ಶಾಶ್ವತ ನೀರಾವರಿ ಜಾರಿಗೆ ದನಿ ಎತ್ತಿದ್ದೇವೆ
ಕೋಲಾರ: ಜಿಲ್ಲೆಯ ಜಲ್ವಂತ ಸಮಸ್ಯೆಯಾಗಿರುವ ಶಾಶ್ವತ ನೀರಾವರಿ ಯೋಜನೆ ಅನುಷ್ಟಾನಕ್ಕಾಗಿ ಈ ಬಾರಿ ವಿಧಾನ ಮಂಡಲದ ಉಭಯ ಸದನಗಳಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಮತ್ತು ಪ್ರಾಮಾಣಿಕವಾಗಿ ದನಿ ಎತ್ತಿ ಸರ್ಕಾರದಿಂದ ಸಕಾರಾತ್ಮಕ ಭರವಸೆ ಪಡೆದಿದ್ದೇವೆಂದು ಶಾಸಕರು ತಿಳಿಸಿದ್ದಾರೆ.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಮಂಗಳವಾರ ನಗರದ ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ 'ಸದನದಲ್ಲಿ ನಮ್ಮವರು' ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲೆಯ ಶಾಸಕರಾದ ಕೆ.ಆರ್.ರಮೇಶ್ಕುಮಾರ್, ಆರ್.ವರ್ತೂರ್ ಪ್ರಕಾಶ್, ವೈ.ರಾಮಕ್ಕ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ ಹಾಗೂ ಡಿ.ಎಸ್.ವೀರಯ್ಯ ಅವರು ಈ ಬಾರಿಯ ವಿಧಾನ ಮಂಡಲದ ಅಧಿವೇಶನದಲ್ಲಿ ಜಿಲ್ಲೆಯ ಜನತೆಯ ಪರ ಹಕ್ಕು ಚಲಾಯಿಸಿ ಸರ್ಕಾರದ ಗಮನ ಸೆಳೆಯುವಲ್ಲಿ ತಕ್ಕ ಮಟ್ಟಿಗೆ ಯಶಸ್ವಿಯಾಗಿದ್ದೇವೆ ಎಂದರು.
ಸದನದಲ್ಲಿ ನಮ್ಮ ಪ್ರತಿನಿಧಿಗಳು ಏನು ಮಾಡಿದ್ದಾರೆಂಬುದನ್ನು ಜನತೆಗೆ ತಿಳಿಸುವ ಹಾಗೂ ಸರ್ಕಾರದ ಮೇಲೆ ಇನ್ನಷ್ಟು ಒತ್ತಡ ತಂದು ಆದ್ಯತೆ ಮೇಲೆ ಯೋಜನೆ ಅನುಷ್ಟಾನಗೊಳಿಸಬೇಕೆಂಬ ಉದ್ದೇಶದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಎಲ್ಲ ಶಾಸಕರು ಮಾತನಾಡಿ, ಶಾಶ್ವತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ನಮ್ಮ ಮತ್ತು ಜನತೆಯ ನಂಬಿಕೆಗೆ ವಿರುದ್ಧವಾಗಿ ಸಾಗಿದಲ್ಲಿ ಸದನದ ಒಳಗೆ ಮತ್ತು ಹೊರಗೆ ಹೋರಾಟ ಮುಂದುವರೆಸುವುದಾಗಿ ಹೇಳಿದರು.
ಶ್ರೀನಿವಾಸಪುರ ಕ್ಷೇತ್ರದ ಹಿರಿಯ ಶಾಸಕ ಕೆ.ಆರ್.ರಮೇಶ್ಕುಮಾರ್ ಮಾತನಾಡಿ, 20 ದಿನಗಳ ಕಾಲ ನಡೆದ ವಿಧಾನಮಂಡಲದ ಆಧಿವೇಶನದಲ್ಲಿ ಆಡಳಿತ ಸುಧಾರಣೆ, ಸಾರಿಗೆ ವ್ಯವಸ್ಥೆ, ಶಾಶ್ವತ ನೀರಾವರಿ ಯೋಜನೆ ಸೇರಿದಂತೆ ಒಟ್ಟು 19 ಪ್ರಶ್ನೆಗಳನ್ನು ಮಂಡಿಸಿ ಸರ್ಕಾರದಿಂದ ಸ್ಪಷ್ಟ ಉತ್ತರಗಳನ್ನು ಪಡೆದಿರುವುದಾಗಿ ತಿಳಿಸಿದರು.
