ಗುಣಮಟ್ಟ ವಂಚಿತ ಎರೆಹುಳು ಗೊಬ್ಬರ: ರೈತರ ಆರೋಪ
ಕ.ಪ್ರ.ವಾರ್ತೆ ಮಾಲೂರು ಆ.6
ಸರ್ಕಾರ ಸಹಾಯಧನ ಮುಖಾಂತರ ರೈತರಿಗೆ ನೀಡುತ್ತಿರುವ ಗುಣಮಟ್ಟ ವಂಚಿತ ಎರೆಹುಳು ಗೊಬ್ಬರ ವಿತರಣೆ ಸ್ಥಗಿತಗೊಳಿಸಿ, ತಾಲೂಕಿನಲ್ಲಿ ಕೃಷಿ ಯೂರಿಯಾ ಗೊಬ್ಬರ ಸ್ಥಳೀಯ ಕೈಗಾರಿಕೆಗಳಿಗೆ ಅಕ್ರಮವಾಗಿ ಸಾಗಿಸುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತರು ಮಂಗಳವಾರ ಇಲ್ಲಿನ ಕೃಷಿ ಅಧಿಕಾರಿಯನ್ನು ಭೇಟಿ ಮಾಡಿ ಮನವಿ ಅರ್ಪಿಸಿದರು.
ಈ ಸಂದರ್ಭ ಅಧ್ಯಕ್ಷ ಕೋಟಿಗಾನಹಳ್ಳಿ ಗಣೇಶ್ ಗೌಡ ಮಾತನಾಡಿ, ಈಗಾಗಲೇ ರೈತ ಮಳೆ ಇಲ್ಲದೆ ನೀರಿನ ತೀವ್ರ ಸಮಸ್ಯೆಗಳ ನಡುವೆ ಬೆಳೆ ಬೆಳೆಯುತ್ತಿದ್ದಾರೆ. ಇಲಾಖೆ ವತಿಯಿಂದ ನೀಡುತ್ತಿರುವ ಎರೆಹುಳ ಗೊಬ್ಬರ ಹಾಗೂ ಮೈಕ್ರೋನ ಯೂಟ್ರಿಕ್ಸ್ ಮಿಶ್ರಣಗಳು ಕಳಪೆಮಟ್ಟದಿಂದ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಗೊಬ್ಬರ ಸಹ ಕಳಪೆ ಮಟ್ಟದ್ದಾಗಿ ಎಂದು ಪ್ರಯೋಗಾಲಯದಿಂದ ದೃಢಪಟ್ಟಿದ್ದಾರೆ. ರೈತರ ಭೂಮಿಯ ಫಲವತ್ತತೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಗೊಬ್ಬರಗಳಲ್ಲಿ ವರ್ಮಿ ಕಾಂಪೋಸ್ಟ್ ಇನ್ನಿತರ ಮೈಕ್ರೋನ ಯೂಟ್ರಿಕ್ಸ್ ಪೋಷಕಾಂಶಗಳ ಮಿಶ್ರಣಗಳನ್ನು ವಿತರಿಸುವುದನ್ನು ನಿಲ್ಲಿಸುವ ಜೊತೆಗೆ ಪ್ರಯೋಗಾಲಯದಿಂದ ಗುಣಮಟ್ಟದ ಮಾನ್ಯತೆ ಪಡೆದು ಸಂಬಂಧಪಟ್ಟ ವಿತರಕರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು.
ಕಾರ್ಯಾಧ್ಯಕ್ಷ ಬಿಸ್ನಹಳ್ಳಿ ಬೈಚೇಗೌಡ ಮಾತನಾಡಿ, ತಾಲೂಕಿನ ರೈತರಿಗೆ ವಿತರಣೆ ಆಗಬೇಕಾದ ಯೂರಿಯಾ ಗೊಬ್ಬರ ಅಕ್ರಮವಾಗಿ ಇಲ್ಲಿನ ಕೈಗಾಕಿಕಾ ಪ್ರಾಂಗಾಣದ ಕೈಗಾರಿಕೆಗಳ ಉಪಯೋಗಕ್ಕೆ ಕಚ್ಚಾ ವಸ್ತುವಾಗಿ ಬಳಸಲಾಗುತ್ತಿದೆ. ದಿನಕ್ಕೆ ಸುಮಾರು 2000 ಗೊಬ್ಬರ ಚೀಲಗಳು ಬೆಂಗಳೂರಿನ ವೈಟ್ಫೀಲ್ದ್ ಸಮೀಪದ ಸರ್ಕಾರಿ ರಸಗೊಬ್ಬರ ದಾಸ್ತಾನು ಗೋದಾಮಿನಿಂದ ಮಧ್ಯವರ್ತಿಗಳ ಮುಖಾಂತರ ಕೈಗಾರಿಕೆಗಳಿಗೆ ಸರಬರಾಜು ವಾಗುತ್ತಿದೆ. ಈ ಬಗ್ಗೆ ಇಲಾಖೆ ಜಂಟಿ ನಿರ್ದೇಶಕರಿಗೂ ಮಾಹಿತಿ ಇದೆ. ಆದರೂ, ಜಾಣಗುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಆಪಾದಿಸಿದ ಭೈಚೇಗೌಡ, ಈ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಿ ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯ ರೈತ ಸಂಘದಿಂದ ಹೋರಾಟ ರೂಪಿಸಲಾಗುವುದು ಎಂದು ಎಚ್ಚರಿಸಿದರು.
ಗೌರವಾಧ್ಯಕ್ಷ ತೆರ್ನಹಳ್ಳಿ ವೆಂಕಟೇಶ್ ಗೌಡ, ಕಾರ್ಯದರ್ಶಿ ಮಾಲೂರು ಅಶ್ವತ್ಥರೆಡ್ಡಿ, ಬಿ.ನಾರಾಯಣಸ್ವಾಮಿ, ಕೃಷ್ಣಪ್ಪ, ನಾರಾಯಣಸ್ವಾಮಿ, ಚಂದ್ರಪ್ಪ, ನಂಜುಂಡಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

