'ವಾರದೊಳಗೆ ಅಂತಿಮ ನಿರ್ಧಾರ ತಿಳಿಸಿದರೆ ಕ್ರಮ'
ಕ.ಪ್ರ.ವಾರ್ತೆ ಟಿ ಚಿಕ್ಕಬಳ್ಳಾಪುರ ಟಿ ಆ.12
ರಾಷ್ಟ್ರೀಯ ಹೆದ್ದಾರಿ 7ರ ಬೈಪಾಸ್ ರಸ್ತೆ ನಿರ್ಮಾಣಕ್ಕಾಗಿ ತಮ್ಮ ಜಮೀನುಗಳನ್ನು ನೀಡಿ ಕೊನೆಗೆ ಸೂಕ್ತ ಪರಿಹಾರ ಹಣ ದೊರೆಯದೇ ಇದೀಗ ಕಂಗಲಾಗಿರುವ ತಾಲೂಕಿನ ರೈತರೊಂದಿಗೆ ಜಿಲ್ಲಾಧಿಕಾರಿ ವಿಶಾಲ್ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು.
ಬೈಪಾಸ್ ರಸ್ತೆ ನಿರ್ಮಾಣಕ್ಕೆ ಚಿಕ್ಕಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ನೂರಾರು ಎಕರೆ ಕೃಷಿ ಜಮೀನು ರೈತರಿಂದ ಸ್ವಾಧೀನಪಡಿಸಿಕೊಳ್ಳಲಾಯಿತು. ಆದರೆ, ಅನೇಕ ರೈತರಿಗೆ ಇದುವರೆಗೆ ಪರಿಹಾರ ಸಿಕ್ಕಿಲ್ಲ. ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಿ ಕೆಲ ರೈತರನ್ನು ಬೀದಿ ಪಾಲು ಮಾಡಿದ್ದರೆ, ಮತ್ತೆ ಕೆಲ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ಪಡೆಯುವಂತೆ ಹೇಳಲಾಗುತ್ತಿದೆ ಎಂದು ದೂರಿದರು.
ಬೆಂಗಳೂರಿಗೆ ಸಮೀಪವಿರುವ ಚಿಕ್ಕಬಳ್ಳಾಪುರದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಈ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ರೈತರೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರವನ್ನು ನೀಡುವುದಾಗಿ ಬೈಪಾಸ್ ರಸ್ತೆ ನಿರ್ಮಾಣ ಸಂದರ್ಭ ತಿಳಿಸಿದ್ದರು. ನಂತರ ಕಾಮಗಾರಿ ಅರ್ಧ ನಡೆಯುತ್ತಿದ್ದ ವೇಳೆ ಅವೈಜ್ಞಾನಿಕವಾಗಿ ಕೆಲ ರೈತರಿಗೆ ಪರಿಹಾರ ಹಣ ನೀಡಲು ಮುಂದಾದಾಗ ರೈತರು ಪ್ರತಿಭಟನೆ ನಡೆಸಿದ್ದರು. ಕಾಮಗಾರಿ ನಡೆಸಲು ಬಿಡುವುದಿಲ್ಲ. ಮೊದಲು ನಮಗೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದ್ದರು. ಆಗ ಶಾಸಕರಾಗಿದ್ದ ತಾವು ಮತ್ತು ಹಿಂದಿನ ಜಿಲ್ಲಾಧಿಕಾರಿ ಅನ್ವರ್ ಪಾಷ್ ಅವರು, ರೈತರಿಗೆ ಸೂಕ್ತ ಪರಿಹಾರದ ಹಣ ಕೊಡಿಸುವ ಭರವಸೆಯನ್ನು ನೀಡಿದ್ದೆವು. ಅದರಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಲಾ ಎಕರೆಗೆ 20 ಲಕ್ಷ ನೀಡಬೇಕೆಂದು ಒಪ್ಪಿಕೊಂಡಿತ್ತು. ಇದರಿಂದ ರೈತರು ಕಾಮಗಾರಿಯನ್ನು ನಡೆಸಲು ಅವಕಾಶ ಮಾಡಿ ಕೊಟ್ಟಿದ್ದರು. ಆದರೆ, ರಸ್ತೆ ನಿರ್ಮಾಣವಾದ ನಂತರ ಹೆದ್ದಾರಿ ಪ್ರಾಧಿಕಾರ ತಕರಾರು ತೆಗೆಯುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತಿದೆ. ಇದೀಗ ಎಕರೆ 5 ಲಕ್ಷ ಕೊಡುತ್ತೇವೆ ಎಂದರೆ ಹೇಗೆ?ಈ ಹಣಕ್ಕೆ ಈಗ ನಿವೇಶನ ಸಹ ಸಿಗುತ್ತಿಲ್ಲ. ಇನ್ನೂ ಭೂಮಿ ಕಳೆದುಕೊಂಡಿರುವ ರೈತರು ಪುನಹ ಬೇರೆ ಕಡೆ ಕೃಷಿ ಭೂಮಿ ಹೇಗೆ ಕೊಂಡುಕೊಳ್ಳಲು ಸಾಧ್ಯ? ಈ ಹಿನ್ನೆಲೆಯಲ್ಲಿ ತ್ವರಿತವಾಗಿ ಸೂಕ್ತ ಪರಿಹಾರ ನೀಡಬೇಕೆಂದು ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ವಿಶಾಲ್, ಹಿಂದಿನ ತೀರ್ಮಾನದಂತೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಎಕರೆಗೆ ತಲಾ 20 ಲಕ್ಷ ನೀಡಲು ಆದೇಶ ಕೊಟ್ಟರೂ ಸಹ ಪ್ರಾಧಿಕಾರದವರು ಮೇಲ್ಮನವಿ ಸಲ್ಲಿಸಿ ನ್ಯಾಯಾಲಯಕ್ಕೆ ಹೋಗುತ್ತಾರೆ. ಇದರಿಂದ ರೈತರು ಅನವಶ್ಯಕವಾಗಿ ಅಲೆದಾಡಬೇಕಾಗುತ್ತದೆ. ದೀರ್ಘಾವಧಿ ಸಮಯ ಕಾಯಬೇಕಾಗುತ್ತದೆ. ಈ ನಿಟ್ಟಿನಲ್ಲಿ ರೈತರು ಸರ್ವಾನುಮತದ ತೀರ್ಮಾನ ಕೈಗೊಂಡು ತಮ್ಮ ಪಟ್ಟನ್ನು ಸಡಿಲಿಸಿ ಸೂಕ್ತ ಪರಿಹಾರ ಪಡೆಯಬೇಕೆಂದು ತಿಳಿಸಿದರು.
ರೈತ ಮುಖಂಡ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ಬಂದ ಆದೇಶದ ವಿರುದ್ಧ ಪ್ರಾಧಿಕಾರ ಮೇಲ್ಮನವಿ ಸಲ್ಲಿಸಿದರೆ, ರೈತರು ನೇರವಾಗಿ ನ್ಯಾಯಾಲಯದಲ್ಲಿ ಹೋರಾಡುತ್ತಾರೆ. ಆದರೆ, ಅಲ್ಪ ಪರಿಹಾರ ಪಡೆದು ಆರ್ಥಿಕ ನಷ್ಟ ಅನುಭವಿಸಲು ಸಿದ್ಧರಿಲ್ಲ ಎಂದರು.
ಆಗ ಜಿಲ್ಲಾಧಿಕಾರಿ ವಿಶಾಲ್ ಮಾತನಾಡಿ, ಒಂದು ವಾರ ಕಾಲ ಗಡುವು ನೀಡುತ್ತಿದ್ದು ಚರ್ಚೆ ನಡೆಸಿದ ರೈತರು ತಮ್ಮ ಅಂತಿಮ ತೀರ್ಮಾನ ತಿಳಿಸಿದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ರೈತ ಮುಖಂಡರು, ಸಂತ್ರಸ್ತ ರೈತರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

