ತಿಗಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಪೂರ್ವಭಾವಿ ಸಭೆ
ಮಧುಗಿರಿ: ತಾಲೂಕು ತಿಗಳರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಆ.28 ರಂದು ತಿಗಳ ಜನಾಂಗದ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಹಾಗೂ ಮಧುಗಿರಿ ಕ್ಷೇತ್ರದ ಶಾಸಕ ಕೆ.ಎನ್.ರಾಜಣ್ಣ ಅವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಹಮ್ಮಿಕೊಳ್ಳುವ ಬಗ್ಗೆ ಆ.19 ರ ಸೋಮವಾರ 12 ಗಂಟೆಗೆ ರಾಜ್ಯ ತಿಗಳರ ಸಂಘದ ಗೌರವಾಧ್ಯಕ್ಷ ರೇವಣ್ಣಸಿದ್ದಯ್ಯ ಅವರ ಅಧ್ಯಕ್ಷತೆಯಲ್ಲಿ ಮಧುಗಿರಿ ಪಟ್ಟಣದ ಮಾಲಿಮರಿಯಪ್ಪ ರಂಗಮಂದಿರದಲ್ಲಿ ಪೂರ್ವ ಭಾವಿ ಸಭೆ ಕರೆಯಲಾಗಿದೆ. ತಾಲೂಕಿನ ಎಲ್ಲ ತಿಗಳ ಜನಾಂಗದ ಮುಖಂಡರು, ಕಾರ್ಯಕರ್ತರು ಈ ಸಭೆಗೆ ಆಗಮಿಸಿ ತಮ್ಮ ಸಲಹೆ ಸೂಚನೆ ನೀಡಿ ಸಭೆಯನ್ನು ಯಶಸ್ವಿಗೊಳಿಸಬೇಕು ಎಂದು ಅಧ್ಯಕ್ಷ ಎಚ್.ಟಿ. ರಾಮಕೃಷ್ಣಯ್ಯ ಮನವಿ ಮಾಡಿದ್ದಾರೆ.
ಮಾರುಗೊಂಡನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ
ತಿಪಟೂರು: ತಾಲೂಕಿನ ಕಸಬಾ ಹೋಬಳಿ ಮಾರುಗೊಂಡನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 67ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಗ್ರಾ.ಪಂ. ಸದಸ್ಯರಾದ ದಾಸಪ್ಪ ಧ್ವಜಾರೋಹಣ ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ ಅಧ್ಯಕ್ಷ ಕುಮಾರಯ್ಯ ವಹಿಸಿದ್ದರು. ಮಾಜಿ ಗ್ರಾ.ಪಂ ಸದಸ್ಯ ಕುಮಾರಯ್ಯ, ಬಸವೇಗೌಡರು, ಎಂ.ಜಿ. ರವೀಶ್, ಲೋಕೇಶ್, ಚಿಕ್ಕಣ್ಣ ಹಾಗೂ ಸ್ತ್ರೀಶಕ್ತಿ ಸಂಘಗಳ ಸದಸ್ಯರುಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಓಬಯ್ಯ ಇವರನ್ನು ಸನ್ಮಾನಿಸಲಾಯಿತು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಆಟೋಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಮುಖ್ಯ ಶಿಕ್ಷಕ ಬಿ.ಎಸ್. ಲಿಂಗರಾಜು ಸ್ವಾಗತಿಸಿ, ಸಹ ಶಿಕ್ಷಕ ಹನುಮಪ್ಪ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಎನ್.ಡಿ.ಶಮಂತ ವಂದಿಸಿದರು.