ರಾಷ್ಟ್ರೀಕರಣ ರಸ್ತೆಗಳ ನಿಯಮವನ್ನು ಸಡಿಲಗೊಳಿಸಿ ಜನರ ಅನುಕೂಲಕ್ಕೆ ತಕ್ಕಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಒತ್ತಾಯಿಸಿದ್ದೇನೆ. ಇದಕ್ಕೆ ಸಂಬಂಧಪಟ್ಟ ಮಂತ್ರಿಗಳು ಸಕಾರಾತ್ಮಕ ಭರವಸೆ ನೀಡಿದ್ದಾರೆ. ಅನುತ್ಪಾದಕ, ಅಲಂಕಾರಿಕ ಹಾಗೂ ಸರ್ಕಾರಕ್ಕೆ ನಷ್ಟವಾಗುವ ಹುದ್ದೆಗಳನ್ನು ರದ್ದು ಪಡಿಸಿ ಆಡಳಿತಕ್ಕೆ ಚುರುಕು ಮುಟ್ಟಿಸಲು ಸಲಹೆ ನೀಡಿರುವುದಾಗಿ ತಿಳಿಸಿದರು.
ಶಾಶ್ವತ ನೀರಾವರಿ ವಿಚಾರವಾಗಿ ಜನತೆಯ ಸಮಸ್ಯೆ ವಿವರಿಸಿದ್ದೇವೆ. ನಮ್ಮ ಒತ್ತಡದ ಪರಿಣಾಮ ಬಜೆಟ್ನಲ್ಲಿ ಎತ್ತಿನಹೊಳೆ ಯೋಜನೆಗಾಗಿ 1 ಸಾವಿರ ಕೋಟಿ ಪ್ರಕಟಿಸಿದ್ದಾರೆ. ಬರುವ ವರ್ಷ ಯುಗಾದಿ ವೇಳೆಗೆ ಯೋಜನೆ ಕಾರ್ಯರೂಪಕ್ಕೆ ಬರುವ ಭರವಸೆ ಸಿಕ್ಕಿದೆ ಎಂದರು.
ಎತ್ತಿನಹೊಳೆಯ ಯೋಜನೆಯನ್ನು ಭಾಗ 1 ಮತ್ತು ಭಾಗ 2 ಎಂದು ಪರಿಗಣಿಸಿ ನೀರು ಲಭ್ಯವಿರುವ ಕಡೆ ನೀರನ್ನು ಸಂಗ್ರಹಿಸುವುದು ಹಾಗೂ ಶೇಖರಿಸಿರುವ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆದ್ಯತೆ ಮೇರೆಗೆ ಕೆರೆಗಳಿಗೆ ಹರಿಸಲಾಗುವುದು. ಈಗಾಗಲೇ ನೀರು ತುಂಬಿಸುವ ಕೆರೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಪರಮಶಿವಯ್ಯ ವರದಿಗೆ ಡಿಪಿಆರ್ ಮಾಡಲು ಬಜೆಟ್ನಲ್ಲಿ 50 ಕೋಟಿ ಮೀಸಲಿಟ್ಟಿದ್ದು, ವರದಿ ಬರಲು 6 ರಿಂದ 8 ತಿಂಗಳು ಆಗುವುದರಿಂದ ವರದಿ ಬರುವವರೆಗೂ ಈ ಬಗ್ಗೆ ಮಾತನಾಡಲು ಸಾಧ್ಯವಿಲ್ಲ ಎಂದರು.
