ಕೋಲಾರ

ಸುವರ್ಣ ಕನ್ನಡಭವನ ಕಾಮಗಾರಿಗೆ ನೂರೆಂಟು ವಿಘ್ನ

Published On :

ವಿಶೇಷ ವರದಿ
ಕ.ಪ್ರ.ವಾರ್ತೆ  ಕೋಲಾರ  ಆ. 9
ನಗರದಲ್ಲಿ ಸುವರ್ಣ ಕನ್ನಡ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ನೂರೆಂಟು ವಿಘ್ನ ಎದುರಾಗಿರುವುದರಿಂದ ಕನ್ನಡಿಗರು ಭವನದ ಉದ್ಘಾಟನೆಗೆ ಸಾಕ್ಷಿಯಾಗುವುದಕ್ಕೆ ಇನ್ನಷ್ಟು ದಿನ ಕಾಯುವಂತಾಗಿದೆ.
ರಾಜ್ಯ ಸರ್ಕಾರ ಸುವರ್ಣ ಕರ್ನಾಟಕದ ಅಂಗವಾಗಿ ಪ್ರತಿ ಜಿಲ್ಲೆಯಲ್ಲಿ ಒಂದು ಗಡಿ ಭವನ ಇಲ್ಲವೇ ಸುವರ್ಣ ಕನ್ನಡ ಭವನ ನಿರ್ಮಿಸಲು ತೀರ್ಮಾನಿಸಿದ್ದರಿಂದ 2009-2010ರಲ್ಲಿ ಭವನ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಕೋಲಾರ ತಾಲೂಕಿನ ತೇರಹಳ್ಳಿ ಬೆಟ್ಟ ಸೇರಿದಂತೆ ನಗರದ ವಿವಿಧ ಕಡೆ ಭವನ ನಿರ್ಮಾಣಕ್ಕೆ ಬೇಕಾದ ನಿವೇಶನಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹುಡುಕಾಡಿದರೂ ಒಂದಿಂಚೂ ಜಾಗ ಸಿಕ್ಕಿರಲಿಲ್ಲ.
ಕೋಲಾರಮ್ಮ ಕೆರೆ ಅಂಗಳದಲ್ಲಿ ಈಗಾಗಲೇ ಸಾಕಷ್ಟು ಕಟ್ಟಡಗಳು ನಿರ್ಮಿಸಿರುವುದರಿಂದ ಅಲ್ಲಿ ಬೇರೆ ಯಾವುದೇ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲವೆಂದು ಆಗಿನ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ನಿರ್ಧರಿಸಿದ್ದರು.
ಇದೇ ಸಂದರ್ಭದಲ್ಲಿ ಕೆರೆ ಅಂಗಳದಲ್ಲಿ ಕೆಲವರು ಹುತಾತ್ಮ ವೀರರ ಸ್ಮಾರಕವನ್ನು ಸ್ಥಾಪಿಸಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಮತ್ತು ನೀರಾವರಿ ಇಲಾಖೆಯವರು ಸದರಿ ಅನಧಿಕೃತ ಸ್ಮಾರಕವನ್ನು ತೆರವುಗೊಳಿಸಿದ್ದರು.
ಇದೇ ಜಾಗದಲ್ಲಿ ಕೋಲಾರ ಜಿಲ್ಲಾ ನಿವೃತ್ತ ಸೈನಿಕರ ಟ್ರಸ್ಟ್ ವತಿಯಿಂದ ನಿವೃತ್ತ ಸೈನಿಕರಿಗಾಗಿ ವಸತಿ ಯೋಜನೆ ಅನುಷ್ಟಾನಕ್ಕೆ ಪ್ರಯತ್ನಿಸಲಾಗಿತ್ತಾದರೂ ಜಿಲ್ಲಾ ಆಡಳಿತ ಅನುಮತಿ ನೀಡಿದ ಕಾರಣ ಯೋಜನೆ ಸ್ಥಗಿತಗೊಂಡಿತು.
ಆದರೆ. ಕೋಲಾರಮ್ಮ ಕೆರೆ ಅಂಗಳದಲ್ಲಿ ಸುಮಾರು 1 ಎಕರೆ ಪ್ರದೇಶದಲ್ಲಿ ಸುವರ್ಣ ಕನ್ನಡ ಭವನಕ್ಕೆ ಚಾಲನೆ ಸಿಕ್ಕಿದ ನಂತರ ಕೆಲವರು ತಕರಾರು ಮಾಡಲಾರಂಭಿಸಿದ್ದಾರೆ.
ಕೆರೆ ಅಂಗಳದಲ್ಲಿ ನಮಗೆ ಜಾಗ ನೀಡುವುದಕ್ಕೆ ಅನುಮತಿ ನಿರಾಕರಿಸಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸುವರ್ಣ ಕನ್ನಡ ಭವನ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ ಎಂದು ವಿರೋಧ ವ್ಯಕ್ತಪಡಿಸಿರುವುದರಿಂದ ಭವನ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವುದಕ್ಕೆ ಅಡ್ಡಿ ಉಂಟಾಗಿದೆ.
