ಕೋಲಾರ

ಸಹಾಯದ ನೆಪದಲ್ಲಿ ಎಟಿಎಂನಲ್ಲಿ ಹಣ ದೋಚಿದ ದುಷ್ಕರ್ಮಿ

Published On :

ಚಿಕ್ಕಬಳ್ಳಾಪುರ: ದಿನದ 24 ಗಂಟೆ ಹಣವನ್ನು ನೀಡುವ ಎಟಿಎಂ ಕೇಂದ್ರಗಳಲ್ಲಿ ಅಪರಿಚಿತರು ಮೋಸ ಮಾಡುವುದರ ವಿರುದ್ಧ ಜಾಗ್ರತೆಯಿಂದಿರುವ ಬಗ್ಗೆ ಬ್ಯಾಂಕುಗಳು ನಾನಾ ರೀತಿಯಲ್ಲಿ ಅರಿವು ಮೂಡಿಸುತ್ತಿದ್ದರೂ ಆಗಾಗ ಗ್ರಾಹಕರು ಮೋಸ ಹೋಗುತ್ತಲೇ ಇದ್ದಾರೆ. ಚಿಕ್ಕಬಳ್ಳಾಪುರ ಶಾಖೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆಯ ಎಟಿಎಂ ಕೇಂದ್ರದಿಂದ ಹಣ ಡ್ರಾ ಮಾಡಿಕೊಡಲು ಸಹಾಯ ಕೇಳಿ ತಮ್ಮ ಎಟಿಎಂ ಕಾರ್ಡು ಕೊಟ್ಟು ರೈತರೊಬ್ಬರು ಹಣವನ್ನು ಕಳೆದುಕೊಂಡಿದ್ದಾರೆ. ಇದೀಗ ನಗರ ಪೊಲೀಸ್ ಠಾಣೆಗೆ ದೂರು ದಾಖಲಿಸಿ ತಮ್ಮ ಖಾತೆಯಿಂದ ಅಕ್ರಮವಾಗಿ ಹಣವನ್ನು ಡ್ರಾ ಮಾಡಿಕೊಂಡಿರುವ ಆರೋಪಿಯನ್ನು ಬಂಧಿಸಿ ತಮ್ಮ ಹಣವನ್ನು ತಮಗೆ ವಾಪಸ್ ಕೊಡಿಸಬೇಕೆಂದು ಒತ್ತಾಯಿಸಿದ್ದಾರೆ.
ಘಟನೆಯ ಹಿನ್ನೆಲೆ: ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ ಹಳೆಗುಡಿಬಂಡೆ ಗ್ರಾಮದ ರೈತ ನಾರಾಯಣಪ್ಪ ( 68 ವರ್ಷ) ಕಳೆದ ಎರಡ್ಮೂರು ದಿನಗಳ ಹಿಂದೆ ಜಿಲ್ಲಾ ಕೇಂದ್ರದಲ್ಲಿನ ಚಿಕ್ಕಬಳ್ಳಾಪುರ ಶಾಖೆಯ  ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಟಿಎಂ ಕೇಂದ್ರಕ್ಕೆ ತೆರಳಿ ತಮ್ಮ ಎಟಿಎಂ ಕಾರ್ಡಿನಿಂದ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ, ಗೊಂದಲಕ್ಕೀಡಾದ ಅವರ ಕೈಯಲ್ಲಿ ಹಣವನ್ನು ಡ್ರಾ ಮಾಡಲು ಆಗಿಲ್ಲ. ಇದರಿಂದ ಆಗ ಎಟಿಎಂ ಕೇಂದ್ರಕ್ಕೆ ಬಂದಿದ್ದ ಅಪರಿಚಿತ ಯುವಕನೊಬ್ಬನಿಗೆ ಹಣ ಡ್ರಾ ಮಾಡಲು ಸಹಾಯ ಕೇಳಿದ್ದಾರೆ. ಜತೆಗೆ ತಮ್ಮ ಎಟಿಎಂ ಕಾರ್ಡ್ನ್ನು ಸಹ ಕೊಟ್ಟಿದ್ದಾರೆ. ಅಪರಿಚಿತ ವ್ಯಕ್ತಿ ಹಣವನ್ನು ಡ್ರಾ ಮಾಡಿ ಕೊಡುವುದರ ಬಗ್ಗೆ ವಿವರಣೆಯನ್ನು ನೀಡುತ್ತ 2 ಸಾವಿರ ರು. ಡ್ರಾ ಮಾಡಿದ್ದಾನೆ. ಕೈಗೆ ಹಣ ಮತ್ತು ರಸೀದಿ ಕೊಡುವ ಸಂದರ್ಭದಲ್ಲಿ ಅವರ ಎಟಿಎಂ ಕಾರ್ಡಿಗೆ ಬದಲಿಗೆ ತನ್ನ ಕೈಯಲ್ಲಿದ್ದ ಯಾವುದೋ ಒಂದು ಕಾರ್ಡನ್ನು ಕೊಟ್ಟಿದ್ದಾನೆ. ಇದು ಅರಿವಿಗೆ ಬಾರದೇ 2 ಸಾವಿರ ರು. ಮತ್ತು ಕಾರ್ಡ್ನ್ನು ಪಡೆದುಕೊಂಡು ನಾರಾಯಣಪ್ಪ ತಮ್ಮ ಊರಿಗೆ ವಾಪಸಾಗಿದ್ದಾರೆ. ಮಾರನೇ ದಿನ ಮತ್ತೆ ನಾರಾಯಣಪ್ಪರವರು ಹಣವನ್ನು ಡ್ರಾ ಮಾಡಲು ಹೋದಾಗ ತಮ್ಮ ಕಾರ್ಡ್ ಬದಲಾವಣೆಯಾಗಿರುವುದು ಕಂಡು ಬಂದಿದೆ. ತಕ್ಷಣ ತಮ್ಮ ನೆಂಟರ ಜತೆ ಹೋಗಿ ತಮ್ಮ ಖಾತೆ ಇರುವ ಗುಡಿಬಂಡೆಯ  ಬ್ಯಾಂಕಿನಲ್ಲಿ ವಿಚಾರಣೆ ನಡೆಸಿದ್ದು ಆಗ ಬ್ಯಾಂಕಿನ ಅಧಿಕಾರಿಗಳು 26 ಸಾವಿರ ರು. ಡ್ರಾ ಆಗಿದ್ದು, ಇದೀಗ ನಿಮ್ಮ ಖಾತೆಯಲ್ಲಿ ಹಣವಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ನಾರಾಯಣಪ್ಪ ಚಿಕ್ಕಬಳ್ಳಾಪುರಕ್ಕೆ ಬಂದು ಮೋಸ ಹೋದ ಎಟಿಎಂ ಕೇಂದ್ರದ ಬ್ಯಾಂಕಿನ ಗಮನಕ್ಕೆ ತಂದಿದ್ದಾರೆ. ಬ್ಯಾಂಕಿನ ಅಧಿಕಾರಿಗಳ ಸಲಹೆಯಂತೆ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೀಗ ಪೊಲೀಸರು ಎಟಿಎಂ ಕೇಂದ್ರದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾವನ್ನು ವೀಕ್ಷಿಸಿ, ನಾರಾಯಣಪ್ಪರವರಿಂದ ಎಟಿಎಂ ಕಾರ್ಡನ್ನು ಪಡೆದುಕೊಂಡ ದೃಶ್ಯದಲ್ಲಿ ಅಪರಿಚಿತ ವ್ಯಕ್ತಿಯ ಭಾವಚಿತ್ರವನ್ನು ಸಂಗ್ರಹಿಸಿದ್ದು ಆರೋಪಿ ಪತ್ತೆಗ ಬಲೆ ಬೀಸಿದ್ದಾರೆ.
ಜಾಗ್ರತೆ ಇರಲಿ:  ಎಟಿಎಂ ಕಾರ್ಡನ್ನು ಯಾರೇ ಆಗಲಿ ಅಪರಿಚಿತರ ಕೈಗೆ ನೀಡಬಾರದು. ರಹಸ್ಯ ಸಂಖ್ಯೆಯನ್ನೂ ತಿಳಿಸಬಾರದು. ಒಂದು ವೇಳೆ ಮಾಹಿತಿಯನ್ನು ನೀಡಿದಾಗ ದುಷ್ಕರ್ಮಿಗಳು ಸುಲಭವಾಗಿ ದುರುಪಯೋಗಪಡಿಸಿಕೊಂಡು ಹಣವನ್ನು ಲಪಟಾಯಿಸುವ ಅವಕಾಶಗಳು ಹೆಚ್ಚಿಗೆ ಇರುತ್ತವೆ. ಅಲ್ಲದೇ ಎಟಿಎಂ ಕೇಂದ್ರದಲ್ಲಿ  ಗೌಪ್ಯತೆಯಲ್ಲಿ ಹಣವನ್ನು ಡ್ರಾ ಮಾಡಬೇಕು. ಅಲ್ಲದೇ ಹಣ ಡ್ರಾ ಮಾಡುವ ಕಾರ್ಯ ಪೂರ್ಣವಾಗುವವರೆಗೂ ಇರಬೇಕು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.