'ಎಸ್ಸಿ, ಎಸ್ಟಿ ನೌಕರರ ಬೇಡಿಕೆ ಈಡೇರಿಸುವೆ'
ಕೋಲಾರ: ಅಂಚೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕೇಂದ್ರ ಸರ್ಕಾರದ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳ ರಾಜ್ಯ ಸಚಿವ ಮುನಿಯಪ್ಪ ಭರವಸೆ ನೀಡಿದರು.
ನಗರದ ವಿಜಯ ಬ್ಯಾಂಕ್ ಸಮೀಪದ ಎಸ್.ಎಲ್.ಎನ್. ಸಭಾಂಗಣದಲ್ಲಿ ಅಖಿಲ ಭಾರತ ಅಂಚೆ ಇಲಾಖೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಶಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಬಿ.ಆರ್. ಅಂಬೇಡ್ಕರ್ ಸಂಸ್ಮರಣ ದಿನ ಹಾಗೂ ವಾರ್ಷಿಕ ಮಹಾಸಭಾದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇಂದ್ರದ ಸಂಪರ್ಕ ಇಲಾಖೆ ಸಚಿವ ಕಪಿಲ್ ಸಿಬಾಲ್ ಅವರು ನನ್ನೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದರಿಂದ ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಎಸ್ಪಿ ಮತ್ತು ಎಸ್ಟಿ ನೌಕರರ ಬೇಡಿಕೆ ಅವರೊಂದಿಗೆ ಚರ್ಚಿಸಿ ಸಮಸ್ಯೆ ನಿವಾರಣೆ ಮಾಡುವುದಾಗಿ ತಿಳಿಸಿದರು.
ಅಂಚೆ ನೌಕರರ ಸಂಘದ ರಾಜ್ಯ ಮುಖಂಡ ಸಹಿತ ದಿನಾಂಕ ನಿಗದಿಪಡಿಸಿ ದೆಹಲಿಗೆ ನಿಯೋಗ ಬಂದಲ್ಲಿ ಕೇಂದ್ರ ಸಂಪರ್ಕ ಸಚಿವರ ಬಳಿ ಕರೆದೊಯ್ದು ಖುದ್ದಾಗಿ ನಿಮ್ಮ ಮೂಲಕವೇ ಸಚಿವರಿಗೆ ಮನವಿ ಸಲ್ಲಿಕೆ ಮಾಡಿಸಿ ಬೇಡಿಕೆಗಳ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದರು.
ತಮ್ಮ ಇಲಾಖೆಯಲ್ಲಿ ಖಾಲಿ ಇದ್ದ ಬ್ಯಾಕ್ಲಾಗ್ ಹುದ್ದೆಗಳ ಪೈಕಿ ಈಗಾಗಲೇ ಶೇ.60ರಷ್ಟು ಭರ್ತಿ ಮಾಡಿಸಿದ್ದೇನೆ, ಉಳಿದ ಶೇ.40ರಷ್ಟು ಹುದ್ದೆಗಳನ್ನು ಇನ್ನು ಮೂರು ತಿಂಗಳಲ್ಲಿ ಭರ್ತಿ ಮಾಡಲಾಗುವುದೆಂದ ಸಚಿವರು, ಇದೇ ರೀತಿ ಅಂಚೆ ಇಲಾಖೆಯಲ್ಲಿರುವ ಬ್ಯಾಕ್ಲಾಗ್ ಹುದ್ದೆಗಳು ಭರ್ತಿಯಾಗಬೇಕಾಗಿದ್ದು ಇದಕ್ಕೆ ತಮ್ಮ ಸಹಕಾರವಿದೆ ಎಂದರು. ಅಂಬೇಡ್ಕರ್ ಅವರ ಹೋರಾಟದಿಂದಾಗಿ ದಲಿತರು ಎಲ್ಲರಂತೆ ಸಮಾಜದಲ್ಲಿ ಬದುಕುವಂತಾಗಿದೆ, ಹಕ್ಕುಗಳನ್ನು ಕೇಳಿ ಪಡೆಯುವುದಕ್ಕಿಂತ ಹಕ್ಕುಗಳು ಅವಾಗಿಯೇ ನಮಗೆ ಕೊಡುವಂತಾಗಬೇಕಾದರೆ ಮೊದಲು ನಾವು ಸಂಘಟಿತರಾಗಬೇಕು. ಗುಣಮಟ್ಟದ ಶಿಕ್ಷಣ ಪಡೆಯುವ ಮೂಲಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಆತ್ಮಸೈರ್ಯದಿಂದ ಬದುಕುವ ಕಡೆ ಗಮನ ನೀಡಬೇಕೆಂದು ಕರೆ ನೀಡಿದರು.
ತಮ್ಮ ಭಾಷಣದ್ದುದ್ದಕ್ಕೂ ಯುಪಿಎ ಸರ್ಕಾರ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಧಾನಿ ಡಾ.ಮನಮೋಹನ ಸಿಂಗ್ ಅವರನ್ನು ಹಾಡಿ ಹೊಗಳಿದ ಕೆ.ಎಚ್. ಮುನಿಯಪ್ಪ ಅವರು, ಬಡವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಕಾಳಜಿ ಇರುವುದರಿಂದಲೇ ನರೇಗಾ ಯೋಜನೆ ಜಾರಿಯಾಗಿದೆ, ರಾಜ್ಯದಲ್ಲಿ ಅನ್ನಭಾಗ್ಯ ಯೋಜನೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಷ್ಟಾನಕ್ಕೆ ತಂದಿದ್ದಾರೆ ಎಂದರು. ಆಹಾರ ಭದ್ರತೆಗೆ ಸಂಬಂಧಿಸಿದಂತೆ ರಾಜ್ಯ ಸಭೆಯಲ್ಲಿ ಮಂಡಿಸಿದ ವಿಧೇಯಕ ಅಂಗೀಕಾರವಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