ಹಾವು ಕಚ್ಚಿ ಯುವಕನ ಸಾವು
ತುರುವೇಕೆರೆ: ಹೊಲದಲ್ಲಿ ಬಿತ್ತನೆ ಕಾರ್ಯ ಮಾಡುತ್ತಿದ್ದ ಯುವಕನೋರ್ವನಿಗೆ ವಿಷಪೂರಿತ ಹಾವು ಕಡಿದ ಪರಿಣಾಮ ದುರ್ಮರಣಕ್ಕೀಡಾದ ಘಟನೆ ಸಮೀಪದ ಹಳ್ಳದ ಹೊಸಳ್ಳಿಯಲ್ಲಿ ನಡೆದಿದೆ. ತಮ್ಮ ಕುಟುಂಬದ ಸದಸ್ಯರೊಂದಿಗೆ ರಾಗಿ ಬೇಸಾಯ ಮಾಡುತ್ತಿದ್ದ ಹಳ್ಳದ ಹೊಸಳ್ಳಿಯ ಯುವಕ ಸತೀಶ್ (18) ನಿಗೆ ವಿಷ ಪೂರಿತ ಹಾವು ಕಡಿದಿದೆ. ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ತರುವ ಮಾರ್ಗ ಮಧ್ಯೆ ಸತೀಶ್ ಕೊನೆಯುಸಿರೆಳೆದನೆಂದು ತಿಳಿದುಬಂದಿದೆ. ಜಿಲ್ಲಾ ಪಂಚಾಯ್ತಿಯ ಆರೋಗ್ಯ ಹಾಗೂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಿ.ಜಗದೀಶ್ ಮೃತನ ಮನೆಗೆ ತೆರಳಿ ಸಾಂತ್ವನ ಹೇಳಿದರು. ಕೃಷಿ ಇಲಾಖಾ ವತಿಯಿಂದ ದೊರೆಯುವ ಪರಿಹಾರವನ್ನು ಶೀಘ್ರದಲ್ಲೇ ದೊರಕಿಸಿಕೊಡುವ ಭರವಸೆ ನೀಡಿದರು.
'ಖಾತ್ರಿ'ಯಿಂದ ಗ್ರಾಮದ ಅಭಿವೃದ್ಧಿ
ತುರುವೇಕೆರೆ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಕಾಮಗಾರಿಗಳನ್ನು ತಮ್ಮ ಗ್ರಾಮಗಳಲ್ಲಿ ಮಾಡುವುದರಿಂದ ಪ್ರತಿ ಗ್ರಾಮಗಳೂ ಸರ್ವ ವಿವಿಧ ಅಭಿವೃಧ್ಧಿಯನ್ನು ಕಾಣಬಹುದಾಗಿದೆ ಎಂದು ಮಾಯಸಂದ್ರ ಕ್ಷೇತ್ರದ ಜಿಲ್ಲಾ ಪಂಚಾಯ್ತಿ ಸದಸ್ಯ ಶ್ರೀನಿವಾಸ್ ಅಭಿಪ್ರಾಯಪಟ್ಟರು. ತಾಲೂಕಿನ ಶೆಟ್ಟಿಗೊಂಡನಹಳ್ಳಿ ಗ್ರಾಮ ಪಂಚಾಯ್ತಿ ವತಿಯಿಂದ ನಡೆದ ಗ್ರಾಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಉದ್ಯೋಗ ಖಾತ್ರಿ ಯೋಜನೆ ಬಡ ಜನರಿಗೆ ಜೀವನೋಪಾಯ ಮಾಡಲು ಹಾದಿ ಮಾಡಿಕೊಟ್ಟಿದೆ. ಗ್ರಾಮದ ಜನತೆಯೇ ತಮ್ಮ ಗ್ರಾಮಗಳಲ್ಲಿ ಅಗತ್ಯವಿರುವ ಸಮುದಾಯ ಭವನ, ಕೆರೆ ಕಟ್ಟೆಗಳ ನಿರ್ಮಾಣ, ರಸ್ತೆ, ಚರಂಡಿ, ಅಂಗನವಾಡಿ ಕಟ್ಟಡಗಳು, ಮನೆಗಳ ನಿರ್ಮಾಣ ಮೊದಲಾದ ಕಾಮಗಾರಿಗಳನ್ನು ಮಾಡಿಕೊಳ್ಳಲು ಸಹಾಯಕವಾಗಲಿದೆ. ಇದರ ಸದ್ಬಳಕೆ ಮಾಡಿಕೊಳ್ಳುವುದು ಮುಖ್ಯವಾಗಿದೆ ಎಂದರು. ಗ್ರಾಮ ಪಂಚಾಯ್ತಿ ಸದಸ್ಯರಾದ ಎಲ್.ಎನ್.ರಾಜಣ್ಣ, ಬಿಇಓ ರಂಗಧಾಮಯ್ಯ, ಬಿಆರ್ಸಿ ಚಂದ್ರಯ್ಯ, ಸಿಡಿಪಿಓ ರಾಜೇಂದ್ರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಶಿವಣ್ಣ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಆಗಮಿಸಿದ್ದರು. ಗ್ರಾಮ ಪಂಚಾಯ್ತಿ ಅಧ್ಯಕ್ಷೆ ದೇವೀರಮ್ಮ ಅಧ್ಯಕ್ಷತೆಯನ್ನು ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