ಅರ್ಜಿದಾರರೊಬ್ಬರು ಕೆರೆಯಲ್ಲಿ ಕಟ್ಟಡ ನಿರ್ಮಾಣ ಪ್ರಶ್ನಿಸಿ ನ್ಯಾಯಾಲಯಕ್ಕೆ ದೂರು ನೀಡಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯವರು ಸಣ್ಣ ನೀರಾವರಿ ಇಲಾಖೆಯಿಂದ ಪಡೆದಿರುವ ಎನ್.ಓ.ಸಿ ಯನ್ನು ಮುಂದಿಟ್ಟುಕೊಂಡು ನ್ಯಾಯಾಲಯದಲ್ಲಿ ವಿವಾದ ಇತ್ಯರ್ಥಕ್ಕೆ ಕಾನೂನು ಹೋರಾಟ ಮುಂದುವರೆಸಿದ್ದಾರೆ. ಕೆರೆಯ ಅಂಗಳದಲ್ಲಿ ಸರ್ಕಾರಿ ಇಲ್ಲವೇ ಖಾಸಗಿಯವರು ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ. ಆದರೆ, ಕೆರೆ ಅಂಗಳಲ್ಲಿ ಅನಧಿಕೃತವಾಗಿ ಸ್ಮಾರಕ ನಿರ್ಮಿಸಿದ್ದರಿಂದ ಅದನ್ನು ತೆರವುಗೊಳಿಸಲಾಗಿದ್ದು, ಕನ್ನಡ ಭವನ ನೀರು ಮುಳುಗಡೆ ಪ್ರದೇಶಕ್ಕೆ ಸೇರಿರುವುದರಿಂದ ಸರ್ವೆ ನಂ. ಅನುಗುಣವಾಗಿ ಸುವರ್ಣ ಭವನ ನಿರ್ಮಾಣಕ್ಕೆ ಜಿಲ್ಲಾ ಆಡಳಿತ ಅನುಮತಿ ನೀಡಿದೆ ಎಂಬುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾದವಾಗಿದೆ.
ಕಳೆದ ಎರಡು ವರ್ಷಗಳ ಹಿಂದೆ ಕನ್ನಡ ಭವನದ ನಿರ್ಮಾಣ ಕಾಮಗಾರಿ ಆರಂಭಿಸಿ ಈಗಾಗಲೇ ಶೇಕಡ 50ರಷ್ಟು ಕಾಮಗಾರಿ ಮುಗಿಸಲಾಗಿದೆ, ಸರ್ಕಾರ ಬಿಡುಗಡೆ ಮಾಡಿದ್ದ 1.25 ಕೋಟಿ ರು. ಖರ್ಚು ಮಾಡಲಾಗಿದೆ, ಯೋಜನೆಯ ವೆಚ್ಚ ಹೆಚ್ಚಳದಿಂದಾಗಿ 90 ಲಕ್ಷ ರು.ಗಳನ್ನು ಹೆಚ್ಚುವರಿಯಾಗಿ ಬಿಡುಗಡೆ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ನಡುವೆ ಸುವರ್ಣ ಭವನ ನಿರ್ಮಾಣಕ್ಕೆ ಇದ್ದ ವಿವಾದ ಇತ್ಯರ್ಥವಾಗುವ ಹಂತಕ್ಕೆ ಬಂದು ತಲುಪಿದ್ದು, ಸ್ಪಷ್ಟ ಆದೇಶ ಹೊರಬೀಳುವತನಕ ಕಾಮಗಾರಿ ನಡೆಸದಿರಲು ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನಿರ್ಮಿತಿ ಕೇಂದ್ರ ನಿರ್ಧರಿಸಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿರುವುದರಿಂದ ಕಟ್ಟಡದಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದಿರುವುದಲ್ಲದೆ, ಅನೈತಿಕ ಚಟುವಟಿಕೆಗಳು ನಡೆಯುವುದಕ್ಕೆ ಅವಕಾಶವಾಗಿದೆ.
ಭವನ ನಿರ್ಮಾಣಕ್ಕೆ ಎದುರಾಗಿರುವ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬಗೆಹರಿಸದಿದ್ದಲ್ಲಿ ಈಗಾಗಲೇ ಖರ್ಚು ಮಾಡಿರುವ 1.25 ಕೋಟಿ ರು. ನೀರಿನಲ್ಲಿ ಹೋಮ ಮಾಡಿದಂತಾಗುತ್ತದೆ.
ಕಟ್ಟಡ ನಿರ್ಮಾಣ ಸ್ಥಗಿತಕ್ಕೆ ಹಣದ ಸಮಸ್ಯೆಯೋ ಇಲ್ಲವೇ ವಿವಾದ ಕಾರಣವೇ ಎಂಬುದು ಸಾರ್ವಜನಿಕರಲ್ಲಿ ಅನುಮಾನಕ್ಕೆ ಕಾರಣವಾಗಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೂಡಲೇ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕೆಂಬುದು ಕನ್ನಡ ಪರ ಸಂಘಟನೆಗಳ ಒತ್ತಾಸೆಯಾಗಿದೆ.

