ಚರ್ಚೆಗೆ ಗ್ರಾಸವಾದ ಜಿಪಂ ಅಧ್ಯಕ್ಷೆ ಕಾತುರ
ಕ.ಪ್ರ.ವಾರ್ತೆ ಕೋಲಾರ ಆ. 13
ಜಿಲ್ಲೆಯಲ್ಲಿ ಜವಳಿ ಇಲಾಖೆಯಿಂದ ಆಗಿರುವ ಸಾಧನೆ ತಿಳಿಯಲು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಚೌಡೇಶ್ವರಿ ರಾಮಚಂದ್ರ ತೋರಿದ ಆಸಕ್ತಿ ಮತ್ತು ಕಾತುರ ಚರ್ಚೆಗೆ ಗ್ರಾಸವಾಗಿದೆ.
ಜಿಪಂ ಸಭಾಂಗಣದಲ್ಲಿ ಮಂಗಳವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಜೆಂಡಾ ಪ್ರಕಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಬೇಕಾಗಿದ್ದ ಅಧ್ಯಕ್ಷರು ನೀರಾವರಿ, ಜಲ ಸಂವರ್ಧನೆ ಹಾಗೂ ಆಹಾರ ಇಲಾಖೆಗಳ ಪ್ರಗತಿ ಪರಿಶೀಲನೆ ನಂತರ ಇದ್ದಕ್ಕಿದ್ದಂತೆ ವಿಷಯ 36ರಲ್ಲಿದ್ದ ಕೈಮಗ್ಗ ಮತ್ತು ಜವಳಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ್ದು ಇದಕ್ಕೆ ಕಾರಣವಾಗಿದೆ.
ಕಳೆದ ವರ್ಷ ಅ.1ರಂದು ಜಿ.ಪಂ ಅಧ್ಯಕ್ಷರಾಗಿ ಆಯ್ಕೆಯಾದ ಮೇಲೆ ಅನೇಕ ಕೆಡಿಪಿ ಸಭೆಗಳನ್ನು ನಡೆಸಿರುವ ಚೌಡೇಶ್ವರಿ ಕೈಮಗ್ಗ ಮತ್ತು ಜವಳಿ ಇಲಾಖೆಯ ತಂಟೆಗೆ ಹೋಗದೆ ಸುಮ್ಮನಾಗಿದ್ದರು.
ಕೋಲಾರ ಶಾಸಕ ವರ್ತೂರ್ ಪ್ರಕಾಶ್ ತಮ್ಮ ಮೊದಲ ಅವಧಿಯಲ್ಲಿ ಇದೇ ಇಲಾಖೆಯ ಸಚಿವರೂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಚೌಡೇಶ್ವರಿ ಇಲಾಖೆಯ ಸಾಧನೆ, ಪ್ರಗತಿ ವಿಚಾರಿಸಿರಲಿಲ್ಲ.
ವರ್ತೂರ್ ಬಣದಿಂದ ಜಿಪಂ ಸದಸ್ಯೆಯಾಗಿ ನಂತರ 2012ರ ಅಕ್ಟೋಬರ್ 1ರಂದು ಜೆಡಿಎಸ್ ಸೇರಿ ಜಿಪಂ ಅಧ್ಯಕ್ಷೆಯಾದ ನಂತರವೂ ಜವಳಿ ಇಲಾಖೆಯ ಬಗ್ಗೆ ಚಕಾರ ಎತ್ತಿರಲಿಲ್ಲ. ವರ್ತೂರ್ ಪ್ರಕಾಶ್ ಎರಡನೇ ಬಾರಿಗೆ ಶಾಸಕರಾದ ಮೇಲೂ ಒಂದೆರೆಡು ಕೆಡಿಪಿ ಸಭೆಗಳು ನಡೆದಾಗಲೂ ಜವಳಿ ಇಲಾಖೆಯ ಬಗ್ಗೆ ಮಾತನಾಡದಿದ್ದ ಚೌಡೇಶ್ವರಿ ಅವರು, ಒಪ್ಪಂದ ಪ್ರಕಾರ ಜಿ.ಪಂ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಇದು ಅಂಗೀಕಾರಕ್ಕೆ ಇನ್ನು ಕೆಲ ದಿನ ಬೇಕಾಗಿರುವಾಗಲೇ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಜವಳಿ ಇಲಾಖೆಯ ಸಾಧನೆ ತಿಳಿಯುವುದಕ್ಕೆ ತೋರಿದ ಉತ್ಸಾಹ, ಕಾತುರ ಎಲ್ಲರ ಗಮನ ಸೆಳೆಯಿತು.
ಪಕ್ಕಾ ಲೆಕ್ಕ ನೀಡಿ: 2012-13ನೇ ಸಾಲಿನಲ್ಲಿ ಜವಳಿ ಇಲಾಖೆಯಿಂದ ಕೈಮಗ್ಗ ಅಭಿವೃದ್ಧಿಗೆ ಖರ್ಚು ಮಾಡಿರುವ ಅನುದಾನ, ಅನುಷ್ಟಾನಗೊಂಡ ಕಾರ್ಯಕ್ರಮಗಳ ಕುರಿತು ಅಧಿಕಾರಿಯಿಂದ ಮಾಹಿತಿ ಕೇಳಿದರು. ಕೈಮಗ್ಗ ಯೋಜನೆಯನ್ನು ಯಾವ ರೀತಿ ಅನುಷ್ಠಾನಗೊಳಿಸಿದ್ದೀರಾ, ಎಷ್ಟು ಹಣ ಸರ್ಕಾರದಿಂದ ಬಿಡುಗಡೆ ಆಗಿತ್ತು ಎಂದು ಲೆಕ್ಕ ಕೇಳಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಕೈಮಗ್ಗ ಅಭಿವೃದ್ಧಿಗೆ 27 ಲಕ್ಷ ಖರ್ಚು ಮಾಡಲಾಗಿದೆ ಎಂದ ಕೂಡಲೇ ಹೀಗಿದ್ದರೆ ಪಕ್ಕಾ ಲೆಕ್ಕ ನೀಡಿ ಎಂದು ತಾಕೀತು ಮಾಡಿದರು.
ಮಾಹಿತಿ ಇಲ್ಲದೆ ತಮಗೆ ತಿಳಿದಷ್ಟು ಉತ್ತರ ನೀಡಿದ ಅಧಿಕಾರಿ ಸಮಗ್ರ ಮಾಹಿತಿ ತಲುಪಿಸುವುದಾಗಿ ಹೇಳಿದಾಗ, ಇಲಾಖೆಯಿಂದ ಕಳೆದ ಎರಡು ವರ್ಷಗಳಲ್ಲಿ ಆಗಿರುವ ಸಾಧನೆ, ಪ್ರಗತಿಯ ವರದಿಯೊಂದಿಗೆ ತಮ್ಮ ಕಚೇರಿಗೆ ಬಂದು ಚರ್ಚಿಸಿ ಎಂದು ಸೂಚಿಸಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