ಸಣ್ಣ ಮತ್ತು ದೊಡ್ಡ ರೈತರನ್ನು ವಿಭಜನೆ ಮಾಡದೆ ಎಲ್ಲರಿಗೂ ಸರಳ ರೀತಿಯಲ್ಲಿ ಸಾಲ ಸೌಲಭ್ಯ ನೀಡಬೇಕು. ಕೃಷಿಯನ್ನು ಯಂತ್ರೀಕರಣಗೊಳಿಸಬೇಕು ಮತ್ತು ಹೊಗಳಗೆರೆಯ ಬಳಿ ಇರುವ ಕೃಷಿ ವಿವಿಗೆ ಜಿ.ನಾರಾಯಣಗೌಡರ ಹೆಸರನ್ನು ಇಡುವಂತೆ ಸದನದಲ್ಲಿ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದರು. ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ತಾವು ಸದನದಲ್ಲಿ ಒಟ್ಟು 50 ಪ್ರಶ್ನೆಗಳನ್ನು ಕೇಳಿ ಬಹುತೇಕ ಪ್ರಶ್ನೆಗಳಿಗೆ ಸರ್ಕಾರದಿಂದ ಉತ್ತರ ಪಡೆದಿರುವುದಾಗಿ ತಿಳಿಸಿದರು.
ಬೆಂಗಳೂರು ವಿವಿ ಬೇರ್ಪಡಿಸುವ ಸಂಬಂಧ ನಡೆದ ಚರ್ಚೆಯಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ವ್ಯಾಪ್ತಿಯ ಕಾಲೇಜುಗಳನ್ನು ಸೇರಿಸಿಕೊಂಡು ಬೆಂಗಳೂರಿನ ನಂದಗುಡಿ ಬಳಿ ಪ್ರತ್ಯೇಕ ವಿವಿ ಸ್ಥಾಪಿಸಿ ಅದಕ್ಕೆ ಡಿ.ವಿ.ಗುಂಡಪ್ಪನವರ ಹೆಸರನ್ನು ನಾಮಕರಣ ಮಾಡುವಂತೆ ಒತ್ತಾಯಿಸಲಾಗಿದ್ದು ಇದಕ್ಕೆ ಸರ್ಕಾರ ಸಮ್ಮತಿಸಿದೆ ಎಂದರು. ಮಾಲೂರು ಮತ್ತು ಬಂಗಾರಪೇಟೆ ತಾಲೂಕಿನಲ್ಲಿ ಆನೆ ಹಾವಳಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನಧಿಕೃತ ಬಸ್ಸುಗಳ ಓಡಾಟ, ಮಾಸ್ತಿ ಮತ್ತು ಬಿ.ಕೊತ್ತಕೋಟ ನಡುವೆ ರಸ್ತೆ ಆಗಲೀಕರಣ ಸೇರಿದಂತೆ ಹಲವಾರು ವಿಚಾರಗಳನ್ನು ಪ್ರಸ್ತಾಪಿಸಿದ್ದೇನೆ. ಸಣ್ಣ ನೀರಾವರಿ ಇಲಾಖೆಗೆ ಸೇರಿದ ಕೆರೆಗಳ ಒತ್ತುವರಿ ವಿಚಾರದ ಬಗ್ಗೆಯೂ ಸದನದ ಗಮನ ಸೆಳೆದಿರುವುದಾಗಿ ಹೇಳಿದರು.
ಉಳಿದಂತೆ ಶಾಸಕರಾದ ವರ್ತೂರ್ ಪ್ರಕಾಶ್, ವೈ.ರಾಮಕ್ಕ, ಎಮ್ಮೆಲ್ಸಿ ಡಿ.ಎಸ್.ವೀರಯ್ಯ ಶಾಶ್ವತ ನೀರಾವರಿ ಯೋಜನೆ ಬಗ್ಗೆ ಸದನದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಪಕ್ಷಾತೀತವಾಗಿ ಧ್ವನಿಯೆತ್ತಿ ಸರ್ಕಾರದ ಗಮನ ಸೆಳೆದಿರುವುದಾಗಿ ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕಾರಿ ಸಮಿತಿ ಸದಸ್ಯ ವಾಸುದೇವ ಹೊಳ್ಳ ಸ್ವಾಗತಿಸಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗಣೇಶಿ ನಿರೂಪಿಸಿ, ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

