಚರಿಸುತ್ತದೆ. ಬೆಳಗ್ಗೆ ವಾಯುವಿಹಾರಕ್ಕೆ ಆಗಮಿಸುವರಿಗೂ ಹಾಕಿ ಕ್ರೀಡೆ ಮುದ ನೀಡುತ್ತಿದ್ದು, ನಡಿಗೆ, ವ್ಯಾಯಾಮ ಮರೆತು, ಆಟ ನೋಡುತ್ತಿದ್ದಾರೆ.
ಶಿಬಿರ: ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಕ ನಿಸಾರ್ ಖಾನ್ ನಿತ್ಯ ಹಾಕಿ ತರಬೇತಿ ನೀಡುತ್ತಿದ್ದಾರೆ. ಇಲ್ಲಿ ಹಾಕಿ ತರಬೇತಿ ಶಿಬಿರ ಆಯೋಜಿಸಲಾಗಿದ್ದು, ಹಲವರು ಪ್ರಯೋಜನ ಪಡೆದಿದ್ದಾರೆ. ಇನ್ನಷ್ಟು ಜನರನ್ನು ಹಾಕಿಯತ್ತ ಸೆಳೆಯಲು ಕಾರಣರಾಗಿದ್ದಾರೆ.
ಸ್ಪರ್ಧೆಯೊಡ್ಡಲು ಸಜ್ಜು: ನೂರಾರು ಹಾಕಿ ಸ್ಟಿಕ್‌ಗಳು, ಬಾಲ್ ಮತ್ತು ಸಲಕರಣೆಗಳೊಂದಿಗೆ ಹಾಕಿ ತರಬೇತಿ ಆರಂಭಿಸಲಾಗಿದೆ. ಹಾಕಿ ಇಲ್ಲೀಗ ಜನಪ್ರಿಯವಾಗಿರುವುದು ಸಂತಸದ ಸಂಗತಿ. ಈವರೆಗೆ ಕ್ರಿಕೆಟ್, ವಾಲಿಬಾಲ್ ಕೂಟಗಳನ್ನು ಆಯೋಜಿಸುವುದು ಸಾಮಾನ್ಯವಾಗಿತ್ತು. ಈಗ ಹಾಕಿ ಆಟವೂ ನಿಧಾನಕ್ಕೆ ಲಗ್ಗೆಯಿಡುತ್ತಿದೆ. ಇಲ್ಲಿ ತರಬೇತಿ ಪಡೆದಿರುವ ಮಕ್ಕಳು ಮೈಸೂರು, ಬೆಂಗಳೂರು ಮುಂತಾದ ಕಡೆಗಳಲ್ಲಿ ನಡೆಯುವ ಹಾಕಿ ಪಂದ್ಯಾವಳಿಯಲ್ಲಿ ಸ್ಪರ್ಧೆಯೊಡ್ಡಲು ಸಜ್ಜಾಗುತ್ತಿದ್ದಾರೆ.
ಸೌಲಭ್ಯದ ಕೊರತೆ: ಹಾಕಿ ಆಡಲು ಬಾಲ್, ಸ್ಟಿಕ್ ಸಲಕರಣೆಗಳ ಕೊರತೆ ಇದೆ. ಯುವಜನ ಸೇವಾ ಕ್ರೀಡಾ ಇಲಾಖೆ ಹಾಗೂ ಸರ್ಕಾರದಿಂದ ಅಂತಹ ಯಾವುದೇ ಸೌಲಭ್ಯ ಲಭಿಸುತ್ತಿಲ್ಲ.ಕ್ರೀಡಾಪಟುಗಳೇ ಸ್ವಂತ ಹಣ ವ್ಯಯಿಸಿ ಸಲಕರಣೆಗಳನ್ನು ಖರೀದಿಸಿ ಆಡುವುದು ಅನಿವಾರ್ಯವಾಗಿದೆ. ಉಳ್ಳವರೇನೋ ಖರೀದಿಸುತ್ತಾರೆ. ಬಡ ಕ್ರೀಡಾಸಕ್ತರು ಪ್ರತಿಭೆ ಇದ್ದರೂ ಹಣ ನೀಡಿ ದುಬಾರಿ ಸಲಕರಣೆಗಳನ್ನು ಖರೀಸಲಾಗದೆ ಹಿಂದೇಟು ಹಾಕುತ್ತಿದ್ದಾರೆ. ಇಷ್ಟೆಲ್ಲ ಸೌಲಭ್ಯದ ಕೊರತೆಯ ನಡುವೆಯೂ ಇಲ್ಲಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ವರ್ಗದವರು ಸಾಕಷ್ಟು ಹಾಕಿ ಸ್ಟಿಕ್, ಬಾಲ್ ತಂದುಕೊಟ್ಟು, ಪ್ರೋತ್ಸಾಹಿಸಿದ್ದಾರೆ. ಇಲ್ಲಿಯ ಎಚ್‌ಪಿ ಗ್ಯಾಸ್ ಏಜೆನ್ಸಿ ವ್ಯವಸ್ಥಾಪಕ, ರಾಜ್ಯಮಟ್ಟದ ಕ್ರೀಡಾಪಟು ಬಸವರಾಜ ಓಶಿಮಠ ಅವರೂ ಸಾಕಷ್ಟು ನೆರವು ನೀಡಿದ್ದಾರೆ.
ಸ್ಥಳೀಯ ಶಾಸಕರು ಸರ್ಕಾರ ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆ ಈ ಬಗ್ಗೆ ಹೆಚ್ಚಿನ ಕಾಳಜಿವಹಿಸಿ ಕ್ರೀಡಾ ಇಲಾಖೆ ಮೂಲಕ ಪ್ರೋತ್ಸಾಹ ನೀಡಲು ಮುಂದಾಗಬೇಕಿದೆ ಎಂಬುವುದು ಪ್ರಜ್ಞಾವಂತ ನಾಗರಿಕರ ಒತ್ತಾಯವಾಗಿದೆ.


-ಸಂತೋಷ ದೈವಜ್ಞ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.