ಕರಾವಳಿ ಜನರಿಗೆ ಬಯಲುಸೀಮೆ ನೈಜ ಸ್ಥಿತಿಗತಿ ಅರ್ಥ ಮಾಡಿಸಿ'
ಕ.ಪ್ರ.ವಾರ್ತೆ ಕೋಲಾರ ಆ.8
ಪಶ್ಚಿಮಘಟ್ಟಗಳಿಂದ ಬಯಲುಸೀಮೆಗೆ ನೀರು ಹರಿಸಿದರೆ ಕರಾವಳಿ ಪ್ರದೇಶದಲ್ಲಿ ಕ್ಷಾಮ ಎದುರಾಗುತ್ತದೆ, ಮೀನುಗಾರರ ಬದುಕಿಗೆ ಹಾನಿಯಾಗುತ್ತದೆ ಎಂದು ತಪ್ಪು ಸಂದೇಶ ರವಾನೆ ಆಗುತ್ತಿರುವುದರಿಂದ ಮಳೆಯಾಧಾರಿತ ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಮಾಧ್ಯಮಗಳು ಇಲ್ಲಿನ ಸ್ಥಿತಿಗತಿಗಳನ್ನು ಆ ಜನರಿಗೆ ಅರ್ಥ ಮಾಡಿಸಬೇಕಾಗಿದೆ ಎಂದು ಕೃಷಿ ಸಚಿವ ಕೃಷ್ಣಬೈರೇಗೌಡರ ತಿಳಿಸಿದರು.
ಅವರು ಗುರುವಾರ ನಗರದ ಟಮಕದಲ್ಲಿ ತೋಟಗಾರಿಕೆ ಮಹಾವಿದ್ಯಾಲಯದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಪಶ್ಚಿಮಘಟ್ಟಗಳಿಂದ ಬಯಲು ಸೀಮೆ ಜಿಲ್ಲೆಗಳಿಗೆ ನೀರು ಹರಿಸಿದಲ್ಲಿ ಅರಬ್ಬಿ ಸಮುದ್ರದಲ್ಲಿ ಮೀನು ಬದುಕುವುದಿಲ್ಲವೆಂದು ಅಪಪ್ರಚಾರ ಮಾಡಲಾಗುತ್ತಿದೆ, ಮಳೆಯ ನೀರು ವ್ಯರ್ಥವಾಗಿ ಸಮುದ್ರ ಸೇರಿದರೆ ಇಲ್ಲಿನ ಜನತೆಯ ಬದುಕು ಏನಾಗುತ್ತದೆ ಎಂಬುದನ್ನು ಸಹ ಅರ್ಥ ಮಾಡಿಸುವ ಪ್ರಾಮಾಣಿಕ ಪ್ರಯತ್ನವಾಗಬೇಕಾಗಿದೆ ಎಂದರು.
ಕೆಲ ಮಾಧ್ಯಮಗಳಲ್ಲಿ ಕರಾವಳಿಯ ಬಗ್ಗೆ ಕಾಳಜಿ ತೋರುವ ಲೇಖನಗಳು ಪ್ರಕಟವಾಗಿರುವುದರಿಂದ ಅಲ್ಲಿನ ಜನತೆ ನಿಜವೆಂದು ನಂಬುತ್ತಿದ್ದಾರಲ್ಲದೆ, ನೀರು ಹರಿಸಲು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ಜನತೆಯಲ್ಲಿ ಇರುವ ಸಂಶಯ, ಭಯವನ್ನು ನಿವಾರಣೆ ಮಾಡಲು ಇಲ್ಲಿನ ಮಾಧ್ಯಮಗಳು ಸಹ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜನತೆಯ ಸಮಸ್ಯೆ ನಿವಾರಣೆ ಮಾಡಬೇಕಾಗಿದೆ. ಇದಕ್ಕೆ ಜನಪ್ರತಿನಿಧಿಗಳ ಸಂಘಟಿತ ಪ್ರಯತ್ನವೂ ಸಹ ಮುಖ್ಯವಾಗಿದೆ ಎಂದು ಹೇಳಿದರು.
ಪಶ್ಚಿಮ ಘಟ್ಟದಲ್ಲಿ 4 ಸಾವಿರ ಟಿಎಂಸಿಗಿಂತ ಅಧಿಕ ಮಳೆ ನೀರು ಸಮುದ್ರಕ್ಕೆ ಹೋಗುತ್ತದೆ. ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಕರ್ಯಕ್ಕಾಗಿ ಕೇವಲ 240 ಟಿಎಂಸಿ ನೀರು ತೆಗೆದುಕೊಂಡರೆ ಯಾವುದೇ ಪರಿಣಾಮ ಬೀರುವುದಿಲ್ಲ, ಮೀನುಗಳ ಸಂತಾನದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅರ್ಥ ಹೀನವೆಂದು ನುಡಿದರು.
ನಮ್ಮ ಸರ್ಕಾರಕ್ಕೂ ಪರಿಸರದ ಬಗ್ಗೆ ಕಾಳಜಿ ಇದೆ. ನಾನೂ ಪರಿಸರ ವಾದಿಯೇ. ಪ್ರಾಣಿ ಸಂಕುಲ ಉಳಿಸಬೇಕೆಂಬ ಕಾಳಜಿ ಇದೆ. ಆದರೆ ಮನುಷ್ಯರಿಗೆ ಕುಡಿಯುವುದಕ್ಕೆ ನೀರು ಕೊಡುವುದಿಲ್ಲವೆಂದು ಹೇಳಿದರೆ ಯಾವ ಸರ್ಕಾರ ಇದ್ದು ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಎತ್ತಿನಹೊಳೆ ಯೋಜನೆಗಾಗಿ ಸರ್ಕಾರ ಬದ್ಧವಾಗಿದೆ. ಇದರ ಬಗ್ಗೆ ಆತಂಕಬೇಡ, ಆದಷ್ಟು ಶೀಘ್ರವೇ ಯೋಜನೆ ಆನುಷ್ಠಾನಕ್ಕೆ ತರಲಾಗುವುದೆಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