ಅಧಿಕಾರಿ ಹೇಳಿದ್ದು..
ಸುವರ್ಣ ಕನ್ನಡ ಭವನ ನಿರ್ಮಾಣಕ್ಕೆ ವಿವಾದ ಇದ್ದದ್ದು ನಿಜ, ಸೂಕ್ತ ದಾಖಲೆಗಳ ಆಧಾರದ ಮೇಲೆ ಸಮಸ್ಯೆ ನಿವಾರಣೆ ಮಾಡಿಕೊಂಡಿದ್ದೇವೆ, ಸರ್ಕಾರ ನೀಡಿದ್ದ 1.25 ಕೋಟಿ ಖರ್ಚು ಮಾಡಲಾಗಿದೆ. ಇನ್ನು 90 ಲಕ್ಷ ರು.ಬೇಕಾಗಿದೆ, ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಹಣ ಬಿಡುಗಡೆಯಾದ ಕೂಡಲೇ ಕಾಮಗಾರಿ ಮುಗಿಸಲಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ನಿರ್ದೇಶಕ ವೆಂಕಟಾಚಲಪತಿ ಕನ್ನಡಪ್ರಭಕ್ಕೆ ತಿಳಿಸಿದರು. ಏನೇ ವಿವಾದ ಇದ್ದರೂ ನಿವಾರಣೆ ಆಗುವ ಭರವಸೆಯಿದೆ, ಇನ್ನು ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.

ಒಬ್ಬೊಬ್ಬರಿಗೆ ಒಂದೊಂದು ಕಾನೂನೇ?
ಆದರೆ ಇದಕ್ಕೆ ವ್ಯತಿರಿಕ್ತವೆಂಬಂತೆ ಜಿಲ್ಲಾ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಹೆಚ್. ಜಗನ್ನಾಥ್ ಪ್ರತಿಕ್ರಿಯೆ ನೀಡಿ, ನಮಗೆ ನಿವೇಶನ ನೀಡಲು ಅನುಮತಿ ನಿರಾಕರಣೆ ಮಾಡಿದ ಜಿಲ್ಲಾ ಆಡಳಿತ ಕೆರೆಯಲ್ಲಿ ಸುವರ್ಣ ಕನ್ನಡ ಭವನ ಕಟ್ಟಲು ಹೇಗೆ ಅನುಮತಿ ನೀಡಿತು ಎಂದು ಅನುಮಾನ ವ್ಯಕ್ತಪಡಿಸಿದರು. ಸುವರ್ಣ ಕನ್ನಡ ಭವನಕ್ಕೆ ನಿರ್ಮಾಣಕ್ಕೆ ನಮ್ಮ ವಿರೋಧವಿಲ್ಲ. ಆದರೆ ಸರ್ಕಾರಕ್ಕೆ ಒಂದು ಕಾನೂನು, ನಮಗೆ ಒಂದು ಕಾನೂನು ಸರಿಯೇ ಎಂದು ಪ್ರಶ್ನಿಸಿದರಲ್ಲದೆ, ದಾಖಲೆಗಳನ್ನು ಸಂಗ್ರಹಿಸಿ ಲೋಕಾಯುಕ್ತರಿಗೆ ದೂರು ನೀಡುವುದಾಗಿ ತಿಳಿಸಿರುವುದರಿಂದ ಭವನದ ಕಾಮಗಾರಿ ಪೂರ್ಣಗೊಳ್ಳಲು ಇನ್ನಷ್ಟು ವಿಘ್ನಗಳು ಎದುರಾಗುವ ಸಾಧ್ಯತೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.