ರಾಜಕೀಯ ವೈಷಮ್ಯ ಬದಿಗಿಡಿ: ವರ್ತೂರು ಪ್ರಕಾಶ್
ಕೋಲಾರ: ಗ್ರಾಮೀಣ ಪ್ರದೇಶದ ಜನತೆ ರಾಜಕೀಯ ವೈಷಮ್ಯ ಬದಿಗೊತ್ತಿ ಅಭಿವೃದ್ಧಿಯ ಹಾದಿಯಲ್ಲಿ ಸಾಗುವುದಕ್ಕೆ ಚಿಂತನೆ ನಡೆಸಿ ಸಾಮರಸ್ಯದಿಂದ ಬದುಕಬೇಕೆಂದು ಶಾಸಕ ವರ್ತೂರು ಪ್ರಕಾಶ್ ಹೇಳಿದರು.
ತಾಲೂಕಿನ ಹುಲ್ಲಂಕಲ್ಲು ಗ್ರಾಮದಲ್ಲಿ ಜೆಡಿಎಸ್ ಮುಖಂಡರನ್ನು ತಮ್ಮ ಬಣಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಕೆಲವು ರಾಜಕಾರಣಿಗಳು ಗ್ರಾಮಗಳಲ್ಲಿ ಜಿದ್ದಾಜಿದ್ದಿ ರಾಜಕಾರಣದ ವಾತಾವರಣ ನಿರ್ಮಾಣ ಮಾಡುತ್ತಾರೆ. ಆದರೆ ನನಗೆ ರಾಜಕೀಯಕ್ಕಿಂತ ಕ್ಷೇತ್ರದ ಜನತೆಯ ನೆಮ್ಮದಿ ಮುಖ್ಯ. ಗ್ರಾಮಗಳಲ್ಲಿ ಕೆಲವು ಪ್ರಕರಣಗಳಲ್ಲಿ ಪೊಲೀಸ್, ಕೋರ್ಟ್ ಮೆಟ್ಟಿಲು ಹತ್ತುವ ಬದಲು ರಾಜಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥಪಡಿಸಿಕೊಂಡು ಸಹಬಾಳ್ವೆ ನಡೆಸಿ ಎಂದರು.
ಮುಖಂಡ ಬೆಗ್ಲಿ ಪ್ರಕಾಶ್ ಮಾತನಾಡಿ, ವಿಧಾನಸಭೆ ಚುನಾವಣೆಯಲ್ಲಿ ವರ್ತೂರು ಪ್ರಕಾಶ್ ವಿರುದ್ಧ ವ್ಯವಸ್ಥಿತ ಅಪಪ್ರಚಾರ ನಡೆಸಿದರೂ ಜನತೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ವರ್ತೂರು ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದ್ದಾರೆ. ಒಂದೇ ಜಾತಿಯಿಂದ ಶಾಸಕರಾಗಲು ಸಾಧ್ಯವಿಲ್ಲ ಎಂಬುದನ್ನು ಜಾತಿವಾದಿಗಳಿಗೆ ಈ ವಿಧಾನಸಭೆ ಚುನಾವಣೆ ಮತ್ತೊಮ್ಮೆ ಮನದಟ್ಟು ಮಾಡಿ ಪಾಠ ಕಲಿಸಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ ಮಾತನಾಡಿ, ಬೈರೇಗೌಡರ ಕಾಲದಲ್ಲೂ ವಿಶೇಷ ಅನುದಾನ ಮಂಜೂರು ಮಾಡಿಸಿಕೊಂಡು ಬರುವುದು ಕಷ್ಟವಾಗಿತ್ತು. ಆದರೆ, ಪ್ರಕಾಶ್ ಅವರು ವಿಶೇಷ ಅನುದಾನಗಳನ್ನು ಕ್ಷೇತ್ರಕ್ಕೆ ತಂದು ಡಾಂಬರು, ಸಿಮೆಂಟ್ ರಸ್ತೆಗಳ ಕಾಮಗಾರಿಯನ್ನು ಶರವೇಗದಲ್ಲಿ ನಡೆಸಿದ್ದಾರೆ. ಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಕಾಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡು ಜನತೆಗೆ ಕುಡಿಯುವ ನೀರಿನ ಬವಣೆ ತಪ್ಪಿಸಿದ್ದಾರೆ ಎಂದರು.
ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಣ್ಣ, ಹುಲ್ಲಂಕಲ್ಲು ಈರಪ್ಪ, ಗ್ರಾಪಂ ಸದಸ್ಯ ಬೈರಪ್ಪ, ತಾಪಂ ಸದಸ್ಯ ಮುನಿಬೈರಪ್ಪ, ಮುನಿರಾಜು, ತಿಮ್ಮರಾಯಪ್ಪ, ಚಾಕಾರಸನಹಳ್ಳಿ ಮಂಜುನಾಥ್ ಇದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ಅಶ್ವಥಪ್ಪ, ಕೃಷ್ಣಪ್ಪ, ಎಂಪಿಸಿಎಸ್ ಮಾಜಿ ಅಧ್ಯಕ್ಷ ವೈಭಣ್ಣ, ಎನ್.ಬೈರಪ್ಪ, ಆರ್.ಬೈರಪ್ಪ, ವೆಂಕಟೇಶ್, ವೆಂಕಟರಾಯಪ್ಪ, ವೈ.ಮುನಿಸ್ವಾಮಪ್ಪ, ಎಂಪಿಸಿಎಸ್ ಅಧ್ಯಕ್ಷ ಚಿನ್ನಯ್ಯ, ಚಂದ್ರಪ್ಪ, ಎನ್.ಕೃಷ್ಣಪ್ಪ ಜೆಡಿಎಸ್ ತೊರೆದು ವರ್ತೂರು ಬಣ ಸೇರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

